December 31, 2013

‘ಸ್ಕೂಲ್ ಬ್ರಾಂಡಿಂಗ್’

‘ಸ್ಕೂಲ್ ಬ್ರಾಂಡಿಂಗ್’
ನಿಮ್ಮದು ಬ್ರಾಂಡೆಡ್ ಶಾಲೆಯಾ? ಹಾಗಾದರೆ ಯಾವ ಕ್ಷೇತ್ರದಲ್ಲಿ ಬ್ರಾಂಡೆಡ್ ಆಗಿದೆ? ಈ ಬಗ್ಗೆ ನೀವೇನಾದರೂ ಯೋಚಿಸಿದ್ದೀರಾ? ಹೌದಾದರೆ ಇಲ್ಲಿನ ಪರಿಕಲ್ಪನೆಯೊಂದಿಗೆ ನಿಮ್ಮ ಶಾಲೆಯನ್ನು ಹೋಲಿಸಿ ನೋಡಿ. ಇಲ್ಲವಾದರೆ ನಿಮ್ಮ ಶಾಲೆಯನ್ನು ಬ್ರಾಂಡೆಡ್ ಶಾಲೆಯನ್ನಾಗಿಸಲು ಪ್ರಯತ್ನಿಸಿ.
ಒಬ್ಬ ವ್ಯಕ್ತಿಯಾಗಲೀ, ಸಂಘಸಂಸ್ಥೆಯಾಗಲೀ, ಕಂಪನಿಯಾಗಲೀ, ಶಾಲೆಯಾಗಲೀ ಯಾವುದಾದರೂ ಒಂದು ಕ್ಷೇತ್ರದಲ್ಲಿ ವಿಶಿಷ್ಠ ಹಾಗೂ ವಿಶೇಷ  ಸಾಧನೆಯನ್ನು ಮಾಡಿದ್ದರೆ, ಅದನ್ನು ಆ ಕ್ಷೇತ್ರದ ಸಮುದಾಯ ಗುರುತಿಸಿದ್ದರೆ ಅಂತಹ ವ್ಯಕ್ತಿ/ಸಂಸ್ಥೆ/ಕಂಪನಿ/ಶಾಲೆಯನ್ನು ‘ಬ್ರಾಂಡೆಡ್’ ಎಂದು ಕರೆಯಲಾಗುತ್ತದೆ. 
ಈ ಪರಿಕಲ್ಪನೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ನಮ್ಮ ಬಹುತೇಕ ಸರಕಾರಿ ಶಾಲೆಗಳು ಒಂದಿಲ್ಲೊಂದು ಕ್ಷೇತ್ರದಲ್ಲಿ ವಿಶಿಷ್ಠ ಹಾಗೂ ವಿಶೇಷ ಸಾಧನೆಯನ್ನು ಮಾಡಿವೆ. ಆದರೆ ಅವುಗಳನ್ನು ಅರ್ಥೈಸಿಕೊಳ್ಳುವಲ್ಲಿಯಾಗಲೀ, ಗುರುತಿಸುವಿಕೆಯಲ್ಲಿಯಾಗಲೀ, ದಾಖಲೀಕರಣ ಮಾಡುವಿಕೆÉಯಲ್ಲಿಯಾಗಲೀ ಆದ ಲೋಪಗಳಿಂದ ಆ ಶಾಲೆ ‘ಬ್ರಾಂಡೆಡ್’ ಆಗಿ ಹೊರಹೊಮ್ಮಲು ವಿಫ¯ವಾಗಿರುತ್ತವೆ.
ಕೆಲವು ಶಾಲೆಗಳು ತಮ್ಮ ವಿಶಿಷ್ಠ ಹಾಗೂ ವಿಶೇಷ ಸೇವೆಗಳಿಂದ ‘ಬ್ರಾಂಡೆಡ್’ ಆಗಿರುತ್ತವೆ. ಕಲಿಕೆ ಮತ್ತು ಕಲಿಕಾ ಪೂರಕ ವಾತಾವರಣ ನಿರ್ಮಾಣದಲ್ಲಾಗಲೀ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈಯಕ್ತಿಕ ಗಮನ ನೀಡುವಲ್ಲಿಯಾಗಲೀ, ಸಾಂಸ್ಕøತಿಕ ಕಾರ್ಯಕ್ರಮ ಸಂಘಟನೆ ಮತ್ತು ನಿರ್ವಹಣೆಯಲ್ಲಾಗಲೀ, ಸಮಾಜಮುಖಿ ಚಟುವಟಿಕೆಯಲ್ಲಾಗಲೀ, ಶಾಲಾ ಆಡಳಿತ ಮತ್ತು ದಾಖಲೀಕರಣದಲ್ಲಾಗಲೀ ಅಥವಾ ಒಟ್ಟಾರೆ ಸಮಗ್ರ ಶಾಲಾ ಗುಣಮಟ್ಟದಲ್ಲಾಗಲೀ ವಿಶಿಷ್ಠ ಮತ್ತು ವಿಶೇಷ ಸಾಧನೆ ಮಾಡಿದ್ದರೆ ಅಂತಹ ಶಾಲೆಗಳನ್ನು ‘ಬ್ರಾಂಡೆಡ್ ಶಾಲೆ’ಗಳೆನ್ನುವರು. 
ಸ್ಕೂಲ್ ಬ್ರಾಂಡಿಂಗ್ ಸಾಧಿಸಲು ದಶ ಸೂತ್ರಗಳು
1. ಶಾಲೆಗೊಂದು ಧ್ಯೇಯವಾಕ್ಯವಿರಲಿ : ಶಾಲಾ ಆಡಳಿತ ಮಂಡಳಿ, ಮುಖ್ಯಗುರುಗಳು ಹಾಗೂ ಶಿಕ್ಷಕರು ಸೇರಿ ಶಾಲೆ ಸಾಧಿಸಬೇಕಾದ ಕ್ಷೇತ್ರಗಳನ್ನು ಗುರುತಿಸಿಕೊಳ್ಳಬೇಕು. ಅವುಗಳ ಆಧಾರದ ಮೇಲೆ ಧ್ಯೇಯವಾಕ್ಯವೊಂದನ್ನು ರಚಿಸಿಕೊಳ್ಳಬೇಕು. ಈ ಧ್ಯೇಯವಾಕ್ಯ/ಘೋಷವಾಕ್ಯವನ್ನು ಶಾಲೆಯಲ್ಲಿ ಎದ್ದು ಕಾಣುವಂತೆ ಆಕರ್ಷಕವಾಗಿ ಬರೆಸಬೇಕು. ಈ ಧ್ಯೇಯವಾಕ್ಯ ಶಾಲೆ ಸಾಧಿಸಬೇಕಾದ ಗುರಿ ಉದ್ದೇಶಗಳನ್ನು ಈಡೇರಿಸುವಂತಿರಬೇಕು. 
ಮಾದರಿ ಧ್ಯೇಯವಾಕ್ಯಗಳು : 
‘ನಿಮ್ಮ ಮನೆಯ ಶಿಲೆಯನ್ನು ನಮಗೆ ಕೊಡಿ, ಅದನ್ನು ಶಿಲ್ಪವನ್ನಾಗಿ ಮಾಡಿಕೊಡುತ್ತೇವೆ’.
‘ನಾವಿಲ್ಲಿ ಗೆಲುವು ಮಾತ್ರ ಕಲಿಸುವುದಿಲ್ಲ, ಸೋಲನ್ನು ಎದುರಿಸುವುದನ್ನೂ ಕಲಿಸುತ್ತೇವೆ’.
‘ನಾವಿಲ್ಲಿ ಓದಲು ಮಾತ್ರವಲ್ಲ, ಬದುಕಲೂ ಕಲಿಸುತ್ತೇವೆ’.
‘ನಿಮ್ಮ ಮಕ್ಕಳನ್ನು ನಮಗೆ ಕೊಡಿ, ನಾವದನ್ನು ಮಾಣಿಕ್ಯವನ್ನಾಗಿಸುತ್ತೇವೆ’.
2. ಶಾಲೆಗೆ ದೂರದೃಷ್ಟಿ ಯೋಜನೆಯಿರಲಿ : ಶಾಲೆ ಸಾಧಿಸಬೇಕಾದ ಗುರಿಯನ್ನು ತಲುಪಲು ದೂರದೃಷ್ಟಿ ಯೋಜನೆಯೊಂದನ್ನು ಹಾಗೂ ಅದನ್ನು ಸಾಧಿಸುವ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಿ. ಯೋಜನೆಯನ್ವಯ ಕಾರ್ಯ ಚಟುವಟಿಕೆಗಳು ನಡೆಯಲಿ. ಸಮುದಾಯ ಶಾಲೆಯಿಂದ ನಿರೀಕ್ಷಿಸಬಹುದಾದ ಗುಣಾತ್ಮಕತೆಯನ್ನು ಈ ದೂರದೃಷ್ಟಿ ಯೋಜನೆ ಸೂಚಿಸುವಂತಿರಲಿ.
ಉದಾ : * ಈ ಶೈಕ್ಷಣಿಕ ವರ್ಷದಲ್ಲಿ ಶೇ.100 ರಷ್ಟು ದಾಖಲಾತಿ ಮತ್ತು ಹಾಜರಾತಿ ಕಾಪಾಡಿಕೊಳ್ಳುವುದು.
* 2015 ಕ್ಕೆ ಶೇ.100 ರಷ್ಟು ಗುಣಮಟ್ಟದ ಶಿಕ್ಷಣ ಸಾಧಿಸುವುದು.
* 2020 ಕ್ಕೆ ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿಸುವುದು.
3. ಉತ್ತಮ ಶಾಲೆಗಳ ಅವಲೋಕನ ಮತ್ತು ಅಧ್ಯಯನ : ನಮ್ಮ ಸುತ್ತಮುತ್ತಲಿನ ಉತ್ತಮ ಸಾಧನೆ ಮಾಡಿದ ಶಾಲೆಗಳನ್ನು ಅವಲೋಕಿಸುವುದು ಮತ್ತು ಅಧ್ಯಯನ ಮಾಡುವುದು ಅತ್ಯಂತ ಪರಿಣಾಮಕಾರಿ ಆಯಾಮ. ನಮ್ಮ ಶಾಲೆಯಲ್ಲಿನ ಕೊರತೆಗಳೇನು? ಅದಕ್ಕೆ ಕಾರಣಗಳೇನು? ಇತರೆ ಶಾಲೆಗಳಲ್ಲಿ ಇದನ್ನು ಹೇಗೆ ನಿಭಾಯಿಸಿಕೊಂಡಿದ್ದಾರೆ? ಅಲ್ಲಿನ ವಿಶೇಷತೆ ಏನು? ನಾವು ನಮ್ಮ ಕೊರತೆಗಳನ್ನು ಸರಿಪಡಿಸಿಕೊಳ್ಳಲು ಇರುವ ಮಾರ್ಗೋಪಾಯಗಳೇನು? ಇತ್ಯಾದಿ ಅಂಶಗಳನ್ನು ಅವಲೋಕಿಸಿ, ಅಧ್ಯಯನ ಮಾಡಿ, ಹೊಸತನವನ್ನು ಕಂಡುಕೊಂಡಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂಬುದನ್ನು ಮನಗಾಣಬೇಕು.
4. ದಕ್ಷತೆ ಮತ್ತು ದೂರದರ್ಶಿತ್ವ : ಹಾಕಿಕೊಂಡ ಗುರಿ ಉದ್ದೇಶಗಳನ್ನು ಸಾಧಿಸಲು ದಕ್ಷರಾಗಿ ದುಡಿಯುವುದು ಅವಶ್ಯಕ. ಈಗ ನಾವೆಲ್ಲರೂ ದಕ್ಷತೆಯಿಂದಲೇ ಕಾರ್ಯ ನಿರ್ವಹಿಸುತ್ತೇವೆ. ಆದರೂ ನಮ್ಮ ಗುರಿ ತಲುಪುವಲ್ಲಿ ಹೆಚ್ಚಿನ ಕಾಳಜಿ ಹಾಗೂ ಪ್ರಾಮಾಣಿಕ ಪ್ರಯತ್ನಗಳು ಅಗತ್ಯ. ನಮ್ಮ ಕಾರ್ಯ ವೈಖರಿ ನಮ್ಮ ದೂರದರ್ಶಿತ್ವವನ್ನು ಬಿಂಬಿಸುವಂತಿರಬೇಕು. 
5. ಗುಣಮಟ್ಟದ ಅಂತಃಸತ್ವ : ತಲುಪಿದ ಗುರಿಯನ್ನು ನಿರಂತರವಾಗಿ ಕಾಪಾಡಿಕೊಂಡು ಬರಲು ಗುಣಮಟ್ಟದ ಅಂತಃಸತ್ವ ಅಗತ್ಯ. ಗುಂಪು ಚಟುವಟಿಕೆಗಳು, ಪರಿಣಾಮಕಾರಿ ಕಲಿಕೋಪಕರಣಗಳ ಬಳಕೆ, ಮಕ್ಕಳು ತಾವೇ ಸ್ವತಃ ಜ್ಞಾನ ಕಟ್ಟಿಕೊಳ್ಳಲು ಸದವಕಾಶ ನಿರ್ಮಾಣ, ಮಕ್ಕಳ ಪ್ರತಿಭೆಗಳ ಅನಾವರಣ, ಭಾವಾಭಿವ್ಯಕ್ತಿಗೆ ಅವಕಾಶ ನೀಡುವುದು ಮುಂತಾದ ಸಕ್ರಿಯಾತ್ಮಕ ಅಂಶಗಳಿಂದ ಗುಣಮಟ್ಟದ ಅಂತಃಸತ್ವ ವೃದ್ದಿಯಾಗುತ್ತದೆ.
6. ಭೌತಿಕ ಸೌಲಭ್ಯಗಳ ಸಧ್ಬಳಕೆ : ಶಾಲೆಯಲ್ಲಿನ ಭೌತಿಕ ಸೌಲಭ್ಯಗಳ ಸಧ್ಬಳಕೆ ಶಾಲೆಯ ದೂರದರ್ಶಿತ್ವವನ್ನು ಹೆಚ್ಚಿಸುತ್ತದೆ. ಶಾಲೆಗೆ ಸಾಕಷ್ಟು ಭೌತಿಕ ಸೌಲಭ್ಯಗಳು ಇರಬೇಕಾದುದು ಅಪೇಕ್ಷಣೀಯ. ಆದರೆ ಇರುವ ಭೌತಿಕ ಸೌಲಭ್ಯಗಳನ್ನೇ ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆಯನ್ನು ಪ್ರದರ್ಶಿಸಬಹುದು. ಇದರಿಂದ ಶಾಲೆಯೊಂದು ಬ್ರಾಂಡೆಡ್ ಆಗಲು ಕಾರಣವಾಗುತ್ತದೆ.
7. ಸಮುದಾಯಿಕ ಚಟುವಟುಕೆಗಳು : ಶಾಲೆಗಳು ಸಮಾಜದಿಂದ ಹೊರತಾಗಿಲ್ಲ. ಶಾಲೆಯಲ್ಲಿ ಸಮಾಜಕ್ಕೆ/ಸಮುದಾಯಕ್ಕೆ ಅನುಕೂಲವಾಗುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಾಮಾಜಿಕ ಪರಿವರ್ತನೆಯಲ್ಲಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಯಾವಾಗಲೂ ಮರೆಯುವಂತಿಲ್ಲ. ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಾದ ವಿಚಾರ ಸಂಕಿರಣ, ಚರ್ಚೆಗಳು, ಗೋಷ್ಟಿಗಳು, ಉಪನ್ಯಾಸಗಳು, ಮತ್ತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಸಮುದಾಯವನ್ನು ಶಾಲೆಗೆ ಹತ್ತಿರ ಮಾಡಿಕೊಳ್ಳಬೇಕು.
8. ಹೊಸ ಪ್ರಯೋಗಗಳು : ಆಡಳಿತ ಮತ್ತು ಬೋಧನೆಯಲ್ಲಿ ಹೊಸತನವನ್ನು ಸೃಷ್ಠ್ಠಿಸುವ ಕೆಲಸ ನಿರಂತರವಾಗಿರಬೇಕು. ಹಳೆ ವಿಧಾನಗಳಲ್ಲಿ ಕಂಡು ಕೊಂಡ ಲೋಪಗಳನ್ನು ಸರಿಪಡಿಸಿಕೊಂಡು ನಾವೀನ್ಯ ತಂತ್ರಜ್ಞಾನದೊಂದಿಗೆ ಹೊಸ ಹೊಸ ಶೈಕ್ಷಣಿಕ ಪ್ರಯೋಗಗಳನ್ನು ಕೈಗೊಳ್ಳಬೇಕು. ಇದು ಶಾಲೆ ಉತ್ತಮ ಹೆಸರು ಪಡೆಯಲು ಸಹಕಾರಿಯಾಗುತ್ತದೆ. 
9. ದಾಖಲೆಗಳ ನಿರ್ವಹಣೆ : ಇಂದು ಸರ್ಕಾರಿ ಶಾಲೆಗಳ ಬಹು ದೊಡ್ಡ ವೈಫಲ್ಯವೆಂದರೆ, ದಾಖಲೀಕರಣದ ಅಭಾವ. ಸರ್ಕಾರಿ ಶಾಲೆಗಳಲ್ಲಿನ ಉತ್ತಮಾಂಶಗಳನ್ನು ದಾಖಲೀಕರಣ ಮಾಡದೇ ಇರುವುದು ಒಂದು ಬಹು ದೊಡ್ಡ ಕೊರತೆ. ಖಾಸಗೀ ಶಾಲೆಗಳು ಮಾಡಿದ ಅಲ್ಪ ಸಾಧನೆಯನ್ನೇ ದಾಖಲೀಕರಣಗೊಳಿಸಿ, ದೊಡ್ಡದಾಗಿ ಮಾಧ್ಯಮಗಳ ಎದುರು ಜಂಭ ಕೊಚ್ಚಿಕೊಳ್ಳುತ್ತವೆ. ಸರ್ಕಾರಿ ಶಾಲೆಗಳಲ್ಲಿ ನಡೆಯುವ ಯಾವ ಚಟುವಟಿಕೆಗಳೂ ಖಾಸಗೀ ಶಾಲೆಗೆ ಸರಿಸಾಟಿಯಲ್ಲ. ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳನ್ನೂ ದಾಖಲೀಕರಣಗೊಳಿಸಿ ಹೊರ ಜಗತ್ತಿಗೆ ಬಿಂಬಿಸುವ ಕಾರ್ಯ ಮಾಡಬೇಕು.
10. ಪ್ರಚಾರ ಮತ್ತು ಪ್ರಸರಣೆ : ಸರ್ಕಾರಿ ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆ ಸರಿಯಗಿಲ್ಲದ ಕಾರಣ ಅಂತಹ ಶಾಲೆಗಳು ಪ್ರಚಾರಕ್ಕೆ ಬರದೇ ಎಲೆಮರೆಕಾಯಿಯಂತೆ ಉಳಿದಿವೆ. ನಮ್ಮ ಶಾಲೆಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ದಾಖಲೀಕರಣವಾದರೆ ಅದನ್ನು ಬಿಂಬಿಸಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಪ್ರೆಸ್‍ಮೀಟ್, ಕರಪತ್ರಗಳು, ಬ್ರೋಚರ್ಸ್, ಶಾಲಾ ಕಿರುಹೊತ್ತಗೆ, ವೀಡಿಯೋ ಚಿತ್ರೀಕರಣ ಮುಂತಾದವುಗಳ ಮೂಲಕ ಶಾಲಾ ಚಟುವಟಿಕೆಗಳನ್ನು ಪ್ರಚುರಪಡಿಸಬಹುದು. ಇದು ಶಾಲೆ ಉತ್ತಮ ಹೆಸರು ಗಳಿಸಲು ಸಹಾಯಕವಾಗುತ್ತದೆ.
ಈ ಎಲ್ಲಾ ಚಟುವಟಿಕೆಗಳ ಹೊರತಾಗಿಯೂ ಶಾಲಾ ಬ್ರಾಂಡಿಂಗ್ ಸಾಧಿಸಬಹುದು. ಅದು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುತ್ತದೆ. ಸಾಂಘಿಕ ಕೆಲಸ ಉತ್ತಮ ಯಶಸ್ಸು ತರುತ್ತದೆ. ಇದಕ್ಕೆ ಧನಾತ್ಮಕ ಚಿಂತನೆಗಳ ಅಗತ್ಯವಿದೆ. ದೂರದೃಷ್ಟಿತ್ವವನ್ನು ಸಾಕಾರಗೊಳಿಸುವ ಅದ್ಯಮ್ಯ ಚೇತನ ಸದಾ ಸ್ಫುರಿಸಬೇಕಾಗಿದೆ. ಪ್ರಯತ್ನಿಸಿ ನೋಡಿ, ಗೆಲುವು ನಿಮ್ಮದೇ!
  - ಆರ್.ಬಿ.ಗುರುಬಸವರಾಜ. 




No comments:

Post a Comment