December 31, 2013

ಶಿಕ್ಷಣದಲ್ಲಿ ಶಿಕ್ಷೆ ಬೇಕೇ? ಬೇಡವೇ?

ದಿನಾಂಕ 18-3-2014 ರಂದು 'ಪ್ರಜಾವಾಣಿ'ಯ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ಲೇಖನ.



 ಪ್ರೇಮಭಿಕ್ಷೆ ನೀಡಿ
          ಶಿಕ್ಷಣದಲ್ಲಿ ಶಿಕ್ಷೆ ಬೇಕೇ? ಬೇಡವೇ? ಎಂಬ ಬಗ್ಗೆ ಹಲವರಲ್ಲಿ ಜಿಜ್ಞಾಸೆಗಳಿವೆ. ಇದಕ್ಕೆ ಕಾರಣಗಳೂ ಸಹ ಹಲವಾರು. ಶಿಕ್ಷಣವೆನ್ನುವುದು ಒಂದು ಸಾಮಾಜೀಕರಣ ಪ್ರಕ್ರಿಯೆ. ಶಿಕ್ಷಣದ ಪ್ರತಿಯೊಬ್ಬ ಭಾಗೀದಾರರೂ ಅದರ ಮೂಲ ವಾರಸುದಾರರಿಗೆ, ಅಂದರೆ ಮಕ್ಕಳಿಗೆ ಪರಸ್ಪರ ಸಹಕಾರ, ಅನುಭವ ಹಂಚಿಕೆ, ಪ್ರೀತಿ, ಕರುಣೆ, ಸಹಬಾಳ್ವೆಯಂತಹ ಮೌಲ್ಯಯುತ ಗುಣಗಳನ್ನು ಬೆಳೆಸಬೇಕಾದುದು ಅನಿವಾರ್ಯ.              
              ತರಗತಿಯಲ್ಲಿನ ಎಲ್ಲಾ ಮಕ್ಕಳ ಕಲಿಕೆ ಒಂದೇ ರೀತಿಯಾಗಿರುವುದಿಲ್ಲ. ಪ್ರತಿಯೊಬ್ಬ ಮಗುವಿನ ಕಲಿಕೆಯ ವಿಧಾನ ಮತ್ತು ವೇಗ ವಿಭಿನ್ನ.  ಏಕೆಂದರೆ ಪ್ರತಿಯೊಂದು ಮಗುವೂ ವಿವಿಧ ಸಾಮಾಜಿಕ, ಆರ್ಥಿಕ, ಸಾಂಸೃತಿಕ ಹಿನ್ನಲೆಯಿಂದ ಬಂದಿರುತ್ತದೆ. ಅಲ್ಲದೇ ಅಲ್ಲಿ ವಿವಿಧ ವಯೋಮಾನ, ಬೌದ್ದಿಕ ಹಾಗೂ ಮಾನಸಿಕ ಸ್ತರಗಳ ಮಕ್ಕಳೂ ಇರುತ್ತಾರೆ. ನಿಧಾನಗತಿಯ, ವೇಗದ ಮತ್ತು ಮಧ್ಯಮ ಕಲಿಕೆಯ ಮಕ್ಕಳೂ ಅಲ್ಲಿರುತ್ತಾರೆ. ಅವರೆಲ್ಲರಿಗೂ ಏಕ ರೀತಿಯ ಬೊಧನೆ ಎಷ್ಟು ಸರಿ? 
                  ನಾವು ಮಾಡುವ ಬೋಧನೆ ಯಾವುದಾದರೂ ಒಂದು ಗುಂಪಿನ ಮಕ್ಕಳಿಗೆ ರುಚಿಸುತ್ತದೆ. ಇನ್ನುಳಿದ ಗುಂಪಿನ ಮಕ್ಕಳಿಗೆ ಅದೊಂದು ನೀರಸ ತರಗತಿ ಎನಿಸುತ್ತದೆ. ಬೋಧನೆ ನೀರಸ ಎಂದು ಮಕ್ಕಳಿಗೆ ಅರಿವಾದೊಡನೆ ಅವರು ತರಗತಿಯಲ್ಲಿ ಅಶಿಸ್ತಿನಿಂದ ವರ್ತಿಸಲು ತೊಡಗುತ್ತಾರೆ(ಇಲ್ಲಿ ಅಶಿಸ್ತು ಎಂದರೆ ತರಗತಿಯ ಬೋಧನೆ ಮತ್ತು ಕಲಿಕೆಗೆ ಭಂಗ ಉಂಟಾಗುವುದು ಎಂದರ್ಥ). ತರಗತಿ ನಿಭಾಯಿಸುವ ಶಿಕ್ಷಕರಿಗೆ ಕೋಪ ನೆತ್ತಿಗೇರುತ್ತದೆ. ಅಶಿಸ್ತಿನಿಂದ ವರ್ತಿಸಿದ ಮಕ್ಕಳು ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ತಪ್ಪು ಯಾರದು? ಮಕ್ಕಳ ಅಶಿಸ್ತಿಗೆ ಕಾರಣಗಳೇನು? ಎಂಬುದನ್ನು ಕಂಡು ಹಿಡಿಯದೇ ಅವರಿಗೆ ಶಿಕ್ಷೆ ವಿಧಿಸುತ್ತೇವೆ. ಇದು ಯಾವ ನ್ಯಾಯ?. ಎಂದಾದರೂ ನಾವು ಇಂತಹ ಘಟನೆಗಳಿಗೆ ಕಾರಣಗಳನ್ನು ಕಂಡುಕೊಂಡು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವಾ? ಅಥವಾ ಮಕ್ಕಳ ವರ್ತನೆಗಳಿಗೆ ಶಿಕ್ಷೆ ಹೊರತು ಪಡಿಸಿ ಪರ್ಯಾಯ ತಂತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆಯಾ? ಇಲ್ಲ! ಏಕೆಂದರೆ ನಾವಿನ್ನೂ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತದ್ದೇವೆ. 
           ಕಲಿಸುವುದು ಎಂದರೆ ಯಾವುದಾದರೂ ಮಾರ್ಗದಿಂದ ಅಲ್ಲ. ಕಲಿಕೆ  ಮಗು ಒಪ್ಪಿತ ರೀತಿಯಲ್ಲಿ ಸಾಗಬೇಕು. ಸಾಮಾನ್ಯವಾಗಿ ಮಕ್ಕಳು ಶಿಕ್ಷೆಯನ್ನು ಬಯಸುವುದಿಲ್ಲ. ಶಿಕ್ಷೆಯನ್ನು ಹೊರತುಪಡಿಸಿ ವಿಭಿನ್ನ ಮಾರ್ಗದಿಂದ ಕಲಿಸುವಾತನೇ ಪರಿಪೂರ್ಣ ಶಿಕ್ಷಕ ಅಥವಾ ಶ್ರೇಷ್ಠ ಶಿಕ್ಷಕ ಎನಿಸುತ್ತಾನೆ. 
       ಮಾನವ ಹಕ್ಕುಗಳ ಯುಗದಲ್ಲಿ ವಾಸಿಸುವ ನಾವು ಮಕ್ಕಳನ್ನು ಮಾನವರೆಂದು ಪರಿಗಣಿಸಿ ಅವರ ಹಕ್ಕುಗಳನ್ನು ಗೌರವಿಸಬೇಕಾಗಿದೆ. ಶಿಕ್ಷೆಯಿಂದ ಮಕ್ಕಳ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮಗುವಿನ ಮನಸ್ಸು ಹೂವಿನಂತೆ ಎಂದು ಹೇಳುತ್ತೇವೆ. ಆ ಹೂವು ಬಾಡದ ರೀತಿಯಲ್ಲಿ ಅದರ ಪರಿಮಳವನ್ನು ಎಲ್ಲರೂ ಆಘ್ರಾಣಿಸುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಇದು ಬಹು ಪ್ರಯಾಸದ ಕೆಲಸವಾದರೂ ಸಾಧಿಸಿ ತೋರಿಸಬೇಕಾಗಿದೆ. ಗೌತಮ ಬುದ್ದ ಅಂಗುಲೀಮಾಲನಿಗೆ ಯಾವ ಶಿಕ್ಷೆಯಿಲ್ಲದೇ ‘ಪ್ರೇಮಭಿಕ್ಷೆ’ ನೀಡಿ ಅವನಲ್ಲಿನ ಪೈಶಾಚಿಕ ಗುಣಗಳನ್ನು ಹೋಗಲಾಡಿಸಲಿಲ್ಲವೇ? ಹಾಗೆಯೇ ಶಿಕ್ಷೆಯಿಲ್ಲದೇ ಸುಶಿಕ್ಷಿತರನ್ನಾಗಿ ಮಾಡಿದ ಅನೇಕರ ಜೀವನ ನಮಗೆ ದಾರಿದೀಪವಾಗಲಿ.
   - ಆರ್.ಬಿ.ಗುರುಬಸವರಾಜ.

No comments:

Post a Comment