December 12, 2013

ಸಾವಿರದ ಸ್ವರ ಮಾಂತ್ರಿಕ

ಸಾವಿರದ ಸ್ವರ ಮಾಂತ್ರಿಕ

  “ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚಲುವಂಗಾನೊಲಿದೆನವ್ವ” ಎಂದು ಅಕ್ಕಮಹಾದೇವಿ ತನ್ನ ಮನದ ಇಂಗಿತವನ್ನು ವಚನದ ಮೂಲಕ ಉಣಬಡಿಸಿದರೆ, ಸಂಗೀತ ಲೋಕಕ್ಕೆಂದೂ ಸಾವಿಲ್ಲವೆಂಬುದನ್ನು ತಮ್ಮ ಕಂಚಿನ ಕಂಠದ ಮೂಲಕ ಬಿಂಬಿಸಿದ ಮಹಾನ್ ಗಾಯಕ, ಸ್ವರಮಾಂತ್ರಿಕ, ಗಾನಗಾರುಡಿಗ ಸಿ.ಅಶ್ವಥ್‍ರವರು. ಅಶ್ವಥ್ರವರದ್ದು ಬಹುಮುಖ  ಸಂಗೀತ ಪ್ರತಿಭೆ. ನಾಡಿನ ಮೂಲೆಮೂಲೆಗಳಲ್ಲಿ ಅವರ ಹಾಡಿನ ಮಾಧುರ್ಯವನ್ನು ಕೇಳದ ಕಿವಿಗಳಿಲ್ಲ. ಎಲ್ಲಿಯೇ ಇರಲಿ, ಹೇಗೆಯೇ ಇರಲಿ ಅವರ ಹಾಡಿನ ಧ್ವನಿ ಕಿವಿಗೆ ಬಿದ್ದರೆ ಸಾಕು ದೇಹದ ಅಂಗಾಂಗಗಳೆಲ್ಲ ತಮ್ಮಷ್ಟಕ್ಕೆ ತಾವೇ ತಾಳ ಹಾಕತೊಡಗುತ್ತವೆ. ಅಂತಹ ಭಾವನಾತ್ಮಕ ಕಂಠ ಅವರದ್ದು.
ಕಾಯಕದಲ್ಲೊಂದು ಕಾಯಕ
ಒಬ್ಬ ವ್ಯಕ್ತಿ ತಾನು ನಿರ್ವಹಿಸುತ್ತಿರುವ ಒಂದು ಹುದ್ದೆಯನ್ನು ಸಮರ್ಪಕವಾಗಿ ನಿಭಾಯಿಸುವುದೇ ಕಷ್ಟವಾಗಿರುವ  ಈ ಕಾಲದಲ್ಲಿ ಕಾರ್ಯಕಾರಿ ಅಭಿಯಂತರರ ಹುದ್ದೆಯನ್ನು ನಿಭಾಯಿಸಿಕೊಂಡು ಅದರ ಜೊತೆಜೊತೆಗೆ  ಇನ್ನೊಂದು ವಿಶಿಷ್ಟ ಸಾಧನೆ ಮಾಡಿದ ಮಹಾನ್ ಸಾಧಕರು ಅಶ್ವಥ್‍ರವರು. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಅಶ್ವಥ್‍ರವರು ಕೈಹಾಕದ ಸಂಗೀತ ಕ್ಷೇತ್ರಗಳಿಲ್ಲ. ಭಾವಗೀತೆ, ಜಾನಪದಗೀತೆ, ಭಕ್ತಿಗೀತೆ, ಚಿತ್ರಗೀತೆ, ರಂಗಗೀತೆ ಹೀಗೆ ಸಂಗೀತದ ಎಲ್ಲಾ ಕ್ಷೇತ್ರಗಳಲ್ಲೂ ಅಚ್ಚರಿಯನ್ನುಂಟು ಮಾಡಿದವರು. ಪ್ರತಿಯೊಂದು ರಂಗದಲ್ಲೂ ಹೊಸತನವನ್ನು ಹುಡುಕುವ ಕಾಯಕಯೋಗಿ ಅವರು. ಬಾಲ್ಯದಿಂದಲೂ ಸಂಗೀತದ ಬಗ್ಗೆ ಅವರಿಗಿದ್ದ ಅಪಾರ ಆಸಕ್ತಿಯೇ ಅವರನ್ನು ಸಂಗೀತ ಲೋಕದ ದಿಗ್ಗಜರನ್ನಾಗಿ ಮಾಡಿತು.
ಸ್ವರ ಸಂಯೋಜನೆ
ಸುಗಮ ಸಂಗೀತವೆಂದರೆ ಒಂದು ನಿರ್ದಿಷ್ಟ ನಿಯಾಮಾವಳಿ ಇಲ್ಲದ ಪದ್ದತಿ. ಅದನ್ನು ಹೇಗೆ ಬೇಕಾದರೂ ಹಾಡಬಹುದು ಎನ್ನುವುದಕ್ಕೆ ತಿಲಾಂಜಲಿಯನ್ನಿತ್ತ ಅಶ್ವಥ್‍ರವರು ‘ಸುಗಮ ಸಂಗೀತ’ವೆಂಬ ಪುಸ್ತಕದ ಮೂಲಕ ಹೊಸ ಭಾಷ್ಯ ಬರೆದರು. ಭಾವಗೀತೆಗಳನ್ನು ಸುಗಮ ಸಂಗೀತ ಎಂದೇ ಕರೆದರು. ಹಾಡುಗಳಿಗೆ ಕೇವಲ ರಾಗ ಸಂಯೋಜನೆ ಮಾಡಿದರೆ ಸಾಲದು, ಸ್ವರಭಾವಗಳೊಂದಿಗೆ ಸ್ವರ ಸಂಯೋಜನೆ ಮಾಡಬೇಕು ಎಂದು ಹೇಳುವ ಮೂಲಕ ಅದೆಷ್ಟೋ ಮೂಲೆಗುಂಪಾಗಿದ್ದ ಗೀತೆಗಳಿಗೆ ಜೀವ ತುಂಬಿದ ‘ಜೀವಾತ್ಮ’ ಅವರು.
ಕಷ್ಟ-ಇಷ್ಟ
ಬಹುತೇಕ ಇಂದಿನ ಪೀಳಿಗೆ ವಚನಗಳು, ತತ್ವಪದಗಳು, ದಾಸರ ಪದಗಳೆಂದರೆ ಮೂಗು ಮುರಿಯುವುದು ಸ್ವಾಭಾವಿಕ. ಅಂತಹ ಕಷ್ಟದ ಧಾಟಿಯ ಗೀತೆಗಳಿಗೆ ತಮ್ಮದೇ ಆದ ಏರು ಶೈಲಿಯಲ್ಲಿ ಹಾಡುತ್ತಾ, ಇಂದಿನ ಯುವಕರಿಗೆ ಸಂಗೀತದ ಮೂಲಕ ಸಾಹಿತ್ಯದ ರುಚಿಯನ್ನು ಉಣಬಡಿಸಿದರು. ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ, ‘ಕನ್ನಡದ ಕಬೀರ’ ಎಂದು ಖ್ಯಾತಿಗಳಿಸಿದ್ದ ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ನಾಡಿನೆಲ್ಲೆಡೆ ಪಸರಿಸಿದ ಮಹಾನ್ ದಿಗ್ಗಜ. ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಯಾರೂ ಮಾಡಲಾಗದಂತಹ ರಾಗಗಳಿಗೆ ಸ್ವರ ಸಂಯೋಜನೆ ಮಾಡಿ ಹೊಸದೊಂದು ಸಂಗೀತ ಲೋಕ ಸೃಷ್ಟಿಸಿದ ಸೃಷ್ಟಿಕರ್ತ ಅವರು. 
ಜುಗಲ್-ಬಂಧಿ
ಕುವೆಂಪು-ಅಶ್ವಥ್ ಜೋಡಿ ಅತ್ಯಂತ ಅಪ್ಯಾಯಮಾನದುದು. ಇಬ್ಬರೂ ಒಂದೇ ದಿನದಂದು (ಡಿಸೆಂಬರ್ 29) ಜನಿಸಿದವರು. ಇಬ್ಬರೂ ಒಂದೊಂದು ಕ್ಷೇತ್ರದಲ್ಲಿ ಮಹತ್ಸಾಧನೆಗೈದ ಸಾಧಕರು. ಒಬ್ಬರದು ಸಾಹಿತ್ಯ ಕ್ಷೇತ್ರ, ಇನ್ನೊಬ್ಬರದು ಸಂಗೀತ ಕ್ಷೇತ್ರ. ಇವೆರಡೂ ಸೇರಿದರೆ ಅದೇ ಸ್ವರ್ಗದ ಜುಗಲ್-ಬಂಧಿ. ಕುವೆಂಪುರವರ ಬಹಳಷ್ಟು ಕವಿತೆಗಳಿಗೆ ಜೀವ ತುಂಬಿದವರು ಅಶ್ವಥ್. ಕುವೆಂಪುರವರ ಕವಿತೆಗಳಿಗೆ ರಾಗ ಸಂಯೋಜನೆ ಕಷ್ಟವೆಂದು ಹಿಂಜರಿದವರಿಗೆ ತಮ್ಮದೇ ಆದ ರಾಗ ಸಂಯೋಜನೆಯ ಮಾಂತ್ರಿಕ ಶಕ್ತಿಯಿಂದ ಚಾಟಿ ಏಟು ನೀಡಿ ಶೋತೃಗಳನ್ನು ಮಂತ್ರಮುಗ್ದರನ್ನಾಗಿ ಮಾಡಿದವರು ಅಶ್ವಥ್. ಕುವೆಂಪುರವರು ರಚಿಸಿದ ಎರಡೂ ನಾಡಗೀತೆಗಳಿಗೆ (ರೈತನಾಡಗೀತೆಯಾಗಿ ‘ಉಳುವ ಯೋಗಿಯ ನೋಡಲ್ಲಿ’ ಹಾಗೂ ಕರ್ನಾಟಕದ ನಾಡಗೀತೆಯಾಗಿ ‘ಜೈ ಭಾರತ ಜನನಿಯ ತನುಜಾತೆ’) ರಾಗ ಸಂಯೋಜನೆ ಮಾಡಿ ಅವುಗಳನ್ನು ನಾಡಿನ ಜನ ಮನದಲ್ಲಿ ನೆಲೆ ನಿಲ್ಲಿಸಿದ ಗಾನ ಗಾರುಡಿಗ ಅಶ್ವಥ್‍ರವರು. 
ನಾ...ನಿನ್ನೊಳು, ನೀ...ನನ್ನೊಳು
ಅಶ್ವಥ್‍ರವರು ಯಾವುದೇ ಗೀತೆಯನ್ನು ಹಾಡಿದರೂ ಅದನ್ನು ಅನುಭವಿಸದೇ ಹಾಡುತ್ತಿರಲೇ ಇಲ್ಲ. ವೇದಿಕೆಯಲ್ಲಿರಲಿ, ಮನೆಯಲ್ಲಿರಲಿ ಎಲ್ಲಿಯೇ ಇರಲಿ ಅವರಿಗೆ ಹಾಡುವ ಮೂಡು ಬಂತೆಂದರೆ ಹಾಡಿನ ಧಾಟಿಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸುತ್ತಾ ಪ್ರೇಕ್ಷಕರನ್ನು ಉತ್ತೇಜಿಸುತ್ತಿದ್ದರು. ಸ್ವರ-ರಾಗ-ತಾಳಗಳೊಂದಿಗೆ ಅವರು ಯಾವತ್ತೂ ಹೊಂದಾಣಿಕೆ ಮಾಡಿಕೊಂಡವರಲ್ಲ. ಹಾಡಿನ ಸ್ವರ, ಧಾಟಿ ಹೀಗೇ ಇರಬೇಕೆಂದು ನಿರ್ಧರಿಸಿದರೆ ಅದು ಎಷ್ಟೇ ಕಷ್ಟದ ಸಂಯೋಜನೆಯಾದರೂ ಅದನ್ನು ಅಂದುಕೊಂಡಂತೆ ಸಂಯೋಜಿಸುತ್ತಿದ್ದರು. ಕವಿಗೆ ತಕ್ಕಂತಹ, ಕವಿಯ ಭಾವಾರ್ಥಕ್ಕೆ ತಕ್ಕಂತಹ ಸ್ವರ ಸಂಯೋಜನೆ ಮಾಡುವುದರಲ್ಲಿ ಅವರು ಸಿದ್ದ ಹಸ್ತರು. ಇದನ್ನು ಚಲನಚಿತ್ರ, ನೃತ್ಯ, ನಾಟಕ, ಮೂಕಾಭಿನಯ, ಮುಂತಾದ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. 
ಸಂದೇಶ ಸಂವಾಹಕ
ಜನಸಾಮಾನ್ಯರಿಗೆ ಸಂದೇಶಗಳನ್ನು ತಲುಪಿಸುವಂತಹ ಅಂಶಗಳು ಕವಿತೆಗಳಲ್ಲಿದ್ದಾಗ, ಅವನ್ನು ಸಮೂಹ ಗಾಯನದಲ್ಲಿ ಹಾಡಿಸಿ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುತ್ತಿದ್ದರು. 1999ರಲ್ಲಿ ನಾಡಿನಾದ್ಯಂತ ಸಂಚರಿಸಿ, ಕುವೆಂಪುರವರ ವೈಚಾರಿಕ ಗೀತೆಗಳನ್ನು ಜನರಿಗೆ ತಿಳಿಸಿ ಕೊಟ್ಟರು. ಪರಿಸರ ಗೀತೆಗಳೆಂದರೆ ಅಶ್ವಥ್‍ರಿಗೆ ಅಚ್ಚುಮೆಚ್ಚು. ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಅವರು ಎಂದಿಗೂ ಮುಂದಿರುತ್ತಿದ್ದರು. ಕ್ರಾಂತಿಗೀತೆಗಳೆಂದರೆ ಪಂಚಪ್ರಾಣ. ಕ್ರಾಂತಿಗೀತೆಗಳಿಗೆ ಏರು ಧ್ವನಿಯಲ್ಲಿ ಭಾವುಕರಾಗಿ ತಮ್ಮನ್ನು ತಾವೇ ಮೈಮರೆತು ಹೆಜ್ಜೆ ಹಾಕುತ್ತಾ ಹಾಡುತ್ತಿದ್ದ ಅವರ ಪರಿ ಎಂತಹವರ ಎದೆಯನ್ನು ತಟ್ಟದೇ ಇರುತ್ತಿರಲಿಲ್ಲ. 
ಸಪ್ತ ಸಾಗರದಾಚೆ.....
ದಾಸರ ಕೃತಿಗಳನ್ನು, ವಚನಗಳನ್ನು, ತತ್ವಪದಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಅಂದರೆ ಸಂಗೀತಕ್ಕೆ ಹೆಚ್ಚು ಒತ್ತು ಕೊಡದೆ ಸರಳವಾಗಿ ಹಾಡುವ ಮೂಲಕ ಹೊಸಪದ್ದತಿಗೆ ಮುನ್ನುಡಿ ಬರೆದರು. ಅದರಂತೆ ‘ಅನೂಪ್ ಜಲೂಟ್’ ಅವರಿಂದ ಹಿಂದಿಯಲ್ಲಿ ದಾಸರ ಪದಗಳನ್ನು ಹಾಡಿಸಿ ರಾಷ್ಟ್ರವ್ಯಾಪಿ ಹೆಸರು ಗಳಿಸಿದರು. ಅವರ ಈ ಖ್ಯಾತಿ ದೇಶಕ್ಕೆ ಮಾತ್ರ ಸೀಮಿತವಾಗಿರದೇ ವಿದೇಶಗಳಿಗೂ ಹಬ್ಬಿತು. 1985ರಲ್ಲಿ ಅಮೇರಿಕಾದಲ್ಲಿ ನಡೆದ ‘ವಿಶ್ವಕನ್ನಡ ಸಮ್ಮೇಳನ’ದಲ್ಲಿ 300 ಮಕ್ಕಳೊಂದಿಗೆ ಮೈಸೂರು ಅನಂತಸ್ವಾಮಿ, ಶ್ಯಾಮಲಭಾವೆ ಮುಂತಾದವರ ಗೀತೆಗಳನ್ನು ಹಾಡಿಸಿದರು. 1988ರಲ್ಲಿ ಮ್ಯಾಂಚೆಸ್ಟರ್‍ನಲ್ಲಿ ನಡೆದ ‘ವಿಶ್ವಕನ್ನಡ ಸಮಾವೇಶ’ದಲ್ಲಿ ಪಾಲ್ಗೊಂಡು ಭಾರತದ ಕೀರ್ತಿ ಬೆಳಗಿಸಿದರು. 1995ರಲ್ಲಿ ಅಮೇರಿಕಾದಲ್ಲಿ 22 ಕಡೆ ಕಾರ್ಯಕ್ರಮ ನೀಡಿ ಪಾಶ್ಚಾತ್ಯರನ್ನು ಸಂಗೀತದ ಕಡಲಲ್ಲಿ ತೇಲಿಸಿದರು. 2000ನೇ ಇಸ್ವಿಯಲ್ಲಿ ಅಮೇರಿಕಾದ ‘ಹ್ಯೂಸ್ಟನ್ ವಿಶ್ವಕನ್ನಡ ಸಮ್ಮೇಳನ’ದಲ್ಲಿ 220 ಕಲಾವಿದರಿಗೆ ಕುವೆಂಪುರವರ ಕೃತಿಗಳ ಬಗ್ಗೆ ಪಾಠ ಹೇಳಿ 4 ವೈಚಾರಿಕ ಗೀತೆಗಳನ್ನು ಹಾಡಿಸಿದರು. ಅಲ್ಲಿಯೂ ಸಹ “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಮಾದರಿಯ ಅನೇಕ ಕಾರ್ಯಕ್ರಮಗಳನ್ನು ನೀಡಿದರು.  ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಅವರ ಸ್ವರ ಮಾಧುರ್ಯ ಸಪ್ತ ಸಾಗರಗಳನ್ನು ದಾಟಿ ಕನ್ನಡದ ಕೀರ್ತಿ ಬೆಳಗಿಸಿತು. 
ಸಾಧನೆಗಳ ಮೇರು ಪರ್ವತ
ಅಶ್ವಥ್‍ರವರು ಎಂದೂ ಪದವಿ ಹಾಗೂ ಪ್ರಶಸ್ತಿಗಳನ್ನು ಅರಸಿಕೊಂಡು ಹೋದವರಲ್ಲ. ಅವರ ಸಾಧನೆಯ ಫಲವಾಗಿ ಅನೇಕ ಪದವಿ ಹಾಗೂ ಪ್ರಶಸ್ತಿಗಳು ಅವರನ್ನೇ ಅರಸಿಕೊಂಡು ಬಂದವು. 1978ರಲ್ಲಿ ‘ಸ್ಪಂದನ’ ಮತ್ತು 1979ರಲ್ಲಿ ‘ಏನೇ ಇರಲಿ ಪ್ರೀತಿ ಬರಲಿ’ ಚಿತ್ರಗಳಿಗಾಗಿ ಬೆಂಗಳೂರಿನ ಲಯನ್ಸ್ ಕ್ಲಬ್‍ನಿಂದ “ಅತ್ಯುತ್ತಮ ಸಂಗೀತ ಪ್ರಶಸ್ತಿ”, ‘ಕಾಕನಕೋಟೆ’, ‘ಆಸ್ಪೋಟ’, ‘ಬಾಡದ ಹೂ’ ಮುಂತಾದ ಚಿತ್ರಗಳಿಗಾಗಿ “ರಾಜ್ಯ ಚಲನಚಿತ್ರ ಪ್ರಶಸ್ತಿ”, 1985ರಲ್ಲಿ ಕರ್ನಾಟಕ ಸಂಗೀತ ಅಕಾಡೆಮಿಯ “ಗೌರವ ಪ್ರಶಸ್ತಿ”, 1986ರಲ್ಲಿ ಸುಗಮ ಸಂಗೀತ ಕ್ಷೇತ್ರಕ್ಕಾಗಿ ರಾಜ್ಯ ಸರ್ಕಾರದ “ಸಂತ ಶಿಶುನಾಳ ಪ್ರಶಸ್ತಿ”, ಓಪನ್ ಇಂಟರ್‍ನ್ಯಾಷನಲ್ ಯೂನಿರ್ವಸಿಟಿ ಆಫ್ ಕಾಪ್ಲಿಮೆಂಟರಿ ಮೆಡಿಸಿನ್‍ನಿಂದ ಮ್ಯೂಸಿಕ್ ಥೆರಪಿಗಾಗಿ “ಗೌರವ ಡಾಕ್ಟರೇಟ್”, 1990ರಲ್ಲಿ ಸುಗಮ ಸಂಗೀತ ಪುಸ್ತಕಕ್ಕಾಗಿ “ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ”,  1992ರಲ್ಲಿ ‘ಮೈಸೂರು ಮಲ್ಲಿಗೆ’ ಚಿತ್ರಕ್ಕಾಗಿ “ಫಿಲಂ ಫೇರ್ ಪ್ರಶಸ್ತಿ”, 1994 ರಲ್ಲಿ ‘ಚಿನ್ನಾರಿಮುತ್ತ’ ಚಿತ್ರಕ್ಕಾಗಿ “ರಾಜ್ಯ ಸರ್ಕಾರದ ಪ್ರಶಸ್ತಿ”, 1999ರಲ್ಲಿ ಗಾಯನ ಸಮಾಜದಿಂದ “ವರ್ಷದ ಕಲಾವಿದ ಪ್ರಶಸ್ತಿ”, “ಆಲ್ ಇಂಡಿಯಾ ರೇಡಿಯೋ ಪ್ರಶಸ್ತಿ”, ಬೆಂಗಳೂರು ವಿಶ್ವವಿದ್ಯಾಲಯದಿಂದ “ಗೌರವ ಡಾಕ್ಟರೇಟ್” ಹೀಗೇ ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಅವರ ಸಾಧನೆಯನ್ನು ಉತ್ತುಂಗಕ್ಕೇರಿಸಿದವು. 
ಕಳಚಿದ ಕೊಂಡಿ
ಸುಗಮ ಸಂಗೀತ ಕ್ಷೇತ್ರಕ್ಕೊಂದು ಹೊಸ ಮುನ್ನಡಿ ಬರೆದ ಅಶ್ವಥ್‍ರವರು ಅವರ ಜನ್ಮದಿನದಂದೇ (ಜನನ : 29-12-1939, ಮರಣ : 29-12-2009) ಅಸ್ತಂಗತರಾದರು. ಸಾವಿನಲ್ಲೂ ಏಕತಾನತೆಯನ್ನು ಸಾಧಿಸಿದ ಮಹಾನ್ ಚೇತನ. ಅವರ ಜೀವನ ಶೈಲಿಯೇ ಬೇಗನೇ ಅಸ್ತಂಗತರಾಗಲು ಕಾರಣವಾಯಿತೇನೋ?. ಇಂದು ಅವರು ಭೌತಿಕವಾಗಿ ಮರೆಯಾಗಿರಬಹುದು. ಆದರೆ ಅವರ ಗಾನಲೋಕದ ಸ್ವರಸಂಗೀತಕ್ಕೆ ಎಂದಿಗೂ ಸಾವಿಲ್ಲ ಅಲ್ಲವೇ? ಎಂದೆಂದಿಗೂ ಅವರು ‘ಸಾವಿರದ ಸ್ವರ ಮಾಂತ್ರಿಕ’ ಅಲ್ಲವೇ?
- ಆರ್.ಬಿ.ಗುರುಬಸವರಾಜ. 



No comments:

Post a Comment