December 31, 2013

ಬಹುರೂಪಿ ಶಿಕ್ಷಕ

ಬಹುರೂಪಿ ಶಿಕ್ಷಕ
ಮಕ್ಕಳ ಒಡನಾಟದಲಿ ಜಗದ ಜಂಜಡವ ಮರೆತು, ಭವಿಷ್ಯದ ನಿರ್ಮಾತೃಗಳ ನಿರ್ಮಾಣ ಕಾರ್ಯದಲಿ ತೊಡಗಿಸಿಕೊಂಡು, ಶಿಷ್ಯನೊಳಗಿನ ಕತ್ತಲೆಯನ್ನು ಓಡಿಸಲು ತನ್ನನ್ನೇ ಹಣತೆಯನ್ನಾಗಿಸಿ ಬೆಳಕು ನೀಡುವ ಶಿಕ್ಷಕ ವೃಂದಕ್ಕೆ ನನ್ನ ನಮನಗಳು.
ಕಾಲ ಬದಲಾಗಬಹುದು. ಆದರೆ ಗುರುವಿನ ಸ್ಥಾನವೆಂದೂ ಬದಲಾಗದು. ಶಿಕ್ಷಕರ ಸ್ಥಾನವನ್ನು ಯಾರೂ ಅಲಂಕರಿಸಲಾರರು. ಅಂತಹ ಘನತೆ, ಗಾಂಭೀರವುಳ್ಳಂತಹ ಸ್ಥಾನವಿದು. ಶಿಕ್ಷಣ ಕ್ಷೇತ್ರದಲ್ಲಿಂದು ಸಾಕಷ್ಟು ಬದಲಾವಣೆಗಳು ಘಟಿಸುತ್ತಿವೆ. ಆ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಳ್ಳುವ ಚಾಣಾಕ್ಷತನ ಶಿಕ್ಷಕರಲ್ಲಿದೆ.
“ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವ ದೀಟಿ ಓ... ನನ್ನ ಚೇತನ” ಎನ್ನುವ ‘ಕುವೆಂಪು’ರವರ ಕವನದ ಸಾಲುಗಳು ಶಿಕ್ಷಕರಿಗೆ ಸದಾ ಅನ್ವಯಿಸುತ್ತವೆ. ಜಾಗತೀಕರಣ, ಖಾಸಗೀಕರಣಕ್ಕೆ ಬಲಿಯಾದ ಶಿಕ್ಷಣದಲ್ಲಿ ಶಿಕ್ಷಕರು ಬಹುರೂಪಿ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ. ಶಿಕ್ಷಕರು ಇಂದು ಕೇವಲ ಶಿಕ್ಷಕರಾಗಿ ಉಳಿದಿಲ್ಲ. ಬದುಕಿನ ವಿವಿಧ ಪಾತ್ರಗಳನ್ನು ನಿರ್ವಹಿಸುವ ಯಕ್ಷಿಣಿಗಾರರಾಗಿದ್ದಾರೆ.
ಮಕ್ಕಳ ಪಾಲನೆ ಮಾಡುವ ಪಾಲಕ, ಮಕ್ಕಳ ಬಾಳಿಗೆ ದಾರಿ ತೋರುವ ಮಾರ್ಗದರ್ಶಿ, ಶಿಕ್ಷಣದ ಗುರಿ ಸಾಧಿಸುವ ಗುರಿಕಾರ, ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಭಾವಜೀವಿ, ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುವ ಒಡನಾಡಿ,  ಮಕ್ಕಳ ನ್ಯಾಯ-ಅನ್ಯಾಯ ತೀರ್ಮಾನಿಸುವ ನ್ಯಾಯಾಧೀಶ, ತಪ್ಪು ಮಾಡಿದಾಗ ತಿದ್ದಿ ಹೇಳುವ ಗುರು, ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವ ಆರಕ್ಷಕ, ಭವ್ಯ ಭಾರತ ನಿರ್ಮಾಣದ ನಿರ್ಮಾತೃ, ಸ್ವಯಂ ಪ್ರೇರಣೆಯಿಂದ ಶಾಲೆಯ ವಿವಿಧ ಚಟುವಟಿಕೆ ನೆರವೇರಿಸುವ ಸ್ವಯಂಸೇವಕ, ಶಾಲಾ ಆಡಳಿತ ನೆಡೆಸುವ ಆಡಳಿತಾಧಿಕಾರಿ, ಶಿಕ್ಷಣ ಮತ್ತು ಸಮುದಾಯದ ನಡುವಿನ ಸಂವಹನಕಾರ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಶಿಲ್ಪಿ, ಮಕ್ಕಳಲ್ಲಿ ತತ್ವಾದರ್ಶಗಳನ್ನು ಮೂಡಿಸುವ ತತ್ವಶಾಸ್ತ್ರಜ್ಞ, ಮಕ್ಕಳ ಚಿತ್ತ ಸ್ವಾಸ್ತ್ಯ ಕಾಪಾಡುವ ಮನೋವಿಜ್ಞಾನಿ, ದೈಹಿಕ ಆರೋಗ್ಯ ಉತ್ತಮ ಪಡಿಸುವ ವೈದ್ಯ, ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಸಮಾಜ ಸುಧಾರಕ, ಸಮಾನತೆಯ ಹರಿಕಾರ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ತನ್ನ ವೈಯಕ್ತಿಕ ಜೀವನವನ್ನೂ ಸಾಗಿಸಬೇಕಾಗಿದೆ. ಎಲ್ಲವನ್ನೂ ಸಾಮರಸ್ಯದಿಂದ ಸಾಕಾರಗೊಳಿಸಬೇಕಾದರೆ ಶಿಕ್ಷಕರಲ್ಲಿ ತಾಳ್ಮೆ, ಪ್ರೀತಿ, ಸಹನೆ, ಕ್ಷಮಾಗುಣಗಳು ಗಟ್ಟಿಯಾಗಿರಲೇಬೇಕು. 
ಇಂದು ಶಿಕ್ಷಕರ ಮೇಲೆ ಇಲಾಖೆ ಮತ್ತು ಸಮುದಾಯ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಏಕೆಂದರೆ ಶಿಕ್ಷಕರನ್ನು ಒಬ್ಬ ಆದರ್ಶ ವ್ಯಕ್ತಿಯಾಗಿ ನೋಡುವುದರಿಂದ ಅವರಿಂದ ಒಳ್ಳೆಯದನ್ನೇ ಬಯಸುತ್ತದೆ. ಆ ನಿರೀಕ್ಷೆಗಳನ್ನು ಈಡೇರಿಸಲು ತನುಮನದಿಂದ ಶ್ರಮಿಸಬೇಕಾಗಿದೆ. ಒಂದೆಡೆ ಜ್ಞಾನ ವಿಸ್ತಾರವಾಗುತ್ತಿದ್ದರೆ ಪ್ರಪಂಚ ಕಿರಿದಾಗುತ್ತಿದೆ, ಇನ್ನೊಂದೆಡೆÀ  ಮಾನವೀಯ ಸಂಬಂಧಗಳು ದೂರವಾಗುತ್ತಿದ್ದರೆ ಮೌಲ್ಯಗಳು ಕಳಚಿಕೊಳ್ಳುತ್ತಿವೆ, ಮತ್ತೊಂದೆಡೆ ಮೂಢನಂಬಿಕೆ ಅಜ್ಞಾನ ಅಂಧಕಾರಗಳು ಅಧಃಪತನಕ್ಕೆ ಕಾರಣವಾಗುತ್ತಿವೆ. ಇವೆಲ್ಲದರ ನಡುವೆ ಶಿಕ್ಷಕ ಸಹಮತದ ಸಾಧನೆ ಮಾಡಬೇಕಿದೆ. ಯಾವುದೇ ಒಂದು ಶಾಲೆಯ ಯಶಸ್ಸು ಅಥವಾ ಸೋಲು ಆ ಶಾಲೆಯ ಶಿಕ್ಷಕರನ್ನು ಅವಲಂಬಿಸಿದೆ. ಅಂದರೆ ಶಿಕ್ಷಕರು ಪರಸ್ಪರ ಹೊಂದಾಣಿಕೆ ಸಹಕಾರದಿಂದ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಖಂಡಿತ ಲಭಿಸುತ್ತದೆ. 
ಸ್ಪರ್ದಾತ್ಮಕ ಜಗತ್ತಿನಲ್ಲಿ ಮಕ್ಕಳ ಸುಸ್ಥಿರತೆಗೆ ಅನುಕೂಲವಾಗುವಂತೆ ಶೈಕ್ಷಣಿಕವಾಗಿ ಮಾನಸಿಕವಾಗಿ ಸಬಲೀಕರಣಗೊಳಿಸುವುದು ತುಂಬಾ ನಾಜೂಕಿನ ಕೆಲಸ. ಇಂತಹ ನಾಜೂಕಿನ  ನಿರ್ವಹಣೆ ಪ್ರಜ್ಞಾವಂತ ಶಿಕ್ಷಕರಿಂದ ಮಾತ್ರ ಸಾಧ್ಯ. ಇಂದು ಶಿಕ್ಷಕರ ಬೋಧನೆಗೆ ಪರ್ಯಾಯವೆಂದು ಭಾವಿಸಿರುವ ರೇಡಿಯೋ, ದೂರದರ್ಶನ, ಕಂಪ್ಯೂಟರ್ ಇತ್ಯಾದಿಗಳು ಶಿಕ್ಷಕರಿಗೆ ಪೂರಕ ಸಾಧನಗಳೇ ಹೊರತು ಪರ್ಯಾಯ ಸಾಧನಗಳಲ್ಲ. ಏಕೆಂದರೆ ಭಾವನಾತ್ಮಕವಾದ ಶಿಕ್ಷಕರ ಸ್ಥಾನವನ್ನು ಯಾವುದೇ ಸಾಧನ ಸಲಕರಣೆಗಳೂ ತುಂಬಲಾರವು. ಅದಕ್ಕಾಗಿ ಶಿಕ್ಷಕರಿಂದು ವಿವಿಧ ಪಾತ್ರಗಳನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ಆ ಎಲ್ಲಾ ಪಾತ್ರಗಳನ್ನು ಶಿಕ್ಷಕರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂಬ ವಿಶ್ವಾಸದಿಂದಲೇ ಸಮಾಜದಲ್ಲಿ ಇಂದಿಗೂ ಉತ್ತಮವಾದ ಸ್ಥಾನಮಾನ ಇದೆ. ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಎಲ್ಲರೂ ಶ್ರಮಿಸೋಣ ಅಲ್ಲವೇ?
ಆರ್.ಬಿ.ಗುರುಬಸವರಾಜ. 

No comments:

Post a Comment