December 11, 2013

ಫುಟ್ ಪಾತ್ ಮೇಲಿನ ಷೋಕೇಸ್

ಫುಟ್ ಪಾತ್ ಮೇಲಿನ ಷೋಕೇಸ್

              ಆಧುನಿಕತೆ ಬೆಳೆದಂತೆಲ್ಲಾ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲಿದೆ. ಅದು ತನ್ನ ಅಭಿವ್ಯಕ್ತಿಗಾಗಿ ರಸ್ತೆಗೆ ಬಂದರೂ ತಪ್ಪೇನಿಲ್ಲ.ಇಂದು ಬಹುತೇಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಬಹುದೊಡ್ಡ ಮಾರುಕಟ್ಟೆ ಎಂದರೆ ಫುಟ್ ಪಾತ್. ಬಹುಜನರ ಅಭಿರುಚಿ ಮತ್ತು ನಿರೀಕ್ಷೆಗೆ ತಕ್ಕ ವಸ್ತುಗಳು ಬಿಕರಿಯಾಗುವುದು ಫುಟ್ ಪಾತ್ ನಲ್ಲಿ. 
    ಇತ್ತಿಚೆಗೆ ಖಾಸಗೀ ಕೆಲಸದ ನಿಮಿತ್ತ ರಾಯಚೂರಿಗೆ ಹೋಗಿದ್ದೆ. ರೈಲು ನಿಲ್ದಾಣದಿಂದ ಬಸ್ ನಿಲ್ದಾಣದತ್ತ ತೆರಳುವಾಗ ಮಾರ್ಗಮಧ್ಯದಲ್ಲಿನ ಒಂದು ಷೋಕೆಸ್ ಪ್ರಪಂಚ ನನ್ನನ್ನು ಅನಾಯಾಸವಾಗಿ ತಡೆಹಿಡಿದು ನಿಲ್ಲಿಸಿತ್ತು.


          ಪುಟ್ಟ ಪ್ರಪಂಚ : ಸುಂದರವಾದ ಮಣ್ಣಿನ ಕಲಾಕೃತಿಗಳನ್ನು ಕಲಾತ್ಮಕವಾಗಿ ಜೋಡಿಸಿಡಲಾಗಿತ್ತು. ಇಲ್ಲಿನ ಪ್ರತಿಯೊಂದು ಕಲಾಕೃತಿಯಲ್ಲಿ ಕಲಾವಿದನ ನೈಪುಣ್ಯತೆ , ಸೂಕ್ಷ್ಮತೆ, ಕ್ರಿಯಾಶೀಲತೆ ಎದ್ದು ಕಾಣುತ್ತಿತ್ತು. ಆನೆ, ಕುದುರೆ, ಒಂಟೆ, ನಾಯಿ, ಮೊಲ, ಬೆಕ್ಕು, ಕಪ್ಪೆ, ಹಂಸ, ಗಿಳಿ, ನವಿಲು ಹೀಗೆ ವಿವಿಧ ಪ್ರಾಣಿಗಳ ಪುಟ್ಟ ಪ್ರಪಂಚವೇ  ಅಲ್ಲಿತ್ತು. ಮನೆ ಅಲಂಕಾರಕ್ಕಾಗಿ ಬಳಸುವ ವಾಲ್ ಮ್ಯೂರಲ್ಸ್, ವಾಲ್ ಮಾಸ್ಕ್,  ಹೂದಾನಿ, ತೋರಣ, ಫ್ಲವರ್ ಟ್ರೇಸ್, ಲಕ್ಷ್ಮಿ, ಗಣೇಶ, ಸರಸ್ವತಿ, ಕೃಷ್ಣ ಮುಂತಾದ ದೇವರ ವಿಗ್ರಹಗಳು, ಚಿತ್ತಾಕರ್ಷಕ ಹಣತೆಗಳು, ಇತ್ಯಾದಿಗಳ ಮೇಲಿನ ಚಿತ್ತಾರ ಹಾಗೂ ವರ್ಣಲೇಪನಗಳು ನೋಡುಗರಲ್ಲಿ ಖರೀದಿಸುವ ಆಸೆ ಹುಟ್ಟಿಸುತ್ತವೆ. ಕಲ್ಪನಾ ವಿಲಾಸಕ್ಕೆ ಕರೆದೊಯ್ಯುತ್ತವೆ. 
        ವಾಸ್ತವ ಪ್ರಪಂಚ : ಈ ಬಗ್ಗೆ ಅಲ್ಲಿನ ವ್ಯಾಪಾರಿಯನ್ನು ಮಾತನಾಡಿಸಿದಾಗ ವಾಸ್ತವ ಪ್ರಪಂಚದ ಅರಿವಾಯಿತು.ರಾಜಸ್ಥಾನದ ಒಂದೊಂದು  ಭಾಗದಲ್ಲಿ ಒಂದೊಂದು ವಿಧವಾದ ಕಲಾಕೃತಿಗಳು ಸಿದ್ದವಾಗುತ್ತಿದ್ದು, ಜನರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಖರೀದಿಸಿ ಟ್ರಕ್ ಗಳಲ್ಲಿ ಇಲ್ಲಿಗೆ ತರುತ್ತಾರೆ. ಹೀಗೆ ತರುವಾಗ ಕೆಲವು ಕಲಾಕೃತಿಗಳು ಹಾಳಾಗುತ್ತವೆ. 'ಈರುಳ್ಳಿ ಲಾಭ ಸಿಪ್ಪೆಯಲ್ಲಿ ಹೋಯಿತು ಎನ್ನುವಂತೆ ಬರುವ ಅಲ್ಪ ಲಾಭ ಹೀಗೆ ನಷ್ಟವಾಗುತ್ತದೆ ಎನ್ನುವ ಅವರ ಆಂತರ್ಯದಲ್ಲಿ ನೋವಿದೆ.
      ಕೆಲವೇ ತಿಂಗಳ ವ್ಯಾಪಾರಕ್ಕಾಗಿ ಮಣ್ಣನ್ನು ನಂಬಿ ಬಂದ ಇವರ ಬದುಕು  ಅಷ್ಟೇನೂ ಸುಖಕರವಿಲ್ಲ. ಅವರು ಇಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರಲ್ಲಿ ಸಂವಹನ ಸಮಸ್ಯೆ ಪ್ರಮುಖವಾದದ್ದು. ಇವರಿಗೆ ಕನ್ನಡ ಬರಲ್ಲ. ನಮಗೆ ಹಿಂದಿ ತಿಳಿಯೊಲ್ಲ. ಗೊತ್ತಿರುವ ಕಲೆಯೊಂದಿಗೆ ಗೊತ್ತಿರದ ಪ್ರದೇಶದ ವ್ಯಾಪಾರ ಕಠಿಣವೆನಿಸುತ್ತದೆ. ಆದರೂ ಜೀವನ ಬಂಡಿ ಸಾಗಿಸಲೇಬೇಕಿದೆ ಎನ್ನುತ್ತಾರೆ ಆ ವ್ಯಾಪಾರಿ.
             ಷೋಕೇಸ್ : ದೊಡ್ಡ ದೊಡ್ಡ ಮಾಲ್ ಗಳಲ್ಲಿ ಚೌಕಾಸಿಯನ್ನೆ ಮಾಡದ ಗಿರಾಕಿಗಳು ಫುಟ್ ಪಾತ್ ವ್ಯಾಪಾರ ಎಂದಾಕ್ಷಣ ಚೌಕಾಸಿ ಮಾಡುತ್ತಾರೆ ಎನ್ನುವ ಅವರ ಮಾತುಗಳಲ್ಲಿ ಸತ್ಯಾಂಶವಿದೆ. ಮಣ್ಣಿನ ಕಲಾಕೃತಿ ತಯಾರಿಸುವುದು ಸುಲಭ. ಆದರೆ ಆಕರ್ಷಕ ಭಾವ ನೀಡುವುದು ಸುಲಭವಲ್ಲ. ನಮ್ಮ ಮನೆಯ ಅಂದ ಹೆಚ್ಚಿಸಬಲ್ಲ ವಸ್ತುಗಳಿಗೆ ಭಾಷೆ ಮುಖ್ಯವಲ್ಲ. ಭಾವ ಮುಖ್ಯ ಅಲ್ಲವೇ? ಫುಟ್ ಪಾತ್ ಮೇಲಿನ ಷೋಕೇಸನ್ನು ನಮ್ಮ ಮನೆಗಳಿಗೆ ಸ್ವಾಗತಿಸೋಣವೇ ?
                            - ಆರ್.ಬಿ.ಗುರುಬಸವರಾಜ.

No comments:

Post a Comment