December 31, 2013

‘ದೇವುಡು ನರಸಿಂಹಶಾಸ್ತ್ರಿ’.

ನನ್ನ ಕಾಲು ದೇವರಿಗೆ ಬೇಕಾಗಿತ್ತು ಅಂತಾ ಕಾಣುತ್ತೆ.......
ಉಡುಪಿಯಲ್ಲೊಂದು ಉಪನ್ಯಾಸ ಕಾರ್ಯಕ್ರಮ ಆಯೋಜಿತವಾಗಿತ್ತು. ಅಲ್ಲಿಗೆ ಒಬ್ಬ ಪ್ರಖ್ಯಾತ ಸಾಹಿತಿಯನ್ನು ದಂಪತಿ ಸಮೇತರಾಗಿ ಆಹ್ವಾನಿಸಲಾಗಿತ್ತು. ಅಲ್ಲಿ ಆ ಸಾಹಿತಿಯ ಉಪನ್ಯಾಸ ಕಾರ್ಯಕ್ರಮ ಇತ್ತು. ಅತಿಥಿಗಳೆಲ್ಲರನ್ನೂ ವೇದಿಕೆಗೆ  ಕರೆತಂದರು. ನಿರೂಪಕರು ಕಾರ್ಯಕ್ರಮದ ಉದ್ದೇಶವನ್ನು ಹೇಳುತ್ತಿರುವಾಗ ಅಂಚೆ ಪೇದೆಯೊಬ್ಬ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳಿಗೆ ಒಂದು ಟೆಲಿಗ್ರಾಮ್ ತಂದುಕೊಟ್ಟರು. ಅದರಲ್ಲಿ ಅವರ ಮಗನ ಸಾವಿನ ಸುದ್ದಿ ಬಂದಿತ್ತು. ಮನದಲ್ಲಿ ಆತಂಕದ ಅಲೆ ಮೂಡಿತು. ಆದರೂ ಸಾವರಿಸಿಕೊಂಡು ಟೆಲಿಗ್ರಾಮ್‍ನ್ನು ಮಡಿಚಿ ಜೇಬಿಗಿಳಿಸಿದರು. ನಿರೂಪಕರು ಉಪನ್ಯಾಸಕರಿಗೆ ವೇದಿಕೆ ಬಿಟ್ಟುಕೊಟ್ಟರು. ಭಗವದ್ಗೀತೆಯ ಮೇಲೆ ಅತ್ಯದ್ಬುತ ಉಪನ್ಯಾಸ ನೀಡಿದರು. ಸುಖ ದುಃಖಗಳೆರಡನ್ನೂ ಸ್ಥಿತಪ್ರಜ್ಞರಾಗಿ ಹೇಗೆ ಸ್ವೀಕರಿಸಬೇಕೆಂಬ ಗೀತೋಪದೇಶವನ್ನು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು. ಇಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕೃಷ್ಣಶಾಸ್ತ್ರಿಗಳು ಕಂಬನಿಗರೆದರು. ಅಂತಹ ಸ್ಥಿತಪ್ರಜ್ಞೆಯನ್ನು ಮೆರೆದ ಸಾಹಿತಿ ‘ದೇವುಡು ನರಸಿಂಹಶಾಸ್ತ್ರಿ’.
ದೇವುಡು ನರಸಿಂಹಶಾಸ್ತ್ರಿಗಳು ಮೈಸೂರಿನ ವೈದಿಕ ಸಂಪ್ರದಾಯಸ್ತ ಕುಟುಂಬದಲ್ಲಿ 1892 ರಲ್ಲಿ ಜನಿಸಿದರು. ತಂದೆ ದೇವುಡು ಕೃಷ್ಣಶಾಸ್ತ್ರಿ, ತಾಯಿ ಸುಬ್ಬಮ್ಮ. ಮೈಸೂರಿನಲ್ಲೇ ಶಿಕ್ಷಣ ಪ್ರಾರಂಭಿಸಿದ ನರಸಿಂಹಶಾಸ್ತ್ರಿಗಳು ಮಹಾರಾಜಾ ಕಾಲೇಜಿನಲ್ಲಿ ಬಿ.ಎ ಹಾಗೂ ಎಂ.ಎ ಪದವಿಗಳನ್ನು ಪಡೆದರು. 
ಬೆಂಗಳೂರಿನ ಆರ್ಯ ವಿದ್ಯಾ ಶಾಲೆಯಲ್ಲಿ ಉಪಾದ್ಯಾಯರಾಗಿ ವೃತ್ತಿಗೆ ಸೇರಿದರು. ಅಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ಗಾಂಧಿನಗರದಲ್ಲಿ ತಾವೇ ಹೈಸ್ಕೂಲನ್ನು ಪ್ರಾರಂಭಿಸಿ ಅದರ ಮುಖ್ಯೋಪಾಧ್ಯಾಯರಾದರು. ಈ ಕೆಲಸವೂ ತೃಪ್ತಿ ನೀಡದಾದಾಗ ಅದನ್ನು ಬಿಟ್ಟು ಸಾಹಿತ್ಯ ಸೇವೆಗೆ ಮುಂದಾದರು.
ದೇವುಡು ನರಸಿಂಹಶಾಸ್ತ್ರಿಗಳು ಅನೇಕ ಪ್ರಕಾರದ ಸಾಹಿತ್ಯ ರಚನೆ ಮಾಡಿದರು. ಜೊತೆಗೆ ಕನ್ನಡ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದರು ಅಲ್ಲದೇ ಉತ್ತಮ ವಾಗ್ಮಿಗಳು ಆಗಿದ್ದರು.
ಇವರ ಉಪನ್ಯಾಸ ಕಲೆಗೆ ಮಾರುಹೋದ ಉಡುಪಿಯ ಆಸಕ್ತರೆಲ್ಲ ಸೇರಿ ಉಪನ್ಯಾಸಕ್ಕೆ ಆಹ್ವಾನಿಸಿದರು. ಜೊತೆಗೆ ಮಡದಿ ಗೌರಮ್ಮನವರಿಗೂ ಆಹ್ವಾನವಿತ್ತು. ಉಎಉಪಿಗೆ ಹೊರಟ ದೇವುಡು ದಂಪತಿಗಳಿಗೆ ಆಕಸ್ಮಿಕವಾಗಿ ಕೃಷ್ಣಶಾಸ್ತ್ರಿಗಳು ಭೇಟಿಯಾದರು. ಅವರನ್ನೂ ಉಡುಪಿಗೆ ಕರೆದುಕೊಂಡು ಹೋದರು.
ಉಪನ್ಯಾಸ ಪ್ರಾರಂಭವಾಗುವ ವೇಳೆಗೆ ಟೆಲಿಗ್ರಾಮ್ ಬಂತು. ಅದರಲ್ಲಿ ಮಗನ ಸಾವಿನ ಸುದ್ದಿ ಪ್ರಕಟವಾಗಿತ್ತು. ಆದರೂ ವಿಚಲಿತರಾಗದೇ ಭಗವದ್ಗೀತೆಯ ಮೇಲೆ ಅಧ್ಬುತ ಉಪನ್ಯಾಸ ನೀಡಿದರು. ಅದು ಅಮೋಘವಾಗಿತ್ತು. ಈ ಹಿಂದೆ ಹಲವು ಬಾರಿ ದೇವುಡು ಭಗವದ್ಗೀತೆಯ ಮೇಲೆ ಮಾಡಿದ ಉಪನ್ಯಾಸಕ್ಕಿಂತ ಅಂದಿನ ಉಪನ್ಯಾಸದ ವೈಖರಿಯೇ ಬೇರೆ ಆಗಿತ್ತು ಎಂದು ಅದಕ್ಕೆ ಸಾಕ್ಷಿಯಾಗಿದ್ದ ಕೃಷ್ಣಶಾಸ್ತ್ರಿಗಳು ಬರೆದಿಟ್ಟಿದ್ದಾರೆ. ಕಾರ್ಯಕ್ರಮ ಮುಗಿದ ಕೂಡಲೇ ಬೆಂಗಳೂರಿಗೆ ಮರಳಿದರು.
ರೈಲ್ವೇ ನಿಲ್ದಾಣದಲ್ಲಿ ಇಳಿದ ದೇವುಡು ಕೃಷ್ಣಶಾಸ್ತ್ರಿಗಳನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಟೆಲಿಗ್ರಾಮ್‍ನ ವಿಷಯ ತೆಗೆದು ತಮ್ಮ ಮಗ ರಾಮು ತೀರಿಕೊಂಡ ಬಗ್ಗೆ ಹೇಳಿದಾಗ ಕೃಷ್ಣಶಾಸ್ತ್ರಿಗಳು ದಂಗಾದರು. ಈ ಸುದ್ದಿಯನ್ನು ಹೆಂಡತಿಗೆ ಹೇಗೆ ತಿಳಿಸಿವುದೆಂದು ಪೇಚಾಡಿಕೊಂಡರು.  ವಿಷಯ ತಿಳಿದಾಗ ಮಡದಿ ಗೌರಮ್ಮ ಮೂರ್ಛೆ ಹೋದರು. ಎಚ್ಚೆತ್ತ ನಂತರ ಗೋಳಾಡಿದರು. ಅವರು ಬೆಂಗಳೂರು ತಲುಪುವ ವೇಳೆಗೆ ಮಗನ ಅಂತ್ಯಸಂಸ್ಕಾರ ಮುಗಿದು ಹೋಗಿತ್ತು. ತಂದೆ ತಾಯಿಗಳಿಗೆ ಕೊನೆಗೂ ಮಗನ  ಮುಖ ನೋಡಲಾಗಲಿಲ್ಲ. ಮಗನ ಸಾವಿನ ಸುದ್ದಿ ತಿಳಿದ ಮೇಲೂ ಅದ್ಭುತ ಉಪನ್ಯಾಸ ನೀಡಿದ ದೇವುಡು ಬಗ್ಗೆ ಕೃಷ್ಣಶಾಸ್ತ್ರಿಗಳಿಗೆ ಅಪಾರ ಗೌರವ ಮೂಡಿತು. 
ಸರ್ವಜ್ಞ ತ್ರಿಪದಿ ಸಂಪಾದಕರಾದ ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರಿಗೂ ಮತ್ತು ದೇವುಡು ಅವರಿಗೂ ತುಂಬಾ ಆತ್ಮೀಯತೆ ಇತ್ತು. ಒಮ್ಮೆ ದೇವುಡು ಉತ್ತಂಗಿ ಚೆನ್ನಪ್ಪನವರನ್ನು ಮನೆಗೆ ಊಟಕ್ಕೆ ಬರಲು ಆಹ್ವಾನಿಸಿದರು. ಅದಕ್ಕೆ ಉತ್ತಂಗಿಯವರು ಸಮ್ಮತಿಸಿದರು.
ನಂತರ ದೇವುಡು ಅವರಿಗೆ ಸಮಸ್ಯೆಗಿಟ್ಟುಕೊಂಡಿತು. ಏಕೆಂದರೆ ತಮ್ಮದು ಸಂಪ್ರದಾಯಸ್ಥ, ಮಡಿವಂತ ಬ್ರಾಹ್ಮಣ ಕುಟುಂಬ. ಚೆನ್ನಪ್ಪನವರು ಕ್ರೈಸ್ತ ಧರ್ಮದವರು. ಅವರು ಮನೆಗೆ ಬಂದಾಗ ಹೇಗೆ ಸತ್ಕರಿಸಬೇಕೆಂದು ತಿಳಿಯಲಿಲ್ಲ. ತುಂಬಾ ಪೇಚಾಡಿಕೊಂಡರು. ಕೊನೆಗೆ ತಮ್ಮ ಗುರುಗಳಾದ ವೈದ್ಯನಾಥ ಶಾಸ್ತ್ರಿಗಳನ್ನು ವಿಚಾರಿಸಿದರು. ಅವರು ನಿನ್ನ ಮನೆಗೆ ವಾಸುದೇವನೇ ಬಂದರೆ ಹೇಗೆ ಸತ್ಕರಿಸುತ್ತೀಯೋ ಹಾಗೆಯೇ ಸತ್ಕರಿಸು ಎಂದರು. ದೇವುಡು ಅವರಿಗೆ ಸಮಾದಾನ ಸಂತೋಷಗಳೆರಡೂ ಆದವು.
ಮಾರನೇ ದಿನ ಉತ್ತಂಗಿ ಚೆನ್ನಪ್ಪನವರು ದೇವುಡು ಮನೆಗೆ ಬಂದರು. ದೇವುಡು ಸಪತ್ನಿಕರಾಗಿ ಉತ್ತಂಗಿ ಚೆನ್ನಪ್ಪನವರ ಪಾದ ತೊಳೆದು ಪಾದೋದಕವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ನಂತರ ಅವರನ್ನು ಕುಳ್ಳಿರಿಸಿ ಸಂಭಾಷಿಸುತ್ತಾ ಸಹಪಂಕ್ತಿ ಭೋಜನ ಮಾಡಿದರು. ಉತ್ತಂಗಿಯವರಿಗೆ ಪರಮಾಶ್ಚರ್ಯವಾಯಿತು.
ದೇವುಡು ಅವರಿಗೆ ಸ್ವಲ್ಪ ವಯಸ್ಸಾದ ಮೇಲೆ ಮಧುಮೇಹ ಕಾಯಿಲೆ ಬಂತು. ಅದರಿಂದ ತೀವ್ರ ಸಂಕಷ್ಟಕ್ಕೀಡಾದರು. ಆಗಿನ ಕಾಲದಲ್ಲಿ ಈಗಿನಂತೆ ಸೂಕ್ತ ಔಷಧಿಗಳ ಸೌಲಭ್ಯ ಇರಲಿಲ್ಲ. ಅವರ ಒಂದು ಕಾಳಿಗೆ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಳ್ಳಬೇಕಾಯಿತು. ಇದನ್ನು ನೋಡಿದ ಸ್ನೇಹಿತರೊಬ್ಬರು ಕಣ್ಣೀರಿಟ್ಟರು. ಅದಕ್ಕೆ ದೇವುಡು ಅವರು ‘ಲೋ ಹೆಣ್ಣಿನ ಃಆಗೆ ಯಾಕೆ ಅಳ್ತೀಯಾ, ನನ್ನ ಕಾಲು ದೇವರಿಗೆ ಬೇಕಾಗಿತ್ತು ಅಂತಾ ಕಾಣುತ್ತೆ. ಅವನೇ ಕೊಟ್ಟ, ಅವನೇ ಕಿತ್ಕೊಂಡ’ ಎಂದು ಸಾಂತ್ವಾನ ಹೇಳಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಸ್ಥಿತಪ್ರಜ್ಞತ್ವ ಮೆರೆದರು.
ದೇವುಡು ಅನೇಕ ಕೃತಿಗಳನ್ನು ರಚಿಸಿದರು. ಚಾರಿತ್ರಿಕ ಹಿನ್ನಲೆಯುಳ್ಳ ಅವರ ‘ಮಯೂರ’ ಕಾದಂಬರಿ ಯಶಸ್ವಿ ಚಲನಚಿತ್ರವಾಯಿತು. ಮಕ್ಕಳ ಮನಸ್ಸನ್ನು, ಅಭಿರುಚಿಯನ್ನು ಚೆನ್ನಾಗಿ ತಿಳಿದಿದ್ದ ದೇವುಡು ಅನೇಕ ಪ್ರಕಾರದ ಮಕ್ಕಳ ಸಾಹಿತ್ಯ ರಚನೆ ಮಾಡಿದರು. ಒಬ್ಬ ಉತ್ತಮ ಸಾಹಿತಿಯಾಗಿ, ಆದರ್ಶ ಉಪಾದ್ಯಾಯರಾಗಿ, ದಾರ್ಶನಿಕರಾಗಿ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ದೇವುಡು 1962 ರಲ್ಲಿ ವಿಧಿವಶರಾದರು. ಆದರೆ 1963 ರಲ್ಲಿ ಅವರ ‘ಮಹಾಕ್ಷತ್ರಿಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದರೂ ಅದನ್ನು ಸ್ವೀಕರಿಸಲು ಅವರು ಬದುಕಿರಲಿಲ್ಲ. ಇದಕ್ಕಿಂತ ವಿಷಾದದ ಸಂಗತಿ ಇನ್ನೇನಿದೆ? ಆದರೂ ದೇವುಡು ಇಂದಿಗೂ ಸಾಹಿತ್ಯಾಸಕ್ತರ ಮನದಲ್ಲಿ ಸ್ಥಿರವಾಗಿ ನೆಲೆಯೂರಿದ್ದಾರೆ.
- ಆರ್.ಬಿ.ಗುರುಬಸವರಾಜ.


No comments:

Post a Comment