April 28, 2014

1947ಕ್ಕಿಂತ ಮುಂಚಿನ ಮತ್ತು ನಂತರ ಕಾಲದ ಶಿಕ್ಷಣದ ಸ್ಥಿತಿಗತಿ:ಒಂದು ಪಕ್ಷಿನೋಟ

1947ಕ್ಕಿಂತ ಮುಂಚಿನ ಮತ್ತು ನಂತರ ಕಾಲದ ಶಿಕ್ಷಣದ ಸ್ಥಿತಿಗತಿ:ಒಂದು ಪಕ್ಷಿನೋಟ

         ಶಿಕ್ಷಣದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಮಾನವನಿಗೆ ಯೋಚನಾಶಕ್ತಿ, ಕಲಿಯುವ ಕಾತರ, ಹುಡುಕುವ ತವಕ ಮೂಡಿಬಂದ ದಿನಗಳಿಂದ ಶಿಕ್ಷಣದ ಪ್ರಕ್ರಿಯೆ ಹುಟ್ಟಿ ಬೆಳೆಯುತ್ತಾ ಸಾಗಿದೆ. ಅಂದಿನಿಂದ ಇಂದಿನವರೆಗೆ ಅನೇಕ ಶಿಕ್ಷಣ ಪದ್ಧತಿಗಳು ಕಾಲಗರ್ಭದಲ್ಲಿ ಹುದುಗಿ ಇತಿಹಾಸ ಸೇರಿವೆ. ಅವುಗಳನ್ನೆಲ್ಲಾ ಅವಲೋಕಿಸಿದಾಗ ಕಲಿಯುವವರಲ್ಲಿ ಕಲಿಕೆಯನ್ನು ಮೂಡಿಸಿ ಶಾಶ್ವತಗೊಳಿಸುವುದೇ ಪ್ರಮುಖ ಗುರಿಯಾಗಿರುವುದು ಕಂಡುಬರುತ್ತದೆ.

 ಸ್ವಾತಂತ್ರಕ್ಕಿಂತ (1947) ಮೊದಲ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯತ್ತ ಕಣ್ಣು ಹಾಯಿಸಿದರೆ ನಮಗೆ ಮೊದಲು ಗೋಚರಿಸುವುದು ‘ವೇದಗಳ ಕಾಲದ ಶಿಕ್ಷಣ’ ಅಂದಿನ ಶಿಕ್ಷಣ ಗುರುಕುಲಗಳಲ್ಲಿ ನಡೆಯುತ್ತಿದ್ದು, ಅದು ಸಮಾಜದ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಅಂದರೆ ಅಂದಿನ ಸಮುದಾಯದ ಮೇಲ್ವರ್ಗಗಳೆನಿಸಿಕೊಂಡ ಕ್ಷತ್ರಿಯರು, ಬ್ರಾಹ್ಮಣರು ಮತ್ತು ವೈಣಿಕರಿಗೆ ಮಾತ್ರ ಅದೂ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಮಹಿಳೆಯರು ಮತ್ತು ಶೂದ್ರರು ಶಿಕ್ಷಣದಿಂದ ವಂಚಿತರಾಗಿದ್ದರು. ಕ್ಷತ್ರಿಯರಿಗೆ ಶಸ್ತ್ರಾಭ್ಯಾಸ, ಗಜಶಾಸ್ತ್ರ ಮತ್ತು ರಾಜನೀತಿ ಶಾಸ್ತ್ರಗಳು ಮೀಸಲಾಗಿದ್ದರೆ, ಬ್ರಾಹ್ಮಣರಿಗೆ ವೇದ ಮತ್ತು ಉಪನಿಷತ್ತುಗಳ ಅಧ್ಯಯನ ಹಾಗೂ ಪಠಣ, ಹಾಗೂ ವೈಣಿಕರಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರ ಮೀಸಲಾಗಿತ್ತು. ಹೀಗೆ ಅಂದಿನ ಶಿಕ್ಷಣವು ನಿರ್ದಿಷ್ಟ ವ್ಯಕ್ತಿಗಳಿಗೆ, ನಿರ್ದಿಷ್ಟ ವಿಷಯಗಳಿಗೆ ಮಾತ್ರ ಸೀಮಿತಗೊಂಡಿತ್ತು. ‘ಮನುಸ್ಮøತಿ’ಯ ಪ್ರಕಾರ ಕೆಳಜಾತಿಯವರು ಮತ್ತು ಮಹಿಳೆಯರನ್ನು ಶಿಕ್ಷಣದಿಂದ ದೂರವಿಡಲಾಗಿತ್ತು. ಅವರು ಶಿಕ್ಷಣ ಪಡೆಯುವುದು ಅಪರಾಧವಾಗಿತ್ತು. ವೇದಗಳ ಕಾಲದ ಕೊನೆಗೆ ಈ ಕಟ್ಟುಪಾಡುಗಳಲ್ಲಿ ಸ್ವಲ್ಪ ಬದಲಾವಣೆಯಾಗಿ ಮಹಿಳೆಯರೂ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಯಿತು.

ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದ ಶಿಕ್ಷಣದಲ್ಲಿಯೂ ಯಾವ ಮಹತ್ತರವಾದ ಬದಲಾವಣೆಗಳೇನೂ ಸಂಭವಿಸಲಿಲ್ಲ. ಈ ಸಮಯದಲ್ಲಿ ಶಿಕ್ಷಣದ ಮೇಲಿನ ನಿರ್ಬಂಧಗಳು ಸ್ವಲ್ಪ ಸಡಿಲಗೊಂಡವಾದರೂ ಕೆಳವರ್ಗದವರು, ಮಹಿಳೆಯರು ಶಿಕ್ಷಣ ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಬ್ರಿಟಿಷರು ಶಿಕ್ಷಣ ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸಿದ ಮೇಲೆ ತಮ್ಮ ಆಡಳಿತಕ್ಕನುಗುಣವಾಗುವಂತಹ ಶಿಕ್ಷಣವನ್ನು ನೀಡಿದರು. ಆದರೆ ಅದು ಜನರಿಗಾಗಲೀ, ಜನಸಮುದಾಯದ ಏಳಿಗೆಗಾಗಲೀ ಸಹಕಾರಿಯಾಗಲಿಲ್ಲ. 

1950ರಲ್ಲಿ ಸಂವಿಧಾನದ ಮೂಲಕ ನಮ್ಮ ದೇಶವು ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಘೋಷಿಸಿಕೊಂಡು ಶಿಕ್ಷಣದ ಸಾರ್ವತ್ರೀಕರಣದ ಕನಸನ್ನು ಕಂಡಿತು. ಶಿಕ್ಷಣವು ಸಾರ್ವತ್ರೀಕರಣಗೊಳ್ಳದಿದ್ದರೆ ‘ಮನುಷ್ಯರೆಲ್ಲ ಹುಟ್ಟಿನಿಂದ ಸಮಾನರು’ ಎಂಬ ತತ್ವದ ಆಧಾರದ ಮೇಲೆ ರೂಪಿತಗೊಂಡ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅರ್ಥವಿಲ್ಲವೆಂಬುದನ್ನು ತಿಳಿದ ಅಂದಿನ ರಾಷ್ಟ್ರನಾಯಕರು, ತತ್ವಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸುವ ಗುರಿ ಹೊಂದಿದ್ದರು. ಇದರಿಂದ ಸಮುದಾಯದ ಎಲ್ಲಾ ಜನರಿಗೂ ಹೆಣ್ಣು-ಗಂಡು ಎಂಬ ಬೇಧವಿಲ್ಲದೇ (ಅವರಿಗೆ ಇಷ್ಟವಾದ) ಶಿಕ್ಷಣ ಪಡೆಯುವ ಅವಕಾಶ ದೊರೆಯಿತು. ಅಂದಿನಿಂದ ಇಂದಿನವರೆಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ದೊರೆಯುತ್ತಿದೆಯಾದರೂ ಇನ್ನೂ ನಾವು ತಲುಪಿಲ್ಲ. ಸರ್ಕಾರವು 6-14 ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಪ್ರಯತ್ನಗಳಂತೂ ಮುಂದುವರಿಯುತ್ತಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದು ಐದು ದಶಕಗಳು ಕಳೆದರೂ, ನಮ್ಮಲ್ಲಿ ಇನ್ನೂ ಪಾಳೆಗಾರಿಕೆ ಸಮಾಜ ವ್ಯವಸ್ಥೆ (ಈeuಜಚಿಟism) ಯ ಲಕ್ಷಣಗಳು ಮರೆಯಾಗಿಲ್ಲ. ಭೂಮಿ ಅಥವಾ ಆಸ್ತಿ ಕೆಲವೇ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಚಾಮರಾಜನಗರ, ಮಂಡ್ಯ, ಬಳ್ಳಾರಿ, ಕೋಲಾರ, ರಾಯಚೂರು ಹೀಗೆ ಅನೇಕ ಜಿಲ್ಲೆಗಳಲ್ಲಿ ಈಗಲೂ ಜಾರಿಯಲ್ಲಿರುವ ಪಾಳೆಗಾರಿಕೆ ಪದ್ಧತಿಯಿಂದ ಶಿಕ್ಷಣ ಕುಂಟಿತಗೊಳ್ಳುತ್ತಿದೆ. ಬಡತನವೆಂಬ ಮಾರಿಯು ಶಿಕ್ಷಣ ಕ್ಷೇತ್ರಕ್ಕೆ ಪೆಂಡಭೂತವಾಗಿ ಕಾಡುತ್ತಿದೆ.

ಆಡಳಿತಶಾಹಿಯ ಅಧಿಕಾರ ಕೇಂದ್ರೀಕರಣ ವ್ಯವಸ್ಥೆಯೂ ಸಹ ಶಿಕ್ಷಣ ಕ್ಷೇತ್ರಕ್ಕೆ ಅಡ್ಡಿಗಲ್ಲಾಗಿದೆ. ಅಂದರೆ ಕೇಂದ್ರ ಸರ್ಕಾರವು ಎನ್.ಸಿ.ಇ.ಆರ್.ಟಿ ಮೂಲಕ, ರಾಜ್ಯ ಸರ್ಕಾರವು ಡಿ.ಎಸ್.ಇ.ಆರ್.ಟಿ ಮೂಲಕ ಅವರ ಪರಿಕಲ್ಪನೆಗಳನ್ನು ಧರಿಸಿದ ಪಠ್ಯ ಚೌಕಟ್ಟು ರೂಪಿಸಿ ಸಿದ್ಧಪಡಿಸುತ್ತಿರುವುದು ಆಡಳಿತ ವ್ಯವಸ್ಥೆಯ ಪ್ರತಿರೂಪ. ಇತ್ತೀಚಿನ ಶಿಕ್ಷಣವು ಶಿಕ್ಷಕರಿಗೆ ಪ್ರತಿಬಂಧಕಾಜ್ಞೆಗಳನ್ನು ಹೇರುತ್ತಿದೆ. ಇದನ್ನೇ ಕಲಿಸಬೇಕು, ಹೀಗೇ ಕಲಿಸಬೇಕು, ಇಷ್ಟೇ ಕಲಿಸಬೇಕು, ಹೀಗೇ ಇರಬೇಕು ಎಂಬಿತ್ಯಾದಿ ಹೆಚ್ಚಿನ ಹೊರೆ ಶಿಕ್ಷಕನ ಮೇಲಿದೆ. ಆದರೆ ಕಲಿಸುವವರಿಗೆ ಕಲಿಸುವ ಕ್ರಿಯೆಯಲ್ಲಿನ ತಮ್ಮದೇ ಆದ ಸ್ವಾತಂತ್ರ್ಯಕ್ಕೆ ಕಿಲುಬು ಕಾಸಿನ ಇಮ್ಮತ್ತಿಲ್ಲದಂತಾಗಿದೆ. ಇಂದಿನ ಶಿಕ್ಷಣ ಶಿಕ್ಷಕರಿಗೆ ಕುದುರೆ ಲಗಾಮಿನಂತಾಗಿದೆ.

ಇನ್ನು ಶಿಕ್ಷಕರಾದ ನಮ್ಮಲ್ಲೂ ಸಹ ಅರೆಪಾಳಿಗಾರಿಕೆ ಪ್ರವೃತ್ತಿಗಳು ಮನೆಮಾಡಿವೆ. ಅಂದರೆ ಮಕ್ಕಳು ಮತ್ತು ಶಿಕ್ಷಕರ ನಡುವಿನ ಮುಕ್ತ ಸಂವಹನಕ್ಕೆ ಅವಕಾಶವಿಲ್ಲದಂತಾಗಿದೆ. ನಾವು ಮಕ್ಕಳನ್ನು ಪ್ರಶ್ನಿಸಲು ಬಿಡುತ್ತಿಲ್ಲ. ಅವರದೇ ಆದ ಕಲಿಕಾ ಸ್ವಾತಂತ್ರ್ಯವನ್ನು ನಾವು ಕಿತ್ತುಕೊಳ್ಳುತ್ತಿದ್ದೇವೆ. ಇಂದು ಮಗು-ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳುತ್ತೇವೆ. ಆದರೆ ನಮ್ಮ ಎಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಮುಕ್ತ ಅವಕಾಶಗಳನ್ನು ಕಲ್ಪಸಿದ್ದೇವೆ? ಶಿಸಿನ ಹೆಸರಿನಲ್ಲಿ ಮಕ್ಕಳ ವೈಯಕ್ತಿಕತೆ ಮತ್ತು ಸ್ವತಂತ್ರ ಮನೋಭಾವವನ್ನು ಕಸಿದುಕೊಳ್ಳುತ್ತಿದ್ದೇವೆ.

ಇಂದಿನ ಶಿಕ್ಷಣವು ಅನೇಕ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಆದರೆ ಅದನ್ನು ಕೊಡುವವರು ಮತ್ತು ಪಡೆದುಕೊಳ್ಳುವವರ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಶಿಕ್ಷಣ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳುತ್ತೇವೆ. ಆದರೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವು ಹೌದು. ಅದನ್ನು ಸಮುದಾಯದ ಎಲ್ಲಾ ವರ್ಗವೂ ಅರಿತು, ಮಕ್ಕಳ ಇಷ್ಟಪಡುವಂತಹ ಶಿಕ್ಷಣ ನೀಡಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಇನ್ನೊಬ್ಬರ ಮೇಲೆ ಹಾಕದೆ ತಾವೇ ನಿಭಾಯಿಸಿಕೊಂಡು ಹೋಗಬೇಕು. ನಾವಿಂದು ವಾಸ್ತವಿಕತೆಯನ್ನು ಮರೆತು ಆದರ್ಶಗಳಲ್ಲಿ ತೇಲಾಡುತ್ತಿದ್ದೇವೆ. ಆಕಾಶದಲ್ಲಿ ಹಾರಾಡುವ ಬದಲು ನಿಂತ ನೆಲವನ್ನು ತಿಳಿಯಲು ಪ್ರಯತ್ನಿಸಬೇಕು. ಶಿಕ್ಷಣದಲ್ಲಿ ಕನಸು ಕಾಣುವುದರ ಜೊತೆಗೆ ಪರಿಸ್ಥಿಯನ್ನು ಅರ್ಥಮಾಡಿಕೊಳ್ಳವ ಪ್ರಯತ್ನವಾಗಬೇಕು. ಎಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಬಲವಾಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಪ್ರಗತಿ ಕುಂಟುತ್ತಾ ಸಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ

‘ಟೀಚರ್’ ಫೆಬ್ರವರಿ 2006
- ಆರ್.ಬಿ.ಗುರುಬಸವರಾಜ

No comments:

Post a Comment