April 28, 2014

ಕಪ್ಪು ಹುಡುಗನ ಕಟ್ಟಿಗೆಯ ಗಡಿಯಾರ

ದಿನಾಂಕ 19-06-2014 ರ 'ವಿಜಯವಾಣಿ'ಯ ವಿದ್ಯಾರ್ಥಿ ಮಿತ್ರ ಪುರವಣಿಯಲ್ಲಿ ಪ್ರಕಟವಾದ ಲೇಖನ



ಕಪ್ಪು ಹುಡುಗನ ಕಟ್ಟಿಗೆಯ ಗಡಿಯಾರ

ಅವನೊಬ್ಬ ಬಡ ಗುಲಾಮಿ ಹುಡುಗ, ಆದರೆ ಅವನ ಕಂಗಳಲ್ಲಿ ನಕ್ಷತ್ರಗಳ ಹೊಳಪು ತುಂಬಿತ್ತು. ಮನದಲ್ಲಿ ತುಡಿತ, ಕೆಲಸದಲ್ಲಿ ಸೃಜನಶೀಲತೆ ಇತ್ತು. ಯಾವುದನ್ನಾದರೂ ವಿಶೇಷ ಆಸಕ್ತಿಯಿಂದ ಗಮನಿಸುವ ಅವನ ಗುಣ, ಅದರಿಂದ ಹೊಸ ಲೋಕವನ್ನು ಸೃಷ್ಟಿಸುವ ಬಯಕೆ ಅದಮ್ಯವಾಗಿತ್ತು. ತನ್ನ ಸಂಬಂದಿಯ ಕೈಯಲ್ಲಿದ್ದ ಕೈಗಡಿಯಾರಕ್ಕೆ ಮೋಹಿತನಾದ ಆ ಹುಡುಗ ಅದನ್ನು ಪಡೆದು ಕೈಗೆ ಕಟ್ಟಿಕೊಂಡು ಬೀಗಿದ್ದ. ಆದರೂ ಅದರರೊಳಗಿನ ಭಾಗಗಳ ಕಾರ್ಯ ರಚನೆಯನ್ನು ತಿಳಿಯುವಾಸೆ. ಗಡಿಯಾರವನ್ನು ಬಿಚ್ಚಿ ಅವುಗಳ ಭಾಗಗಳನ್ನು ಅಧ್ಯಯನ ಮಾಡಿ ಕಟ್ಟಿಗೆಯಿಂದ ವಾಚನ್ನು ತಯಾರಿಸಿದ ಆ ಹುಡುಗನಾರು ಗೊತ್ತೇ? ಅವನೇ ಬೆಂಜಮಿನ್ ಬೆನ್ಹಕರ್.


ಬೆನ್ಹಕರ್ ಅಮೇರಿಕಾದ ಮೇರಿಲ್ಯಾಂಡಿನಲ್ಲಿ ನವೆಂಬರ್ 9 ರ 1731ರಲ್ಲಿ ಜನಿಸಿದನು. ಬಾಲ್ಯ ಜೀವನದಲ್ಲಿ ತೋಟದ ಮನೆಯೇ ಅವನ ಪ್ರಯೋಗಶಾಲೆಯಾಗಿತ್ತು. ವ್ಯವಸಾಯವೇ ಅಧ್ಯಯನ ವಸ್ತುವಾಗಿತ್ತು. ಯಾವ ಮಾರ್ಗದರ್ಶನವೂ ಇಲ್ಲದೇ ತಾನೇ ತನ್ನ ಕೆಲಸದಲ್ಲಿ ಸೃಜನಶೀಲತೆ ಸೃಷ್ಠಿಸಿಕೊಂಡಿದ್ದ. ತೋಟದ ಪಕ್ಕದ ಕಾಲುವೆಗೆ ಚಿಕ್ಕ ಆಣೆಕಟ್ಟೆಯೊಂದನ್ನು ನಿರ್ಮಿಸಿ ಅದರಿಂದ ತನ್ನ ಜಮೀನಿಗೆ ನೀರಾವರಿ ವ್ಯವಸ್ಥೆಯನ್ನು ಮಾಡಿದ. ಈ ಕಾರ್ಯದಿಂದ ಬೆನ್ಹಕರ್ ಒಣಭೂಮಿಯಲ್ಲಿ ನಳನಳಿಸುವ ಬೆಳೆಗಳನ್ನು ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದ.

ಹತ್ತಿರದಲ್ಲಿ ಶಾಲೆಯಿಲ್ಲದ ಕಾರಣ ಅಜ್ಜಿಯಿಂದ ಓದುವುದನ್ನು ಕಲಿತುಕೊಂಡಿದ್ದ. ನಂತರ ತನ್ನ ಮನೆಯ ಸಮೀಪದಲ್ಲೇ ಬಾಡಿಗೆಗೆ ಬಂದ ಶಿಕ್ಷಕರಿಂದ, ಅನೌಪಚಾರಿಕ ಶಿಕ್ಷಣ ಪಡೆದ ಬೆನ್ಹಕರ್ ಅವರಿಂದ ಬರೆಯುವುದನ್ನು ಹಾಗೂ ಸಲ್ಪ ಗಣಿತವನ್ನೂ ಸಹ ಕಲಿತುಕೊಂಡ.

ಇಪ್ಪತೋಂದನೇ ವಯಸ್ಸಿನಲ್ಲಿ ನಡೆದ ಘಟನೆಯೊಂದು ಅವನ ಜೀವನದ ದಿಕ್ಕನ್ನೇ ಬದಲಿಸಿತು. ಅದೆಂದರೆ ಅವನೇ ರಚಿಸಿದ ಕಟ್ಟಿಗೆಯ ಕೈಗಡಿಯಾರ. ತನ್ನ ಸಂಬಂಧಿಯ ಕೈಯಲ್ಲಿ ಕೈಗಡಿಯಾರ ನೊಡಿದ ಬೆನ್ಹಕರ್ ಅದರ ಭಾಗಗಳ ಕಾರ್ಯ ವಿಧಾನ ತಿಳಿಯುದಕ್ಕಾಗಿ ಅದನ್ನು ಸಂಪೂರ್ಣವಾಗಿ ಬಿಚ್ಚಿಟ್ಟ. ಅದರ ಒಂದೊಂದು ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವುಗಳ ಚಿತ್ರ ಬರೆದುಕೊಂಡ. ನಂತರ ವಾಚಿನ ಭಾಗಗಳನ್ನು ಯಥಾವತ್ತಾಗಿ ಜೋಡಿಸಿ ಅದನ್ನು ಮೊದಲಿನಂತೆಯೇ ಹಿಂತಿರುಗಿಸಿದ. ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಿಗೆಯ ತುಂಡುಗಳಿಂದ ಭಾಗಗಳನ್ನು ಕೊರೆದುಕೊಂಡು ಗಡಿಯಾರವನ್ನು ತಯಾರಿಸಿದ. ಹೀಗೆ ತಯಾರಿಸಿದ ಕಟ್ಟಿಗೆ ಗಡಿಯಾರ ಜಗತ್ತಿನಾದ್ಯಂತ ಸುದ್ದಿಮಾಡಿತು. ಸುಮಾರು 50 ವರ್ಷಗಳ ಕಾಲ ಅದು ನಿಖರವಾಗಿ ಕಾರ್ಯ ನಿರ್ವಹಿಸಿತೆಂದರೆ ಎಲ್ಲರೂ ಆಶ್ಚರ್ಯ ಪಡಬೇಕಾದ ವಿಷಯ. ನಂತರ ಜೋಸೆಫ್ ಎಲಿಕಾಟ್ ಸಂಕೀರ್ಣ ಗಡಿಯಾರ ರಚಿಸಲು ಬೆನ್ಹಕರ್ ಸಹಾಯ ಮಾಡಿದ. ಇದರಿಂದ ಎಲಿಕಾಟ್ ಸಹೋದರರು ಒಳ್ಳೆಯ ಸ್ನೇಹಿತರಾದರು.

ಬೆನ್ಹಕರ್ ತನ್ನ 58ನೇ ವಯಸ್ಸಿನಲ್ಲಿ ಸ್ನೇಹಿತರಿಂದ ಹಾಗೂ ಶಿಕ್ಷಕರಿಂದ ಖಗೋಳಶಾಸ್ತ್ರ ಹಾಗೂ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನ ಪಡೆದು ಅಧ್ಯಯನ ಮಾಡಿದ. ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ನಕಾಶೆ ರಚಿಸಿ. ಅದರಲ್ಲೂ ಮುಖ್ಯವಾಗಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಕುರಿತ ಅಧ್ಯಯನ ಮಾಡಿದ, ಖಗೋಳ ಅಧ್ಯಯನದ ಫಲವಾಗಿ ಖಗೋಳ ಪಂಚಾಂಗವನ್ನೇ ರಚಿಸಿದ. “ಬೆನ್ಹಕರ್ ಪಂಚಾಂಗ”ವೆಂದೇ ಪ್ರಸಿದ್ಧಿಯಾಗಿದ್ದ ಇದು 1792 ರಿಂದ 1797 ಅವಧಿಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯುಳ್ಳ ಪಂಚಾಂಗವಾಗಿತ್ತು. ತನ್ನ ಗುಡಿಸಲನ್ನೇ ಖಗೋಳ ವೀಕ್ಷಣಾಲವನ್ನಾಗಿಸಿಕೊಂಡಿದ್ದ ಬೆನ್ಹಕರ್ ದೀರ್ಘಕಾಲದ ವೀಕ್ಷಣೆಯಿಂದ ಮಾಹಿತಿಗಳ ಲೆಕ್ಕಾಚಾರ ಹಾಕುತ್ತಿದ್ದ. ಅದನ್ನು ತನ್ನ ಆಪ್ತರಿಗೆ ತೋರಿಸಿ ಅದರ ಫಲಿತಾಂಶಗಳನ್ನು ಪಂಚಾಂಗದಲ್ಲಿ ನಮೂದಿಸುತ್ತಿದ್ದ.

ಇವರ ವೀಕ್ಷಣಾ ಹಾಗೂ ನಕ್ಷೆ ರಚನಾ ಕೌಶಲ್ಯವನ್ನು ಗಮನಿಸಿದ ಜಾರ್ಜ್ ವಾಶಿಂಗ್ಟನ್‍ರವರು 1791ರಲ್ಲಿ ಇವರನ್ನು ಅಮೇರಿಕಾ ಸಂಯುಕ್ತ ರಾಜ್ಯಗಳ ಸರ್ವೇಕ್ಷಣಾ ಕಾರ್ಯಕ್ಕೆ ನೇಮಿಸಿಕೊಂಡರು. ಅಮೇರಿಕಾ ಸಂಯುಕ್ತ ರಾಜ್ಯಗಳಲ್ಲಿ ಇದೊಂದು ಗೌರವಾನ್ವಿತ ಸೇವೆಯಾಗಿತ್ತು. ಆ ಕಾರ್ಯವನ್ನು ಅತ್ಯಂತ ನಿಖರವಾಗಿ, ಪ್ರಾಮಾಣಿಕವಾಗಿ ನೆರವೇರಿಸಿದರು.

ಸಮಯ ದೊರೆತಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ಜೀವನದ ಅಚಿತಿಮ ಗುರಿಯನ್ನು ತಲುಪುವಂತೆ ಜನರಿಗೆ ಕರೆ ನೀಡುತ್ತಿದ್ದರು. ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಅನೇಕ ಮಹತ್ತರ ಸಂಶೋಧನೆಗಳಿಂದ ಹೆಸರು, ಕೀರ್ತಿಗಳಿಸಿದ ಬೆನ್ಹಕರ್ “ಪ್ರಥಮ ನಿಗ್ರೋ ವಿಜ್ಞಾನಿ” ಎನಿಸಿಕೊಂಡಿದ್ದ. ಹೀಗೆ ಅಮೇರಿಕಾದ ಜನಮನದಲ್ಲಿ ನೆಲೆನಿಂತ ಬೆನ್ಹಕರ್ ಪ್ರಾಣ 1806ರ ಅಕ್ಟೋಬರ್ 9 ರಂದು ಅಂತರಿಕ್ಷದಲ್ಲಿ ಲೀನವಾಯಿತು. ಇಂತಹ ವ್ಯಕ್ತಿಗೆ 1980ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಅವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿ ಅವರ ಹೆಸರನ್ನು ಚಿರಾಯುವನ್ನಾಗಿಸಿತು.

‘ಭಾಸ್ಕರಪ್ರಭೆ’ ಬಳ್ಳಾರಿ ಜಿಲ್ಲಾ ವಿಜ್ಞಾನ ಪ್ರದರ್ಶನ ಸಂಚಿಕೆ 
- ಆರ್.ಬಿ.ಗುರುಬಸವರಾಜ

No comments:

Post a Comment