April 20, 2014

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಮಂಚೂಣಿಯಲ್ಲಿನ ಮಹಿಳಾ ಮಣಿಗಳು
           21ನೇ ಶತಮಾನದ ಮಹಿಳೆ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಮಾರ್ಚ ತಿಂಗಳು ಬಂತೆಂದರೆ ಸಾಕು ಎಲ್ಲಾ ಮಹಿಳಾ ಸಂಘಟನೆಗಳಲ್ಲೂ ಸಂಚಲನೆಯುಂಟಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ.
ಅಂದಿನ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಆದರೆ ಇಂದು ಆ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಅದ್ವಿತೀಯ. ಅಂತಹ ವಿಶಿಷ್ಟ ಸಾಧನೆಗೈದ ಕೆಲವು ಮಹಿಳಾ ವಿಜ್ಞಾನಿಗಳ ಕಿರು ಪರಿಚಯ ಇಲ್ಲಿದೆ. 

ಹಿಪಾಥಿಯಾ(370-415) : ರೋಮನ್ ದೇಶದ ಗಣಿತಜ್ಞೆ ಹಾಗೂ ಖಗೋಳ ವಿಜ್ಞಾನಿ ಹಿಪಾಥಿಯಾ ಇತಿಹಾಸದಲ್ಲಿ ಮೊದಲ ಮಹಿಳಾ ವಿಜ್ಞಾನಿ ಎಂಬ ಪಟ್ಟ ಧರಿಸಿದ್ದಾಳೆ. ಶಿಕ್ಷಣದಿಂದ ಮಹಿಳೆಯರನ್ನು ದೂರವಿರಿಸಿದ್ದ ಕಾಲದಲ್ಲಿ ಗಣಿತ, ಖಗೋಳ ವಿಜ್ಞಾನ ಹಾಗೂ ಪರಿಸರ ವಿಜ್ಞಾನಗಳನ್ನು ಕಲಿತು ಅಲೆಕ್ಸಾಂಡ್ರಿಯಾ ವಿಶ್ವ ವಿದ್ಯಾಲಯದಲ್ಲಿ ಗಣಿತ ಮತ್ತು ತತ್ವಶಾಸ್ತ್ರ ಉಪನ್ಯಾಸಕಿಯಾಗಿ ಆಯ್ಕೆಯಾದಳಯ. ನಂತರ ಅಲ್ಲಿಯ ಮುಖ್ಯಸ್ಥಳಾಗಿ ಸೇವೆ ಸಲ್ಲಿಸಿದಳು. 
ಹಿಪಾಥಿಯಾ ಗಣಿತ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಳು. ತನ್ನ ಬೋಧನೆಗೆ ಅಗತ್ಯವಿರುವ ಉಪಕರಣಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ್ದಳು. ಇದರಿಂದ ಅನೇಕ ಹೊಸ ಹೊಸ ಉಪಕರಣಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು. ವೈವಿಧ್ಯಮಯ, ಕ್ರಿಯಾತ್ಮಕ ನಾವೀನ್ಯ ತಂತ್ರಗಾರಿಕೆಯ ಬೋಧನಾ ವಿಧಾನಗಳಿಂದ ಹೊಟ್ಟೆಕಿಚ್ಚು ಪಟ್ಟ ಆಡಳಿತ ಮಂಡಳಿ ಇವಳನ್ನು ಕೊಲೆ ಮಾಡಿಸಿದ್ದು ದುರಂತ. ಅಲ್ಲದೇ ಅವಳ ಎಲ್ಲಾ ಬರಹಗಳನ್ನು ನಾಶ ಮಾಡಿದ್ದು ಇನ್ನೂ ಘೋರ ದುರಂತ. ಆದರೂ ಇತಿಹಾಸದಲ್ಲಿ ಅವಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ಮರಿಯಾ ಮೈಕೆಲ್(1818-1889) : ಖಗೋಳ ಶಾಸ್ತ್ರಜ್ಞೆಯಾದ ಮರಿಯಾ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಜನಿಸಿದಳು. ಕೆಲವೇ ವಿಶ್ವ ವಿದ್ಯಾಲಯಗಳು ಮಹಿಳೆಯರಿಗೆ ಪ್ರವೇಶ ನೀಡುತ್ತಿದ್ದ ಕಾಲದಲ್ಲಿ ಬಡತನದಿಂದಾಗಿ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ದೊರೆಯದೇ ಕಂಗಾಲಾದಳು. ಆದರೂ ದೃತಿಗೆಡದೇ ತನ್ನ ಸ್ವ-ಪರಿಶ್ರಮದಿಂದ ಅಬ್ಯಾಸ ಮಾಡಿ ಗ್ರಂಥಾಲಯವೊಂದರಲ್ಲಿ ಕೆಲಸಕ್ಕೆ ಸೇರಿದಳು. ಅಲ್ಲಿಂದ ಅವಳ ಜೀವನದ ಹೊಸ ಅಧ್ಯಾಯ ಪ್ರಾರಂಭವಾಯಿತು. ಅಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಓದಲು ಅವಕಾಶ ದೊರೆಯಿತು. ಮರಿಯಾ ಗಣಿತದಲ್ಲಿ ತುಂಬಾ ಪ್ರತಿಭೆ ಉಳ್ಳವಳಾಗಿದ್ದು, ಖಗೋಳ ಶಾಸ್ತ್ರಜ್ಞನಾದ ತಂದೆಗೆ ನಕ್ಷತ್ರಗಳ ದೂರ ಅಳೆಯಲು ಸಹಾಯ ಮಾಡುತ್ತಿದ್ದಳು.
1847ರಲ್ಲಿ ಮರಿಯಾ ದೂರದರ್ಶಕದ ಸಹಾಯದಿಂದ ಬಿಳಿಯದಾದ ಆಕಾಶಕಾಯವೊಂದನ್ನು ಪತ್ತೆ ಹಚ್ಚಿದಳು. ಅದುವರೆಗೂ ಯಾರೂ ಪತ್ತೆ ಹಚ್ಚಿರದ ಧೂಮಕೇತು ಒಂದನ್ನು ಪತ್ತೆ ಹಚ್ಚಿದ್ದಳು. ಅನಂತರದಲ್ಲಿ ಅವಳು ಜಗದ್ವಿಖ್ಯಾತಿಯಾದಳು. ಪ್ರಪಂಚದ ನಾನಾ ಕಡೆ ಪ್ರವಾಸ ಮಾಡಿ ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದಳು. ಸೂರ್ಯನ ಮೇಲ್ಮೈ ಛಾಯಾ ಚಿತ್ರ ತೆಗೆದವರಲ್ಲಿ ಮರಿಯಾ ಮೊದಲಿಗಳು. ಜೀವನದುದ್ದಕ್ಕೂ ಇತರೆ ಮಹಿಳೆಯರು ಉನ್ನತ ಮಟ್ಟಕ್ಕೆ ಬೆಳೆಯಲು ಪ್ರೇರಣೆ ನೀಡಿದಳು.

ಫ್ಲಾರೆನ್ಸ್ ನೈಟಿಂಗೇಲ್(1820-1910) : ಇಂಗ್ಲೆಂಡ್‍ನಲ್ಲಿ ಆಸ್ಪತ್ರೆಗಳೆಂದರೆ ರೋಗ ಹರಡುವ ತಾಣಗಳಂತಿದ್ದ ಕಾಲದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಬಿರುಗಾಳಿಯಾಗಿ ಬಂದು ವೈದ್ಯಕೀಯ ಕೊಳೆಯನ್ನೆಲ್ಲಾ ತೆಗೆದಳು. ಪಾಲಕರ ವಿರೋಧದ ನಡುವೆಯೂ ಜರ್ಮನಿಗೆ ತೆರಳಿ ನರ್ಸಿಂಗ್‍ನಲ್ಲಿ ಹೆಚ್ಚಿನ ತರರಬೇತಿ ಪಡೆದಳು. ಕ್ರಿಮಿಯನ್ ವಾರ್ ನಡೆದ ಸಂಧರ್ಭದಲ್ಲಿ ಸೈನಿಕ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದಳು. ಪರಿಪೂರ್ಣವಾಗಿ ನರ್ಸ ತರಬೇತಿ ಪಡೆದ ನಂತರವೇ ಆಸ್ಪತ್ರಗಳನ್ನು ಶೂಚಿಗೊಳಿಸುವ ಕಾರ್ಯ ಕೈಗೊಂಡಳು. ಆಸ್ಪತ್ರೆಗಳನ್ನು ಸ್ವಚ್ಚ ಮಂದಿರಗಳನ್ನಾಗಿಸಲು ಶ್ರಮಿಸಿದಳು. ಸೈನಿಕರಿಗೆ ವಿಶೇಷ ಗಮನ ನೀಡಿ ಉಪಚರಿಸುತ್ತಿದ್ದಳು. ಜರ್ಮನಿಯಿಂದ ಹಿಂದಿರುಗಿ ಬಂದ ಮೇಲೆ ನರ್ಸಿಂಗ್ ಶಾಲೆ ತೆರೆದಳು. ಇಂಗ್ಲೆಂಡ್ ಅಲ್ಲದೇ ಭಾರತೀಯ ಆಸ್ಪತ್ರೆಗಳ ಪರಿಸ್ಥಿತಿಗಳನ್ನು ಬದಲಾಯಿಸಲು ಶ್ರಮಿಸಿದಳು. ಉತ್ತಮ ನರ್ಸಿಂಗ್ ಸೇವೆ ಮತ್ತು ಕೌಶಲ್ಯಾಭಿವೃದ್ದಿ ಕುರಿತು ಅನೇಕ ಪುಸ್ತಕಗಳನ್ನು ಬರೆದಳು. ಅಲ್ಲದೇ ಸಂಘಟನೆ, ಪರಿವೀಕ್ಷಣೆ, ಸ್ವಚ್ಚತೆ, ಹಾಗೂ ರೋಗಿಗಳೊಂದಿಗಿನ ಒಡನಾಟ ಕುರಿತ ಪುಸ್ತಕಗಳನ್ನೂ ಬರೆದಳು.

ಮಾರ್ಗರೇಟ್ ಸ್ಯಾಂಗರ್(1879-1966) : ಅಮೇರಿಕಾದಲ್ಲಿ ನರ್ಸ ಆಗಿದ್ದ ಮಾರ್ಗರೇಟ್ ತನ್ನ ಸೇವೆಯಲ್ಲಿ ಶ್ರೀಮಂತ ಕುಟುಂಬಗಳಿಗಿಂತ ಬಡ ಕುಟುಂಬಗಳು ಹೆಚ್ಚು ಮಕ್ಕಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿದಳು. ತಮ್ಮ ಮಕ್ಕಳ ಪಾಲನೆ ಪೋಷಣೆ, ಆರೋಗ್ಯಕ್ಕಾಗಿ ಹಣದ ಅಭಾವ ಎದುರಿಸುತ್ತಿದ್ದ ಬಡ ಕುಟುಂಬಗಳನ್ನು ದಿನವಿಡೀ ನೋಡುತ್ತಿದ್ದಳು. ಬಡ ಹೆಣ್ಣು ಮಕ್ಕಳು ಪದೆ ಪದೇ ಗರ್ಭ ಧರಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸುವ ಅಂದರೆ ಜನನ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ತನ್ನೆಲ್ಲ ಆಸ್ತಿ ಮಾರಿಕೊಂಡು ಗಂಡ ಮತ್ತು ಮಕ್ಕಳೊಂದಿಗೆ ಯುರೋಪ್‍ಗೆ ತೆರಳಿದಳು. 
ಯುರೋಪ್‍ನಿಂದ ಮರಳಿ ಬಂದ ಮೇಲೆ ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಚಿಕ್ಕ ಕುಟುಂಬ ಹೊಂದಲು ಬೇಕಾದ ಶಿಕ್ಷಣವನ್ನು ಬಡವರಿಗೆ ನೀಡಿದಳು. ಅದಕ್ಕಾಗಿ ಕ್ಲಿನಿಕ್ ತೆರೆದು ಬಡ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಾ ಜನನ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದಳು. ಇದು ಆ ಸಮಯದಲ್ಲಿ ಕಾನೂನಿಗೆ ವಿರುದ್ದವಾದುದು ಆಗಿತ್ತು. ಆ ಕಾರಣಕ್ಕಾಗಿ ಅವಳನ್ನು ಅನೇಕ ಬಾರಿ ಬಂಧಿಸಲಾಗಿತ್ತು. ಆದರೂ ಹಠಬಿಡದ ತ್ರಿವಿಕ್ರಮನಂತೆ ತನ್ನ ವಿಚಾರಗಳನ್ನು ಜನರಿಗೆ ತಿಳಿಸುತ್ತಾ ಪ್ರಪಂಚದ ನಾನಾ ಕಡೆಗಳಲ್ಲಿ ಪ್ರವಾಸ ಮಾಡುತ್ತಾ ಬಡಜನರಿಗೆ ಉಪದೇಶ ನೀಡಿದಳು. ನಂತರದ ದಿನಗಳಲ್ಲಿ ಅವಳು ಸಲ್ಲಿಸಿದ ಸೇವೆಯನ್ನು ಗಮನಿಸಿ ಪಾಲಕರ ಮೊದಲ ಅಧ್ಯಕ್ಷಿಣಿಯನ್ನಾಗಿ ಆಯ್ಕೆ ಮಾಡಲಾಯಿತು.

ಗ್ರೇಸ್ ಹೂಪರ್(1906-1992) : ಸಾಧನೆಗೆ ಅಂಗವೈಫಲ್ಯ ಕಾರಣವಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಧೀಮಂತ ಮಹಿಳೆ  ಅಮೇರಿಕಾದ ಗ್ರೇಸ್ ಹೂಪರ್. ತಮ್ಮ ಮಗಳಿಗೆ ಅಂಗವೈಫಲ್ಯದ ಪರಿಣಾಮ ಕಿಂಚಿತ್ತೂ ಗೊತ್ತಾಗದ ರೀತಿಯಲ್ಲಿ ತಂದೆ-ತಾಯಿಗಳು ಅವಳನ್ನು ಬೆಳೆಸಿದರು. ತಾಯಿಯಿಂದ ಪ್ರೀತಿ ವಾತ್ಸಲ್ಯಗಳ ಜೊತೆಗೆ ಗಣಿತವನ್ನು ಹಾಗೂ ತಂದೆಯಿಂದ ಕಷ್ಟಗಳಿಂದ ಹೊರಬರುವ ಕೌಶಲ್ಯವನ್ನು ಕಲಿತಳು. ಅಂದಿನ ಕಾಲದಲ್ಲಿ ವಾಸ್ಸರ್ ಕಾಲೇಜ್ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುತ್ತಿದ್ದ ಏಕೈಕ ಕಾಲೇಜ್ ಎಂದು ಪ್ರಸಿದ್ದವಾಗಿತ್ತು. ಆ ವಾಸ್ಸರ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿ ನಂತರ ಅಲ್ಲಿಯೇ ಗಣಿತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದಳು.
ಪ್ರತಿಷ್ಟಿತ ಯಾಲೆ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದಳು. ಪ್ರಪಂಚದ ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ಸೇರಿದಳು. ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಹಾರ್ವರ್ಡ ವಿಶ್ವ ವಿದ್ಯಾಲಯದಲ್ಲಿ ಸಂಶೋಧನೆ ಮುಂದುವರೆಸಿದಳು. ಈ ಸಂಶೋಧನೆಯಿಂದ ಮೊದಲ ಪೀಳಿಗೆಯ ಕಂಪ್ಯೂಟರ್ ಅಭಿವೃದ್ದಿ ಪಡಿಸಿದಳು. ಮೊದಲ ಕಂಪ್ಯೂಡರ್ ಕಾರ್ಯ ತತ್ರಾಂಶ ರೂಪಿಸಿದವರಲ್ಲಿ ಗ್ರೇಸ್ ಮೊದಲಿಗಳು. ಪ್ರಾರಂಭದಲ್ಲಿ ಕಂಪ್ಯೂಟರ್ ಭಾಷೆ ಅತ್ಯಂತ ಸಂಕೀರ್ಣವಾಗಿತ್ತು. ಇದನ್ನು ಗಮನಿಸಿದ ಗ್ರೇಸ್ ಜನರು ಬಳಸಲು ಅನುಕೂಲಕರವಾದಂತಹ ಕಂಪ್ಯೂಟರ್ ರೂಪಿಸಬಯಸಿದಳು. ಡಾ//ಗ್ರೇಸ್ COBOL ಎಂಬ ಕಂಪ್ಯೂಟರ್ ತತ್ರಾಂಶ ಭಾಷೆ ಅಭಿವೃದ್ದಿ ಪಡಿಸಿದಳು. COBOL ಈಗಲೂ ಬಳಕೆಯಲ್ಲಿರುವ ಕಂಪ್ಯೂಟರ್ ತತ್ರಾಂಶ. ಅವಳ ಸಾಧನೆಗಾಗಿ ಯು.ಎಸ್ ವಿಶ್ವದ ನೌಕಾಪಡೆಯ ಮೊದಲ ಮಹಿಳಾ ಅಡ್ಮಿರಲ್ ಆಗಿ ನೇಮಿಸಿತು.

'ಟೀಚರ್' ಮಾರ್ಚ 2014
ಆರ್.ಬಿ.ಗುರುಬಸವರಾಜ. 

No comments:

Post a Comment