April 19, 2014

ಶಿಕ್ಷಣದಲ್ಲಿ ಋಣಾತ್ಮಕತೆ

ಶಿಕ್ಷಣದಲ್ಲಿ ಋಣಾತ್ಮಕತೆ

ಇತ್ತೀಚೆಗೆ ಶಿಕ್ಷಣದಲ್ಲಿ ಗುಣಾತ್ಮಕತೆಯ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಲಿವೆ. ಗುಣಾತ್ಮಕತೆಯನ್ನು ಅರ್ಥೈಸುವ, ಪರಿಭಾವಿಸುವ ಪ್ರಕ್ರಿಯೆಗಳು ವಿಭಿನ್ನವಾಗಿದ್ದು, ತಜ್ಞರು ವಿಭಿನ್ನ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಗುಣಾತ್ಮಕತೆಯನ್ನು ಅಳೆಯುವ ಮಾನದಂಡಗಳು, ಅವುಗಳಿಗಿರುವ ತಾತ್ವಕ ಹಿನ್ನಲೆ ಹಾಗೂ ಅವುಗಳ ಬಳಕೆಯ ವಿಧಾನಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸಂಸ್ಥೆಯಿಂದ ಸಂಸ್ಥೆಗೆ ಭಿನ್ನವಾಗಿದ್ದು ಏಕತೆ ಎಂಬುದಿಲ್ಲ.
ಕೆಲವರು ಅಂಕಗಳ ಆಧಾರದ ಮೇಲೆ ಗುಣಾತ್ಮಕತೆಯನ್ನು ಅಳೆದರೆ, ಕೆಲವರು ಶ್ರೇಣಿಗಳ ಆಧಾರದ ಮೇಲೆ ಅಳೆಯುತ್ತಾರೆ. ಕೆಲವರು ಪಠ್ಯವಿಷಯಗಳನ್ನಷ್ಟೇ ಮೌಲ್ಯಮಾಪನ ಮಾಡಿದರೆ, ಇನ್ನು ಕೆಲವರು ಸಹಪಠ್ಯ ಚಟುವಟಿಕೆಗಳನ್ನೂ ಮೌಲ್ಯಮಾಪನಕ್ಕೆ ಒಳಪಡಿಸುತ್ತಾರೆ. ಪಠ್ಯ ವಿಷಯಗಳಾದರೆ ನಿರ್ದಿಷ್ಟ/ಏಕರೂಪದ ಮೌಲ್ಯಮಾಪನ ಪದ್ದತಿಗಳಿವೆ. ಆದರೆ ಪಠ್ಯೇತರ ವಿಷಯಗಳಿಗೆ ನಿರ್ದಿಷ್ಟ/ಏಕರೂಪದ ಮೌಲ್ಯಮಾಪನ ಪದ್ದತಿಗಳಿಲ್ಲ. ಒಟ್ಟಾರೆ ಗುಣಮಟ್ಟದ ಅಳತೆಗೋಲು ಸರಿಯಾಗಿಲ್ಲ. ಇದರಿಂದ ಇತ್ತೀಚೆಗೆ ಗುಣಾತ್ಮಕತೆಯ ಬದಲಾಗಿ ಋಣಾತ್ಮಕತೆಯ ಕೂಗು ಹೆಚ್ಚಾಗುತ್ತಿದೆ. ಶಿಕ್ಷಣದ ಸಹ ಭಾಗೀದಾರರೆಲ್ಲರೂ ತಮ್ಮಲ್ಲಿನ ಲೋಪಗಳನ್ನು ಮರೆಮಾಚಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಹೋಗುತ್ತಿದ್ದಾರೆ.
ಪೋಷಕರು ಶಿಕ್ಷಕರ ಮೇಲೆ, ಶಿಕ್ಷಕರು ಪೋಷಕರು ಹಾಗೂ ಅಧಿಕಾರಿಗಳ  ಮೇಲೆ, ಅಧಿಕಾರಿಗಳು ವ್ಯವಸ್ಥೆಯ ಮೇಲೆ-ಹೀಗೆ ಒಂದು ವರ್ಗ ಇನ್ನೊಂದು ವರ್ಗದ ಮೇಲೆ, ತಮ್ಮ ತಪ್ಪುಗಳನ್ನು ಇನ್ನೊಬ್ಬರ ತಪ್ಪುಗಳೆಂಬಂತೆ ಬಿಂಬಿಸುತ್ತಿದ್ದಾರೆ. ಇದೆಲ್ಲದರ ಕೆಟ್ಟ ಪರಿಣಾಮ ಮಕ್ಕಳ ಮೇಲಾಗುತ್ತಿರುವ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ.
ಶಿಕ್ಷಕರನ್ನು ವಿಚಾರಿಸಿದರೆ “ಏನ್ಮಾಡೋದು ರೀ,,, ಈ ಹಾಳಾದ್ ಮಕ್ಳು ಎಷ್ಟು ಹೇಳಿಕೊಟ್ರೂ ಅಷ್ಟೇ, ಕಲಿಯೋದೇ ಇಲ್ಲ, ತಂದೆ-ತಾಯಿಗಳು ಸರಿಯಾಗಿ ಸಾಲಿಗೆ ಕಳ್ಸೋದಿಲ್ಲ. ಬರೆಯೋಕೆ ಪುಸ್ತಕ/ಪೆನ್ನು ಕೊಡ್ಸೋದೇ ಇಲ್ಲ. ಅಧಿಕಾರಿಗಳು ತರಗತಿ ಕಡೆಗೆ ಕಣ್ಣೇ ಹಾಕಲ್ಲ. ಎಷ್ಟು ಹೇಳಿದ್ರೂ ಇಷ್ಟೇ ಬಿಡ್ರಿ,,,” ಎಂದು ರಾಗ ಎಳೆಯುತ್ತಾರೆ. 
ಪೋಷಕರನ್ನು ಕೇಳಿದರೆ “ಸಾಲ್ಯಾಗ ಏನೂ ಸರ್ಯಾಗಿ ಕಲ್ಸಾದೇ ಇಲ್ಲ, ನಮ್ಮಕ್ಳಿಗೆ ನೆಟ್ಗ ಓದಾಕ-ಬರ್ಯಾಕ ಬರಲ್ಲ, ಮಕ್ಳಿಗೆ ನಯ-ವಿನಯ, ಸಂಸ್ಕøತಿ, ಶಿಸ್ತು ಅನ್ನೋದೇ ಇಲ್ಲ, ಏನ್ ಸಾಲಿನೋ ಏನ್ ಶಿಕ್ಷಣಾನೋ” ಎಂದು ಅಲವತ್ತುಕೊಳ್ಳುತ್ತಾರೆ.
ಅಧಿಕಾರಿಗಳ ಮಾತು ಇವೆರಡಕ್ಕೂ ವಿಭಿನ್ನ. “ಈ ಜನ ಪ್ರತಿನಿಧಿಗಳ ಕೈಯಾಗ ಸಾಕಾಗೈತಿ. ಹಗಲೂ ರಾತ್ರಿ ಜೀವ ತಿನ್ತಾರ. ಆ ಮಾಸ್ತರ ಹಂಗ, ಈ ಮಾಸ್ತರ ಹಿಂಗ, ಆ ಸಾಲಿ ಪಾಠ ಸರಿಯಿಲ್ಲ, ಈ ಸಾಲಿ ಊಟ ಸರಿಯಿಲ್ಲ ಅಂತಾರ. ಒಂದು ಕಡೆ ಜನಪ್ರತಿನಿಧಿಗಳ ಕಾಟ, ಇನ್ನೊಂದೆಡೆ ಮೇಲಾಧಿಕಾರಿಗಳ ಒತ್ತಡ, ಮತ್ತೊಂದೆಡೆ ಶಿಕ್ಷಕ ಸಂಘದವರ ಪರದಾಟ ಹೀಗೆ ಏನು ಅಂತ ನೋಡೋಕೆ ಆಗ್ತಾ ಇಲ್ಲ” ಎಂದು ಗೋಳಾಡುತ್ತಾರೆ. 
ಬಹುತೇಕ ಶಿಕ್ಷಕರುಗಳ ಅಭಿಪ್ರಾಯದಂತೆ ಇತ್ತೀಚೆಗೆ ಶಿಕ್ಷಣವೆಂಬುದು ಹಲವಾರು ಕಾರ್ಯಕ್ರಮಗಳ ಸಂಕೀರ್ಣತೆಯಿಂದ ಕೂಡಿದ ಪ್ರಕ್ರಿಯೆಯಾಗಿದೆ. ಯಾವುದನ್ನು ಮಾಡುವುದು, ಯಾವುದನ್ನು ಬಿಡುವುದು, ಯಾವುದಕ್ಕೆ ಎಷ್ಟು ಒತ್ತು ಕೊಡಬೇಕೋ ತಿಳಿಯುತ್ತಿಲ್ಲ.
ಒಂದು ಶೈಕ್ಷಣಿಕ ವರ್ಷಕ್ಕೆ 225 ರಿಂದ 230 ಕಲಿಕಾ ದಿನಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ದಿನಗಳ ಮಿತಿಯಲ್ಲಿಯೇ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಂಘಟಿಸಬೇಕಾಗುತ್ತದೆ. ಶಾಲೆಗಾಗಿ ನಾವು-ನೀವು, ದಾಖಲಾತಿ ಆಂದೋಲನ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ವಿವಿಧ ಸಹ ಪಠ್ಯ ಚಟುವಟಿಕೆಗಳ, ಜಯಂತೋತ್ಸವಗಳು, ದಿನಾಚರಣೆಗಳು, ವಿಜ್ಞಾನ ವಸ್ತು ಪ್ರದರ್ಶನ, ಗಣಿತ ಮೇಳ, ವಿಜ್ಞಾನ ಮೇಳ, ಮೆಟ್ರಿಕ್ ಮೇಳ ಮುಂತಾದವುಗಳ ಪೂರ್ವ ತಯಾರಿ ಮತ್ತು ಆಯೋಜನೆ, ಎನ್.ಪಿ.ಇ.ಜಿ.ಇ.ಎಲ್ ಕಾರ್ಯಕ್ರಮ, ಕೇಳು ಕಿಶೋರಿ ಮತ್ತು ಮೀನಾ ಕಾರ್ಯಕ್ರಮಗಳು, ಶಿಕ್ಷಕರಿಗೆ ತರಬೇತಿಗಳು, ಇಲಾಖೇತರ ಶೈಕ್ಷಣಿಕ ಕಾರ್ಯಕ್ರಮಗಳು ಒಂದೇ,,, ಎರಡೇ,, ಹೀಗೆ ಪಟ್ಟಿ ಮಾಡುತ್ತಾ ಹೋದರೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಗಿ ಮುಗಿಸುವುದೇ ಶಿಕ್ಷಕರ ಕರ್ತವ್ಯವೇನೋ ಎನ್ನುವಂತಾಗಿದೆ. ಮೇಲಿನ ಎಲ್ಲಾ ಕಾರ್ಯಕ್ರಮಗಳು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದರೂ ಒಂದು ಪರಿಮಿತಿಯೊಳಗೆ ಇರುವುದು ಉಚಿತ. ನಾವಿಂದು ಯಾರೊಬ್ಬರೂ ತರಗತಿ ಪ್ರಕ್ರಿಯೆ ಬಗೆಗೆ, ಹೊಸ ಹೊಸ ಬೋಧನಾ ಕಲಿಕಾ ವಿಧಾನಗಳ ಬಗೆಗೆ, ನಾವಿನ್ಯ ಮೌಲ್ಯಮಾಪನ ತಂತ್ರಗಳ ಬಗೆಗೆ ಕಿಂಚಿತ್ತೂ ಯೋಚಿಸಲಾರದಷ್ಟು ಹೀನಾಯ ಸ್ಥಿತಿಗೆ ತಲುಪಿದ್ದೇವೆ.
ಇನ್ನೊಬ್ಬರ ವೀಕ್ಷಣೆ ಹಾಗೂ ಸೂಕ್ತ ಸಲಹೆ-ಸೂಚನೆಗಳಿಂದ ತನ್ನ ಬೋಧನೆಯನ್ನು ಪರಿಣಾಮಕಾರಿಯತ್ತ ಬದಲಾಯಿಸಿಕೊಳ್ಳಲು ಪ್ರತಿಯೊಬ್ಬ ಶಿಕ್ಷಕರು ಹಾತೊರೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪಾಠವೀಕ್ಷಣೆ’ ಎಂಬ ಪದ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಬಹುತೇಕ ಮೇಲುಸ್ತುವಾರಿ ಅಧಿಕಾರಿಗಳು ಪಾಠವೀಕ್ಷಣೆ ಮಾಡುವಲ್ಲಿ ಹಿಂದೆ ಬಳುತ್ತಿರುವುದು ಕಳವಳಕಾರಿಯಾಗಿದೆ. ಸಿ.ಆರ್.ಪಿ, ಬಿ.ಆರ್.ಪಿ, ಮತ್ತು ಮುಖ್ಯಶಿಕ್ಷಕರು ಇದಕ್ಕೆ ಹೊರತಲ್ಲ. ಇದು ಶಿಕ್ಷಕರಲ್ಲಿ ಋಣಾತ್ಮಕತೆಗೆ ದಾರಿ ಮಾಡಿಕೊಡುತ್ತದೆ. ತನ್ನ ಲೋಪಗಳನ್ನು ತಾವೇ ಪತ್ತೆ ಹಚ್ಚಿಕೊಂಡು ಸೂಕ್ತ ರೀತಿಯಲ್ಲಿ ಬದಲಾಯಿಸಿಕೊಳ್ಳುವಷ್ಟು ನೈಪುಣ್ಯತೆ ಎಲ್ಲರಲ್ಲೂ ಇರುವುದಿಲ್ಲ. ಇದಕ್ಕೆ ಇನ್ನೊಬ್ಬ ಪರಿಣಿತರ ಅವಶ್ಯಕತೆ ಇರುತ್ತದೆ. ತಪ್ಪು ಮಾಡಿದವರನ್ನು ಎಚ್ಚರಿಸುವವರೇ ಇಲ್ಲದಂತಾದರೆ ವ್ಯವಸ್ಥೆ ಹದಗೆಡುವುದಂತೂ ಖಂಡಿತ. ಈಗ ಆಗಿರುವುದೂ ಅದೇ ಅಲ್ಲವೇ?
2004-05ನೇ ಸಾಲಿನಿಂದ ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ ಶಿಕ್ಷಕರ ತರಬೇತಿ ಕೇಂದ್ರಗಳೂ ಶಿಕ್ಷಣದಲ್ಲಿ ಋಣಾತ್ಮಕತೆಗೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದರೆ ತಪ್ಪಲ್ಲ. ಏಕೆಂದರೆ ಬಹುತೇಕ ತರಬೇತಿ ಕೇಂದ್ರಗಳಲ್ಲಿ ನಿಮಯಮ ಮೀರಿ ಉಪನ್ಯಾಸಕರನ್ನು ನೇಮಿಸಿಕೊಂಡಿರುವುದು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಉಪನ್ಯಾಸಕರು ವ್ಯವಸ್ಥೆಯ ಬಗ್ಗೆ ನಕಾರಾತ್ಮಕ ಮನೋಭಾವ ಹೊಂದಿರುವುದು ಅವರ ನಡೆ-ನುಡಿಗಳಲ್ಲಿ ಎದ್ದು ಕಾಣುತ್ತದೆ. ಇದನ್ನೇ ತರಬೇತಿ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅದು ಈಗಾಗಲೇ ಅಂತರ್ಗತವಾಗಿರುತ್ತದೆ. ಸ್ಫರ್ದಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರೂ ಸಹ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವುದು ಆತಂಕಕಾರಿಯಾಗಿದೆ. 
ಒಂದಂತೂ ಸತ್ಯ. ಈ ಎಲ್ಲಾ ಅವಾಂತರಗಳಿಗೆ ವ್ಯವಸ್ಥೆಯ ಲೋಪ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಇದನ್ನು ಸರಿಪಡಿಸುವವರು ಯಾರು? ಪೋಷಕರೇ, ಶಿಕ್ಷಕರೇ, ಅಧಿಕಾರಿಗಳೇ, ಜನಪ್ರತಿನಿಧಿಗಳೇ, ತಜ್ಞರೇ, ಯಾರು? ಇದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಋಣಾತ್ಮಕ ಧೋರಣೆಗಳು ತಾರಕ್ಕೇರತೊಡಗಿದರೆ ಅವುಗಳ ನಿವಾರಣೆ ಕಷ್ಟಪ್ರದವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಭಾಗೀರಾರರೂ ಎಚ್ಚೆತ್ತುಕೊಂಡು ತಮ್ಮ ನಡವಳಿಕೆಗಳನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡಾಗ ಮಾತ್ರ ಈ ರಾಜ್ಯಕ್ಕೆ, ರಾಜ್ಯದ ಶಿಕ್ಷಣಕ್ಕೆ ಉತ್ತಮ ಭವಿಷ್ಯವಿದೆ. ಇಲ್ಲದಿದ್ದರೆ ಘೋರ ದುರಂತವಂತೂ ಖಂಡಿತ. ದಯವಿಟ್ಟು ಈ ಬಗ್ಗೆ ಒಮ್ಮೆ ಯೋಚಿಸಿ ನೋಡಿ...!

ಟೀಚರ್’ ಫೆಬ್ರವರಿ 2012
ಆರ್.ಬಿ.ಗುರುಬಸವರಾಜ

No comments:

Post a Comment