April 28, 2014

ಶಿಕ್ಷಕರ ಶಿಕ್ಷಕನಿಗೊಲಿದ ‘ಬಸವಶ್ರೀ’

ಶಿಕ್ಷಕರ ಶಿಕ್ಷಕನಿಗೊಲಿದ ‘ಬಸವಶ್ರೀ’

 ‘ಹರಮುನಿದರೂ ಗುರು ಕಾಯುವನು’ ಎಂಬ ಮಾತು ಜಗಜ್ಜನಿತವಾದದು. ನಾಡು ಮತ್ತು ನಾಡಿನ ಜನತೆ ಸಂಕಷ್ಟದಲ್ಲಿರುವಾಗ ಅಭಯ ಹಸ್ತ ಚಾಚಿದವರೆಂದರೆ ಗುರುಗಳು. ಸೆಪ್ಟಂಬರ್ ಬಂತಂದರೆ ಸಾಕು ಶಿಕ್ಷಕರ ಮೇಲಿನ ಅಭಿಮಾನ ಉಕ್ಕಿ ಹರಿಯುತ್ತದೆ. ಅಂತೆಯೇ ವಿಶಿಷ್ಟ ಸೇವೆ ಸಲ್ಲಿಸಿದ ಗುರುಗಳನ್ನು ಸನ್ಮಾನಿಸುವುದು ನಮ್ಮ ನಾಡಿನ ಪರಂಪರೆ ಮತ್ತು ಗುರುಭಕ್ತಿಯ ಪ್ರತೀಕ. ನಮ್ಮಲ್ಲಿ ಗುರುಗಳಿಗೆ ಅವರ ಸೇವೆಗನುಗುಣವಾಗಿ ತಾಲ್ಲೂಕು ಹಂತದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಪ್ರಶಸ್ತಿಗಳಿವೆ. ಇವೆಲ್ಲವುಗಳಿಗಿಂತ ವಿಶಿಷ್ಟವಾದ 2010ನೇ ಸಾಲಿನ ‘ಬಸವಶ್ರೀ’ ಪ್ರಶಸ್ತಿಗೆ ಭಾಜನರಾದ ಶಿಕ್ಷಕರೆಂದರೆ ನೆರೆಯ ಶ್ರೀಲಂಕಾದ ಸರಳ, ಸಜ್ಜನ, ದೀನಬಂಧು, ದಲಿತೋದ್ದಾರ, ಶ್ರೀಲಂಕಾಭಿಮಾನ್ಯ ಲಂಕಾದಗಾಂಧಿ ಎಂದೆಲ್ಲ ಬಿರುದುಗಳಿಸಿದ ಅಪ್ಪಟ ಗಾಂಧಿವಾದಿ 80ರ ಹರೆಯದ ‘ಅಹಂಗಮೆ ತೋಡರ ಆರ್ಯರತ್ನೆ’. ಅವರು ಶ್ರೀಲಂಕಾದಲ್ಲಿ ‘ಸರ್ವೋದಯ ಶ್ರಮದಾನ ಚಳುವಳಿ’ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದಾರೆ. ಶಿಕ್ಷಕ ಕೇವಲ ಶಾಲಾ ಶಿಕ್ಷಣಕ್ಕೆ ಅಡಿಗಲ್ಲಾದರೆ ಸಾಲದು ಅಲ್ಲಿನ ಸಮುದಾಯಕ್ಕೆ ಮತ್ತು ರಾಷ್ಟ್ರ ನಿರ್ಮಾಣಕ್ಕೂ ಅಡಿಗಲ್ಲಾಗಬೇಕೆಂಬುದನ್ನು ಆರ್ಯರತ್ನೆ ತೋರಿಸಿಕೊಟ್ಟಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ : 1931ರ ನವೆಂಬರ್ 5ರಂದು ಶ್ರೀಲಂಕಾದ ಗಾಲೆ ಜಿಲ್ಲೆಯ ಉನುವಂತುನ ಎಂಬಲ್ಲಿ ಜನಿಸಿದ ಆರ್ಯರತ್ನೆ ಗಾಲೆಯ ಮಹಿಂದಾ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪಡೆದರು. ನಂತರ ವಿದ್ಯೋದಯ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಪಡೆದು ಮುಂದೆ ಅದೇ ವಿ.ವಿ.ಯ ಗೌರವ ಡಿ.ಲಿಟ್ ಪದವಿ ಭಾಜನರಾದರು.

ಸಮಾಜೋದ್ದಾರ : ಬೌದ್ಧ ಧರ್ಮ ಹೆಚ್ಚು ಪ್ರಚಲಿತದಲ್ಲಿರುವ ಶ್ರೀಲಂಕಾದಲ್ಲಿ ಆ ಧರ್ಮದ ತತ್ವಗಳನ್ನು ದೇಶದ ಪ್ರಗತಿಗೆ ಹೇಗೆ ಬಳಸಿಕೊಳ್ಳಬಹುದೆಂದು ತೋರಿಸಿಕೊಟ್ಟರು. ಗಾಂಧೀಜಿಯವರ ಅಹಿಂಸೆ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವತ್ಯಾಗ ತತ್ವಗಳಿಂದ ಸ್ಫೂರ್ತಿಗೊಂಡು ಅವುಗಳನ್ನೇ ಜೀವನುದುದ್ದಕ್ಕೂ ಪಾಲಿಸುತ್ತಾ ಬಂದ ಆರ್ಯರತ್ನೆ 1958ರಲ್ಲಿ ‘ಸರ್ವೋದಯ  ಶ್ರಮದಾನ ಚಳುವಳಿ’ಯನ್ನು ಸ್ಥಾಪಿಸುವ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು.

ಕೊಲಂಬೋದ ನಲಂದಾ ಕಾಲೇಜಿನಲ್ಲಿ ಶಿಕ್ಷಕರ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್ಯರತ್ನೆ ಅಲ್ಲಿನ 40 ವಿದ್ಯಾರ್ಥಿಗಳು ಹಾಗೂ 12 ಜನ ಶಿಕ್ಷಕರ ಒಂದು ತಂಡ ರಚಿಸಿಕೊಂಡು ‘ಶೈಕ್ಷಣಿಕ ಪ್ರಯೋಗಗಳು’ ಎಂಬ ಹೊಸ ರೀತಿಯ ಪ್ರಯೋಗಗಳನ್ನು ಪ್ರಾರಂಭಿಸಿದರು. ಎಲ್.ಟಿ.ಟಿ.ಇ ಉಗ್ರರಿಂದ ತತ್ತರಿಸಿದ್ದ ಶ್ರೀಲಂಕಾದ ಜನತೆ ಅಶಾಂತಿಯ ಮಡುವಿನಲ್ಲಿ ನಲುಗಿ ಹೋಗಿದ್ದರು. ಹಳ್ಳಿಗಳ ಸೇವೆಗೆ ಪಣತೊಟ್ಟ ಆರ್ಯರತ್ನೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು. ಹಲವು ದಶಕಗಳವರೆಗೆ ಶಾಂತಿ ಮೂಡಿಸಲು ಪ್ರಯತ್ನಿಸಿದರು. ಹೀಗೆ ಪ್ರಾರಂಭವಾದ ಸರ್ವೋದಯ ಶ್ರಮದಾನ ಚಳುವಳಿ ಉತ್ತಮ ಯಶಸ್ಸು ಕಂಡಿತು. ಗಾಂಧೀಜಿಯವರ ಆದರ್ಶಗಳು, ಬೌದ್ಧಧರ್ಮದ ತತ್ವಗಳು, ಅರ್ಥಶಾಸ್ತ್ರೀಯ ಆಧ್ಯಾತ್ಮವಾದ ಇವು ಸವೋದಯ ಶ್ರಮದಾನ ಚಳುವಳಿ ಮಂತ್ರಗಳಾದವು.

ಸರ್ವೋದಯ ಅಂದರೆ ಸ್ವರಾಜ್ಯ (ಸ್ವ ಸರಕಾರ) ಶ್ರಮದಾನವೆಂದರೆ ಕಾರ್ಮಿಕರ ಕೊಡುಗೆ, ಆರ್ಯರತ್ನೆ ಪ್ರಕಾರ ಸರ್ವೋದಯವೆಂದರೆ ‘ಸಕಲ ಬೆಳವಣಿಗೆ’ ಅಂದರೆ ಮಾನವನ ವೈಯಕ್ತಿಕ ವ್ಯಕ್ತಿತ್ವದಿಂದ ಮಾನವೀಯತೆವರೆಗಿನ ಎಲ್ಲ ಬೆಳವಣಿಗೆಯಾಗಿದೆ. ಈ ಬೆಳವಣಿಗೆ ನೈತಿಕ, ಸಾಂಸ್ಕøತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಳತೆಗಳನ್ನೊಳಗೊಂಡಿದೆ. ಇವುಗಳಲ್ಲಿ ಯಾವುದಾದರೊಂದು ಅಭಿವೃದ್ಧಿ ಹೊಂದಲು ಉಳಿದವು ಸಹಕರಿಸುವಂತಾಗಬೇಕು ಎಂಬುದೇ ಅವರ ಆಶಯ.

ಹಳ್ಳಿಗಳಲ್ಲಿನ ಜನತೆ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇರುವ ತೊಡಕುಗಳನ್ನು ತಾವೇ ನಿವಾರಿಸಿಕೊಳ್ಳುವಂತಹ ಕೌಶಲಗಳನ್ನು ಬೆಳೆಸುವುದೇ ಸರ್ವೋದಯದ ಮುಖ್ಯ ಗುರಿ. ವಿವಿಧ ಪ್ರಗತಿ ಪೂರಕ ಕಾರ್ಯಕ್ರಮಗಳ ಮೂಲಕ ಹಳ್ಳಿಗಳ ಜನತೆ ಅಲ್ಲಿನ ಆಡಳಿತ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನೀತರೇ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಹೆಚ್ಚು ಶ್ರಮಿಸಿದರು ಆರ್ಯರತ್ನೆ. ಇಂದು ಶ್ರೀಲಂಕಾದಲ್ಲಿ 38 ಸಾವಿರ ಹಳ್ಳಿಗಳಿದ್ದು ಅದರಲ್ಲಿ 15 ಸಾವಿರ ಹಳ್ಳಿಗಳಲ್ಲಿ ಸರ್ವೋದಯ ಶ್ರಮದಾನ ಚಳುವಳಿ ಕಾರ್ಯ ನಿರ್ವಹಿಸುತ್ತದೆ. 11 ಮಿಲಿಯನ್ ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಇಂದು ಅಲ್ಲಿನ ಜನರು ‘ಸಂಪತ್ ಬ್ಯಾಂಕ್’ಗಳೆಂಬ ಗ್ರಾಮೀಣ ಬ್ಯಾಂಕ್‍ಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ದಿಟ್ಟ ಹೆಜ್ಜೆಯನ್ನಿಡಲು ಆರ್ಯರತ್ನೆ ಕಾರಣಿಭೂತರಾಗಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಲ್ಲಿನ ನಾಗರಿಕರಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಪ್ರಯತ್ನಿಸಿದ ಹರಿಕಾರನಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲಿದಿವೆ.

ಹೀಗೆ ಹತ್ತಾರು ಪ್ರಶಸ್ತಿಗೆ ಭಾಜನರಾಗಿ ವಿಶ್ವದಾದ್ಯಂತ ಹೆಸರು ಪಡೆದ ಆರ್ಯರತ್ನೆ ಎಲ್ಲ ಶಿಕ್ಷಕರಿಗೆ ಸ್ಫೂರ್ತಿಯ ಸೆಲೆಯಾಗಲಿ ಎಂಬುದೇ ಎಲ್ಲರ ಆಶಯ.

ಬಸವಶ್ರೀ ಪ್ರಶಸ್ತಿ ಬಗ್ಗೆ : 
ಬಸವಾದಿ ಶರಣರ ತತ್ವ ಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯ ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರು ಮತ್ತು ಶರಣರ ಆದರ್ಶಗಳನ್ನಾಧರಿಸಿ ನಡೆಯುವವರಿಗೆ ಪ್ರಶಸ್ತಿ ಮೀಸಲು. ಇದು ಮೂರು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣ ಫಲಕಗಳನ್ನೊಳಗೊಂಡಿರುತ್ತದೆ.

‘ಟೀಚರ್’    ಅಕ್ಟೋಬರ್ 2011
-ಆರ್.ಬಿ.ಗುರುಬಸವರಾಜ

No comments:

Post a Comment