April 28, 2014

ಹೊರ ಸಂಚಾರ ಹೊರೆಯಾಗದಿರಲಿ

ಹೊರ ಸಂಚಾರ ಹೊರೆಯಾಗದಿರಲಿ

ಸಹಪಠ್ಯ ಚಟುವಟಿಕೆಗಳಲ್ಲಿ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ಸಂಗ್ರಹಸಲು ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಚಟುವಟಿಕೆ ಎಂದರೆ, ‘ಶೈಕ್ಷಣಿಕ ಹೊರಸಂಚಾರ’

ಹೊರಸಂಚಾರ ಎಂದಾಕ್ಷಣ ನಮಗೆಲ್ಲ ಮನಸ್ಸಿನಲ್ಲಿ ಮೂಡುವ ಚಿತ್ರಣವೆಂದರೆ, ಒಂದು ದಿನದ ಪ್ರವಾಸ. ಬೆಳಗ್ಗೆ ಹೊರಟು ರಾತ್ರಿ ಪುನಃ ಬಂದು ಸೇರಲು ಅನುಕೂಲವಾಗುವಂತೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು, ಅಲ್ಲಿಗೆ ಹೋಗಿ ಬರಲು ವಾಹನದ ವ್ಯವಸ್ಥೆಯ ಬಗ್ಗೆ ಹಾಗೂ ಅಲ್ಲಿನ ಭೋಜನಕ್ಕಾಗಿ ಸೂಕ್ತ ವ್ಯವಸ್ಥೆಯ ಬಗ್ಗೆ ಪೂರ್ವ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ತಗುಲಬಹುದಾದ ಆಯ-ವ್ಯಯದ ಪಟ್ಟಿಯನ್ನು ತಯಾರಿಸಿ, ಅದರಂತೆ ಪ್ರತಿಯೊಂದು ಮಗುವಿನಿಂದ ಇಂತಿಷ್ಟು ಹಣ ಸಂಗ್ರಹಿಸಿ ಅದರಲ್ಲೇ ಶಿಕ್ಷಕರಾದ ನಾವೂ ಹೊರ ಸಂಚಾರದ ರಸಾನುಭವ ಪಡೆಯುತ್ತೇವೆ. ಸಾಮಾನ್ಯವಾಗಿ, ಎಲ್ಲಾ ಶಿಕ್ಷಕರೂ ಹೀಗೆಯೇ ಮಾಡುತ್ತಾರೆ ಎಂದರೆ ತಪ್ಪಾಗುತ್ತದೆ.

ಹೊರಸಂಚಾರ ಎಂದ ಕೂಡಲೇ ಕೆಲವು ಪೋಷಕರಿಗೆ ಗರ ಬಡಿದಂತಾಗುತ್ತದೆ. ಅದೊಂದು ವೆಚ್ಚದಾಯಕ ಚಟುವಟಿಕೆ ಎಂಬ ಅಂಶ ಅವರ ಮನದಲ್ಲಿ ಕಾಡುತ್ತಿರುತ್ತದೆ. ಆದರೆ ಕೆಲವು ಸೃಜನಶೀಲ, ಚಿಂತನ ಶೀಲ ಶಿಕ್ಷಕರು ಹೊರೆಯೆನಿಸದ ರೀತಿಯಲ್ಲಿ ಅಯೋಜಿಸುತ್ತಾರೆ. ಇದರಿಂದ ಪಾಲಕರಿಗೂ ಸಹ ನೋವುಂಟಾಗುದಿಲ್ಲ. ಬದಲು ತಮ್ಮ ಮಕ್ಕಳೂ ಖುಷಿಯಿಂದ ಪಾಲ್ಗೊಳ್ಳುವಂತೆ ಪ್ರೇರೇಸುವಂತಾಗುತ್ತದೆ.

ಹೊರಸಂಚಾರಕ್ಕೆ ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗಿನ ಕಾಲ ಸೂಕ್ತವಾದುದು. ಏಕೆಂದರೆ, ಆ ತಿಂಗಳುಗಳಲ್ಲಿ ಮಳೆಯ ಅಬ್ಬರ ಕಡಿಮೆ ಹಾಗೂ ಸುತ್ತಲ ಪರಿಸರ ಹಚ್ಚ ಹಸಿರಿನಿಂದ ತುಂಬಿಕೊಂಡಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಹೊಲ ಗದ್ದೆಗಳು ಪಚ್ಚೆ ಪೈರಿನಿಂದ ಕಂಗೊಳಿಸುತ್ತಿರುತ್ತವೆ.

ಸ್ಥಳ ಆಯ್ಕೆ : ಸಾಮಾನ್ಯವಾಗಿ ಹೊರಸಂಚಾರಕ್ಕಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವಾಗ 20 ರಿಂ 50 ಕಿ.ಮೀ. ಅಂತರದ ಅಥವಾ ಅದಕ್ಕಿಂತ ಹೆಚ್ಚು ಅಂತರದ ಐತಿಹಾಸಿಕ, ಸಾಂಸ್ಕøತಿಕ, ವೈಜ್ಞಾನಿಕ, ನೈಸರ್ಗಿಕ ಮಹತ್ವಗಳುಳ್ಳ ಅಥವಾ ನೋಡಲು ಸುಂದರವಾದ ಒಂದು ಪ್ರವಾಸಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗೆ ದೂರದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮಕ್ಕಳು ಅಧಿಕ ಪ್ರವಾಸದ ಹಣ ಭರಿಸಬೇಕಾದ ಮತ್ತು ಪ್ರಯಾಣದ ಆಯಾಸವನ್ನು ಅನುಭವಿಸಬೇಕಾದ ಸಂದರ್ಭಗಳೇ ಹೆಚ್ಚು. ಆದರೆ ಹೀಗೆ ದೂರದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳದೇ, 5 ರಿಂದ 10 ಕಿ.ಮೀ. ಅಂತರದೊಳಗಿನ ಸ್ಥಳವಾದರೆ ಉತ್ತಮ. 5 ಕಿ.ಮೀ. ಗಿಂತ ಕಡಿಮೆ ಅಂತರದೊಳಗಿನ ಸ್ಥಳವಾದರೆ ಇನ್ನೂ ಉತ್ತಮ. ಕೇವಲ ಕಾಲ್ನಡಿಗೆಯಲ್ಲಿಯೇ ಅತ್ಯಂತ ಖುಷಿಯಿಂದ ಹೋಗಿರಬಹುದು. 

ಹೀಗೆ ಸ್ಥಳೀಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಆ ಪ್ರದೇಶದ ಮಹತ್ವ, ಭೌಗೋಳಿಕ ಅಂಶಗಳ ಕಲ್ಪನೆ, ಸ್ಥಳೀಯ ಹವಾಮಾನ ಮತ್ತು ವಾಯುಗುಣಗಳ ಕಲ್ಪನೆ, ಸ್ಥಳೀಯ ಬೆಳೆಗಳ ಪರಿಚಯ ಸ್ಥಳೀಯರ ಅವಶ್ಯಕತೆಗಳು ಹಾಗೂ ಅವುಗಳನ್ನು ಪೂರೈಸುವ ಅಂಶಗಳ ಲಭ್ಯತೆ, ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳು, ವೈಜ್ಞಾನಿಕ ಕೌತುಕಗಳು, ವಿಶೇಷ ಪ್ರಾಣಿ, ಪಕ್ಷಿಗಳ ದರ್ಶನ, ಇತ್ಯಾದಿ ಅಂಶಗಳಿಂದ ಮೂರ್ತದಿಂದ ಅಮೂರ್ತದೆಡೆಗೆ ಎನ್ನುವ ರೀತಿಯಲ್ಲಿ ಬೋಧನೆ-ಕಲಿಕೆಗೆ ಸಹಕಾರಿಯಾಗುತ್ತದೆ.

ಹೊರಸಂಚಾರವನ್ನು ಯಶಸ್ವಿ, ಪರಿಣಾಮಕಾರಿಯನ್ನಾಗಿ ಹಾಗೂ ಬೋಧನೆ – ಕಲಿಕೆಗೆ ಪೂರಕ ಸಾಧನವನ್ನಾಗಿ ಬಳಸೊಕೊಳ್ಳಬೇಕಾದರೆ ಕೆಲವು ನಿಯಮಗಳನ್ನು ಕೆಳಗಿನಂತೆ ವಿವೇಚಿಸಬಹುದು.

ಪೂರ್ವ ಸಿದ್ಧತೆ: ಹೊರಸಂಚಾರ ಯಶಸ್ವಿಯಾಗಬೇಕಾದರೆ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
ಉತ್ತಮವಾದ ಸ್ಥಳ ಆಯ್ಕೆ ಮಾಡಿದ ನಂತರ ದಿನಾಂಕ ಹಾಗೂ ಹೊರಡುವ ವೇಳೆ ನಿಗದಿಗೊಳಿಸುವುದು.
ಹೊರಸಂಚಾರಕ್ಕೆ ಹೊರಡುವ ಮಕ್ಕಳ ಯಾದಿ ತಯಾರಿಸುವುದು.
ಹೊರಸಂಚಾರದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಪಟ್ಟಿ ತಯಾರಿಸುವುದು ಅವುಗಳಿಗೆ ಅವಶ್ಯವಿರುವ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು.
ಹೊರಸಂಚಾರದಲ್ಲಿ ಸಂಗ್ರಹಿಸಬಹುದಾದ ವಸ್ತುಗಳ, ಮಾದರಿಗಳ, ಚಿತ್ರಗಳ ಪಟ್ಟಿ ತಯಾರಿಸುವುದು.
ವಸ್ತುಗಳನ್ನು ಸಂಗ್ರಹಸಲು ಗುಂಪುಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವುದು.
ಗುಂಪುಗಳಿಗೆ ಮಕ್ಕಳಲ್ಲೇ ನಾಯಕರುಗಳನ್ನು ಆಯ್ಕೆ ಮಾಡಿ ಶಿಕ್ಷಕರು ಮೇಲುಸ್ತುವಾರಿ ವಹಿಸುವುದು.
ಅಪಘಾತ ಸಂಭವಿಸುವ (ನದಿ, ಕೆರೆ, ಗುಡ್ಡ, ಬೆಟ್ಟ, ಇಳಿಜಾರು, ಕೈಗಾರಿಕೆ) ಪ್ರದೇಶಗಳಾಗಿದ್ದರೆ, ಸೂಕ್ತ ಎಚ್ಚರಿಕಾ ಕ್ರಮಗಳನ್ನು ವಹಿಸುವುದು.
ಹೊರಸಂಚಾರದ ಬಗ್ಗೆ ಮಕ್ಕಳಲ್ಲಿ ಕುತೂಹಲ ಉಂಟುಮಾಡುವುದು. ಅಂದರೆ ಹೊರಸಂಚಾರಕ್ಕೆ ಆಯ್ಕೆ ಮಾಡಿಕೊಂಡ ಸ್ಥಳದ ಬಗ್ಗೆ ಮಕ್ಕಳಿಗೆ ಯಾವುದೇ ಮಾಹಿತಿ ಕೊಡದೇ ಗೌಪ್ಯವಾಗಿಟ್ಟು ನೇರವಾಗಿ ಆ ಮಕ್ಕಳಲ್ಲಿ ಕಾತುರತೆ ಮತ್ತು ಉತ್ಸಾಹ ಹೆಚ್ಚಾಗುತ್ತದೆ.
ಮಕ್ಕಳು ಬೆಲೆ ಬಾಳುವ ಆಭರಣಗಳೂ ಮತ್ತು ಬೆಲೆ ಬಾಳುವ ಯಾವುದೇ ವಸ್ತು ತರುವುದನ್ನು ನಿಷೇಧಿಸುವುದು.
ಹೊರಸಂಚಾರದಲ್ಲಿ ಕಾರ್ಯರೂಪಗೊಳಿಸಬಹುದಾದ ಅಂಶಗಳು
ಹೊರಸಂಚಾರದ ಸ್ಥಳದಲ್ಲಿ ಆ ಪ್ರದೇಶ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಸ್ಥಳೀಯರಿಂದ ಅಥವಾ ಸಂಬಂಧಿಸಿದವರಿಂದ ಅಥವಾ ಶಿಕ್ಷಕರೇ ಒದಗಿಸುವುದು.
ಮಕ್ಕಳ ಗುಂಪುಗಳಿಗೆ ವಹಿಸಿದ ಕಾರ್ಯದಂತೆ ವಸ್ತುಗಳನ್ನು/ಮಾದರಿಗಳನ್ನು ಸಂಗ್ರಹಿಸಲು ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ನೀಡುತ್ತಾ ಮೇಲುಸ್ತುವಾರಿ ವಹಿಸಿಕೊಳ್ಳುವುದು.
ಮಕ್ಕಳ ಮನೋರಂಜನೆಗಾಗಿ ಹಾಡು, ಕುಣಿತ, ನೃತ್ಯ, ರೂಪಕ, ಕಿರು ನಾಟಕ, ಆಟ, ಇತ್ಯಾದಿಗಳನ್ನು ವ್ಯವಸ್ಥೆಗೊಳಿಸುವುದು.
ಮಕ್ಕಳ ಊಟ – ಉಪಕಾರಗಳಿಗಾಗಿ ಸೂಕ್ತ ಸ್ಥಳ ಸೌಲಭ್ಯ ವ್ಯವಸ್ಥೆಗೊಳಿಸುವುದರ ಜೊತೆಗೆ ಶಿಕ್ಷಕರೂ ಮಕ್ಕಳೊಂದಿಗೆ ಸಹಭೋಜನ ಮಾಡುವುದು.
ಪ್ರತಿಯೊಂದು ಮಗುವಿನ ಚಲನ-ವಲನದ ಮೇಲೆ ನಿಗಾ ಇಡುವುದು.
ಹೊರಸಂಚಾರದ ನಂತರ : 
ಸಂಗ್ರಹಿಸಿದ ವಸ್ತುಗಳು / ಮಾದರಿಗಳನ್ನು ದಿನಾಂಕ ನಿಗದಿಗೊಳಿಸಿ ಪ್ರದರ್ಶನ ಏರ್ಪಡಿಸುವುದು. ಸಾಧ್ಯವಾದರೆ ಪೋಷಕರು ಅಧಿಕಾರಿಗಳನ್ನು ಆಹ್ವಾನಿಸುವುದು ಹಾಗೂ ಶಾಲೆಯ ಎಲ್ಲಾ ತರಗತಿಯ ಮಕ್ಕಳು ವೀಕ್ಷಿಸಲು ಅನುವು ಮಾಡಿಕೊಡುವುದು.
ದೀರ್ಘಕಾಲ ಬಳಸಬಹುದಾದ ವಸ್ತುಗಳು / ಮಾದರಿಗಳನ್ನು ಸಂರಕ್ಷಿಸಿಡುವುದು ಹಾಗೂ ಸೂಕ್ತ ಸಂದರ್ಭದಲ್ಲಿ ಬೋಧನೆ-ಕಲಿಕೆಗೆ ಬಳಸಿಕೊಳ್ಳುವುದು.
ಹೊರಸಂಚಾರದಲ್ಲಿ ಸಂಗ್ರಹಿಸಿದ ವಸ್ತುಗಳ ಕುರಿತು ಟಿಪ್ಪಣಿ ದಾಖಲಿಸಿಡುವುದು.
ಹೊರಸಂಚಾರ ಕುರಿತು ಮಕ್ಕಳ ಅನುಭವಗಳನ್ನು ಮಕ್ಕಳಿಂದಲೇ ಅಖಿತ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು (ವರದಿ ತಯಾರಿಕೆ).
ಹೀಗೆ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಹೊರಸಂಚಾರ ಆಯೋಜಿದರೆ ಯಶಸ್ವಿ ಜವಾಬ್ದಾರಿ ನಿರ್ವಹಿಸಿದ ಖುಷಿ ನಿಮ್ಮದಾಗುತ್ತದೆ. ಆ ಮೂಲಕ ಮಕ್ಕಳ ಖುಷಿಗೂ ಸಹ ಭಾಜನರಾಗುತ್ತೀರಿ.


‘ಟೀಚರ್’   ಸೆಪ್ಟಂಬರ್ 2006
- ಆರ್.ಬಿ.ಗುರುಬಸವರಾಜ

1 comment:

  1. ಉತ್ತಮವಾದ ಮಾಹಿತಿ, ಹೊರ ಸಂಚಾರಕ್ಕೆ ಬೇಕಾದ ಅವಶ್ಯಕ ಮಾಹಿತಿ ಒಳಗೊಂಡಿದೆ. ಮಲ್ಲಿಕಾರ್ಜುನ ಟಂಕಸಾಲೆ ಬೀದರ

    ReplyDelete