April 28, 2014

ಮರ್ಯಾದೆಯ ಗೋಡೆ

ಮರ್ಯಾದೆಯ ಗೋಡೆ

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಒಂದು ಪ್ರತಿಷ್ಟಿತ ಗ್ರಾಮ ಹೊಳಗುಂದಿ. ಸುಮಾರು ಎರಡು ಸಾವಿರ ಕುಟುಂಬಗಳಿರುವ ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ಗ್ರಾಮದಲ್ಲಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಗುಮಾಸ್ತನಿಂದ ಹಿಡಿದು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಯವರೆಗೂ ವಿವಿಧ ಇಲಾಖೆಗಳಲ್ಲಿ, ವಿವಿಧ ಶ್ರೇಣಿಗಳಲ್ಲಿ ಕೆಲಸ ಮಾಡುವ ಮಂದಿ ಇದ್ದಾರೆ. ಆದರೆ ದುರದೃಷ್ಟವೆಂದರೆ ಈ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ ಮೂರಂಕಿ ದಾಟುವುದಿಲ್ಲ.

ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಜನರ ಮನೋಭಾವ. ಇನ್ನೊಂದು ಪ್ರಮುಖ ಕಾರಣ ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳದ ಕೊರತೆ. ಮನೆಗಳು ಒಂದರ ಪಕ್ಕ ಒಂದರಂತೆ ಕಿಕ್ಕಿರಿದಿರುವುದರಿಂದ ಶೌಚಾಲಯ ನಿರ್ಮಿಸಲು ಜಾಗವೇ ಇಲ್ಲ. ಹೀಗಾಗಿ ಹೊಳಗುಂದಿಯ ಜನರು ಶೌಚಲಯಕ್ಕಾಗಿ ಬಯಲು ಪ್ರದೇಶವನ್ನೇ ಆಶ್ರಯಿಸಿದ್ದಾರೆ.

ಗ್ರಾಮದ ಪುರುಷರು ಮತ್ತು ಮಹಿಳೆಯರು ಒಂದೇ ಬಯಲಿಗೆ ಶೌಚಲಯಕ್ಕೆ ಹೋಗುವಂತಿಲ್ಲ. ಇದು ಅಲಿಖಿತ ನಿಯಮ. ಹೀಗಾಗಿ ಗ್ರಾಮದ ಮೂರು ಕಡೆ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಶೌಚಲಯದ ವ್ಯವಸ್ಥೆ ಎಂದರೆ ಪ್ರತ್ಯೇಕ ಕಟ್ಟಡ ಎಂದು ತಿಳಿದುಕೊಳ್ಳಬೇಡಿ. ನಾಲ್ಕು ಕಡೆ ಗೋಡೆಗಳನ್ನು ಎಬ್ಬಿಸಿ ಮಾಡಿರುವ ತೆರೆದ ಶೌಚಾಲಯ ವ್ಯವಸ್ಥೆ. ಇದನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮರ್ಯಾದೆ ಗೋಡೆ ಎಂದು ಕರೆಯುತ್ತಾರೆ.

ಪ್ರತೀ ದಿನ ನೂರಾರು ಜನರು ಈ ಮಾರ್ಯಾದೆ ಗೋಡೆಯ ಹಿಂದೆ ಶೌಚಕ್ಕೆ ಕೂರುವುದರಿಂದ ಇದೊಂದು ಗಬ್ಬುನಾತ ಬೀರುವ ಕೊಂಪೆ. ಹುಲುಸಾಗಿ ಬೆಳೆದ ಮುಳ್ಳು ಗಿಡಗಳು. ವಿಷ ಜಂತುಗಳ ಕಾಟ ಮತ್ತು ದುರ್ನಾತದ ನಡುವೆ ಮಹಿಳೆಯರು ಕಾಲಿಡಲು ಕಸರತ್ತು ಮಾಡುತ್ತಾ ಇಲ್ಲಿ ಪ್ರವೇಶ ಪಡೆಯಬೇಕು. ಈ ಮಾರ್ಯದೆ ಗೋಡೆಯ ಅಕ್ಕ ಪಕ್ಕದ ನಿವಾಸಿಗಳಿಗೆ ಬದುಕು ನಿತ್ಯ ನರಕ.  ದುರ್ನಾತದ ಗಾಳಿಯನ್ನೇ ಉಸಿರಾಡುತ್ತಾ ಬದುಕಬೇಕು.

ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಲ್ಲಿನ ಜನರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಸ್ಪಂದಿಸದೆ ಇದ್ದಾಗ ಸ್ರ್ತೀಶಕ್ತಿ ಗುಂಪುಗಳ ಮಹಿಳೆಯರೇ ಚಂದಾ ಎತ್ತಿ ಸ್ವಚ್ಚಗೊಳಿಸುವ ಕಾರ್ಯ ಮಾಡಿದ್ದಾರೆ. ಇಂತಹ ಒಂದು ಬಯಲು ಶೌಚಾಲಯ ಶಾಲೆಯ ಪಕ್ಕದಲ್ಲೇ ಇದೆ. ಇದರಿಂದ ಬರುವ ದುರ್ನಾತವನ್ನು ಸಹಿಸಿಕೊಂಡು ಮಕ್ಕಳು ಮತ್ತು ಶಿಕ್ಷಕರು ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಸರಕಾರ ನೈರ್ಮಲ್ಯ ವ್ಯವಸ್ಥೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಂಪೂರ್ಣ ನೈರ್ಮಲ್ಯ ಆಂದೋಲನ ದೇಶದಾದ್ಯಂತ ಜಾರಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಶೌಚಾಲಯಗಳು ಮಾತ್ರವಲ್ಲದೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಹಣ ಸಹಾಯ ನೀಡಲಾಗುತ್ತಿದೆ. ಆದರೆ ಹೊಳಗುಂದಿ ಪಂಚಾಯತಿಯಲ್ಲಿ ಇವ್ಯಾವುವೂ ಜಾರಿಗೆ ಬಂದಿಲ್ಲ. ಇದಕ್ಕೆ ಯಾರು ಹೊಣೆ? ಈ ಗ್ರಾಮದ ಮಹಿಳೆಯರು ಇನ್ನೆಷ್ಟು ದಿನ ಇಂತಹ ದುಸ್ಥಿತಿಯಲ್ಲಿ ಬದುಕಬೇಕು?

ಸಾಲು ಹೆಜ್ಜೆ’  ಫೆಬ್ರವರಿ  2009
ಆರ್.ಬಿ.ಜಿ. ಹೊಳ್ಗುಂದಿ

No comments:

Post a Comment