April 19, 2014

ಪೇಪರ್ ಕಟಿಂಗ್ಸ್ ಗಳೇ ಕಲಿಕಾ ಸಾಧನಗಳಾದರೆ.......!

ಪೇಪರ್ ಕಟಿಂಗ್ಸ್ ಗಳೇ ಕಲಿಕಾ ಸಾಧನಗಳಾದರೆ.......!
ದಿನಪತ್ರಿಕೆಗಳನ್ನು ಓದುವ ಹವ್ಯಾಸ ಉಳ್ಳವರಿಗೆ ಪತ್ರಿಕೆ ಬೇಗನೇ ಬರದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ವಿಚಾರಗಳನ್ನು ಜೀವಂತವಾಗಿಡಲು ಮತ್ತು ಜನರ ತಿಳುವಳಿಕೆಯ ಮಟ್ಟವನ್ನು ಎತ್ತಿ ಹಿಡಿಯಲು ವೃತ್ತಪತ್ರಿಕೆ ಒಂದು ದೊಡ್ಡ ಸಾಧನ. ಹಾಗಾಗಿ ಪತ್ರಿಕೆಯನ್ನೊಮ್ಮೆ ಓದಿದಾಗಲೇ ಸಮಾದಾನ. ಮರುದಿನ ಆ ವೃತ್ತಪತ್ರಿಕೆ ಹಳಸಲಾಗಿ ಮೂಲೆಗುಂಪಾಗುತ್ತದೆ. ಅಂದರೆ ವೃತ್ತಪತ್ರಿಕೆಗೆ ಜೀವ ಇರುವುದು ಒಂದೇ ಒಂದು ಮಾತ್ರ. ಆದರೆ ಅದೇ ಪತ್ರಿಕೆಯನ್ನು ಬಹಳ ದಿನಗಳವರೆಗೆ ಜೀವಂತವಾಗಿ ಇಡುವಂತಾದರೆ ಹೇಗೆ? ಅದರಲ್ಲಿನ ವಿಚಾರಗಳನ್ನು, ಜ್ಞಾನವನ್ನು, ಮೌಲ್ಯಗಳನ್ನು ಪದೇ ಪದೇ ಬಳಸಲು ಬರುವಂತಿದ್ದರೆ ಒಳಿತಲ್ಲವೇ? ಹೌದು ಅದು ಎಂದೆಂದಿಗೂ ಮರೆಯದ ಪತ್ರಿಕೆಯಾಗಿ ಜ್ಞಾನವನ್ನು ವೃದ್ದಿಸುತ್ತ ಇರುತ್ತದೆ. ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮರಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ದೇವರಾಜ ಅವರು. 
ಮಾಡಿದ್ದಾದರೂ ಏನು? : ದಿನ ಪತ್ರಿಕೆಗಳನ್ನು ಓದಿದ ನಂತರ ಬಿಸಾಡದೇ ಅದರಲ್ಲಿನ ಪ್ರಮುಖ ಅಂಕಣ ಬರಹಗಳನ್ನು, ಪ್ರಮುಖ ಸುದ್ದಿಗಳನ್ನು ಕತ್ತರಿಸಿ ಒಂದೆಡೆ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ಸಂಗತ, ಕೃಷಿವಿಶೇಷ, ಶಿಕ್ಷಣ, ವಿಜ್ಞಾನ ವಿಶೇಷ, ಕರ್ನಾಟಕ ದರ್ಶನ, ಮಿನುಗು ಮಿಂಚು, ಒಂಚೂರು, ಪುಟ್ಟಿ, ರಾಮನ್, ವಾರದ ವಿನೋದ, ಪದಬಂಧ, ಹೀಗೆ ವಿವಿಧ ಅಂಕಣ ಬರಹಗಳಲ್ಲದೇ ಪ್ರಮುಖ ತಲೆಬರಹಗಳ ಲೇಖನ, ಸುದ್ದಿಗಳನ್ನು ಚಿತ್ರ ಸಹಿತ ಕತ್ತರಿಸಿ ಇಟ್ಟುಕೊಳ್ಳುತ್ತಾರೆ.
ಕತ್ತರಿಸಿದ ಪತ್ರಿಕಾ ತುಣುಕುಗಳನ್ನು ಅಂಕಣವಾರು ವಿಷಯವಾರು ವಿಂಗಂಡಿಸಿ ಸೂಕ್ತವಾದ ಕಾಗದಕ್ಕೆ ಅಂಟಿಸುತ್ತಾರೆ. 40-50 ಪುಟಗಳ ಕಾಗದಗಳು ಸಂಗ್ರಹವಾದ ನಂತರ ಪಿನ್ ಹಾಕಿ ಬೈಂಡ್ ಮಾಡುತ್ತಾರೆ. ಹೀಗೆ ಒಟ್ಟು 86 ತಲೆಬರಹಗಳಡಿ 175ಕ್ಕೂ ಹೆಚ್ಚು ಪುಸ್ತಕಗಳನ್ನು ತಯಾರಿಸಿದ್ದಾರೆ. ಇವುಗಳಲ್ಲಿ ಬಹುಪಾಲು ‘ಪ್ರಜಾವಾಣಿ’ ಪತ್ರಿಕೆಯ ತುಣುಕುಗಳಾಗಿವೆ. 
ಇದು ಕೇವಲ ಒಂದುದಿನ ಒಂದುವಾರ ಅಥವಾ ಒಂದು ತಿಂಗಳಲ್ಲಿ ಸಂಗ್ರಹಿಸಿದ ಕಾರ್ಯವಲ್ಲ. ಸುಮಾರು ಆರೆಂಟು ವರ್ಷಗಳಿಂದ ಅನೂಚಾನವಾಗಿ ಶ್ರಮವಹಿಸಿ ಪುಸ್ತಕಗಳ ರೂಪದಲ್ಲಿ ಸಂಗ್ರಹಿಸಿಕೊಂಡು ಬಂದಿದ್ದಾರೆ. ಒಂದೊಂದು ಪುಸ್ತಕ ಒಂದೊಂದು ವಿಶ್ವಕೊಶದಂತೆ ಮಾಹಿತಿಯ ಆಗರಗಳೇ ಆಗಿವೆ. 
ಬಳಕೆ ಹೀಗೆ : ಈ ಸಂಗ್ರಹ ಕೇವಲ ಹವ್ಯಾಸಕ್ಕಾಗಿ ಅಲ್ಲ. ಕಲಿಕಾಂಶಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಕಲಿಕೆ ಸಂತಸದಾಯಕ ಹಾಗೂ ವೈವಿಧ್ಯಮಯವಾಗಿ ಇರುತ್ತದೆ ಎಂಬುದು ದೇವರಾಜ ಅವರ ಅನಿಸಿಕೆ. ಪತ್ರಿಕೆಯ ಕೆಲವು ತುಣುಕುಗಳನ್ನು ಮಕ್ಕಳೂ ಸಂಗ್ರಹಿಸುವುದರಿಂದ ಅವರಿಗೆ ಕಲಿಕೆ ಸುಗಮ ಹಾಗೂ ಸರಳವಾಗುತ್ತದೆ. ಮಕ್ಕಳಲ್ಲಿ ಜ್ಞಾನ ಸಂಗ್ರಹದ ಅರಿವನ್ನು ಈಗಿನಿಂದಲೇ ಬೆಳೆಸುವ ಆಶಯ ಇವರದು. 
ಶೈಕ್ಷಣಿಕ ಮೌಲ್ಯ : ಶಿಕ್ಷಕ ಸೃಜನಶೀಲನಾಗಿದ್ದರೆ ಎಂತಹ ರಚನಾತ್ಮಕ ಕಾರ್ಯವನ್ನಾದರೂ ಮಾಡಬಹುದು ಎಂಬುದಕ್ಕೆ ದೇವರಾಜ ಮಾದರಿಯಾಗುತ್ತಾರೆ. ಅದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ವಿರಾಮ ವೇಳೆಯ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಶ್ರಮವಹಿಸಿ ಸೃಜನಾತ್ಮಕತೆಯಲ್ಲಿ ತೊಡಗಿರುವುದು ಗೋಚರಿಸುತ್ತದೆ. ಶಿಕ್ಷಕರಲ್ಲಿ ಬೆಳೆಯಬೇಕಾಗುರುವುದು ಇಂತಹ ಮೌಲ್ಯಗಳಲ್ಲವೇ?
ಅಚ್ಚುಟ್ಟುತನ : ಇವರು ತಯಾರಿಸಿದ ಪುಸ್ತಕಗಳಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಕತ್ತರಿಸಿದ ಪತ್ರಿಕಾ ತುಣುಕುಗಳನ್ನು ಸಮಗಾತ್ರದ ಹಾಳೆಗಳಿಗೆ ಅಂದವಾಗಿ ಅಂಟಿಸಿ ಪುಸ್ತಕಗಳನ್ನು ತಯಾರಿಸಿದ್ದಾರೆ. ಸೂಕ್ತವಾದ ತಲೆಬರಹಗಳನ್ನು ಸ್ಪುಟವಾಗಿ ಬರೆದಿರುವುದು ನೋಡುಗರನ್ನು/ಓದುಗರನ್ನು ಆಕರ್ಷಿಸುತ್ತದೆ. 
ಎಲೆ ಮರೆಯ ಕಾಯಿ : ಇದನ್ನೆಲ್ಲಾ ಮಾಡಿದ್ದು ಯಾರೋ ಮೆಚ್ಚಲಿ ಅಥವಾ ಪ್ರಶಸ್ತಿ ನೀಡಲಿ ಎಂದಲ್ಲ. ಪಾಠಕ್ಕೆ ಪೂರಕವಾಗಿ ಬಳಕೆಯಾಗುವುದರಿಂದ ಮಕ್ಕಳು ಹೆಚ್ಚು ಖುಷಿ ಪಡುತ್ತಾರೆ. ಇದರಿಂದ ಸಂತೃಪ್ತಿ ನೆಮ್ಮದಿ ದೊರೆಯುತ್ತದೆ. ಇವುಗಳು ಕ್ಲಸ್ಟರ್ ಹಾಗೂ ತಾಲೂಕ ಹಂತದ ಕಲಿಕೋಪಕರಣ ಮೇಳದಲ್ಲಿ ಪ್ರದರ್ಶಿತವಾಗಿವೆ. ಕೆಲವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಕೆಲವರು ಉದಾಸೀನ ಮಾಡಿದ್ದಾರೆ. ಇದನ್ನು ಯಾವುದೇ ಪ್ರಚಾರಕ್ಕಾಗಲೀ ಪ್ರಖ್ಯಾತಿಗಾಗಲೀ ಮಾಡಿಲ್ಲ ಎನ್ನುವ ಅವರ ಆಂತರ್ಯದ ಮಾತುಗಳು ಅವರ ಸಹೃದಯತೆಯನ್ನು ತೋರಿಸುತ್ತದೆ. 
ಷೋಕೇಸ್ ಆಗಲಿ! : ಇಂತಹ ಅದೆಷ್ಟೋ ಸಾಧಕ ಶಿಕ್ಷಕರು ಯಾವುದೇ ಪ್ರತಿಷ್ಠೆ ಪ್ರತಿಫಲ ಬಯಸದೇ ತಮ್ಮಷ್ಟಕ್ಕೆ ತಾವೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಶಿಕ್ಷಕರ ಸಾಧನೆಯನ್ನು ಇಲಾಖೆ ಗುರುತಿಸಿ ಅವರ ಕಾರ್ಯವನ್ನು ಷೋಕೇಸ್ ಮಾಡಬೇಕು. ಅದು ಇತರರಿಗೂ ಮಾದರಿಯಾಗುತ್ತದೆ ಅಲ್ಲವೇ?

'ಟೀಚರ್' ಏಪ್ರಿಲ್ 2014
- ಆರ್.ಬಿ.ಗುರುಬಸವರಾಜ. 

No comments:

Post a Comment