April 20, 2014

ಶಿಕ್ಷಣ ಹಾಗೂ ಮಾನಸಿಕ ಒತ್ತಡ

ಶಿಕ್ಷಣ ಹಾಗೂ ಮಾನಸಿಕ ಒತ್ತಡ

ಶಿಕ್ಷಣವೆಂಬುದು ನಿಂತ ನೀರಲ್ಲ. ಅದು ಚಲನಶೀಲವಾದುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಶಿಕ್ಷಣದಲ್ಲಾಗುವ ಬದಲಾವಣೆಗಳು ಹೊಸದೇನಲ್ಲ. ಇಂದು ಹೊಸತೆನಿಸಿದ ವಿಷಯಗಳು ನಾಳೆ ಹಳತಾಗಬಹುದು. ಹೊಸ ಪದ್ದತಿ ಜಾರಿಗೆ ಬಂದಾಗ ಅದಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದಾಗ, ಹೊಂದಿಕೊಳ್ಳಬೇಕಾದವರು ಮಾನಸಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಳೆಯದನ್ನು ಕೈ ಬಿಡದೇ ಹೊಸದನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೇ, ಯಾವುದು ಹಿತ, ಯಾವುದು ಅಹಿತ ಎಂಬುದನ್ನು ವಿವೇಚಿಸದೇ ಡೋಲಾಯಮಾನ ಪರಿಸ್ಥಿತಿ ಏರ್ಪಟ್ಟು ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ.

ಈ ಮಾನಸಿಕ ಒತ್ತಡ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಕಟವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ಎಲ್ಲರೂ ಅಂದರೆ ಸರ್ಕಾರ, ಅಧಿಕಾರಿ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು, ಸಮುದಾಯ ಹೀಗೆ ವಿವಿಧ ಹಂತಗಳಲ್ಲಿ ಇರುವವರೆಲ್ಲರನ್ನೂ ಮಾನಸಿಕ ಒತ್ತಡ ಕಾಡತೊಡಗುತ್ತದೆ.

ಎಲ್ಲರಿಗೂ ಶಿಕ್ಷಣ ಒದಗಿಸುವ, ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ, ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಕನಿಷ್ಟ ಅವಶ್ಯಕತೆ ಪೂರೈಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಾಗುವ ದೋಷಗಳನ್ನು ಸರಿಪಡಿಸುವಲ್ಲಿ ಸರ್ಕಾರಕ್ಕೆ ಅನೇಕ ಸವಾಲುಗಳು ಎದುರಾಗಿ ಸರ್ಕಾರ ನಡೆಸುವವರಿಗೆ ಮಾನಸಿಕ ಒತ್ತಡ ಏರ್ಪಡುತ್ತದೆ.

ಇನ್ನು ಅಧಿಕಾರಿ ವರ್ಗದಲ್ಲಂತೂ ಮಾನಸಿಕ ಒತ್ತಡ ತನ್ನ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿರುತ್ತದೆ. ಸರ್ಕಾರಗಳು ಬದಲಾದಂತೆ ಶಿಕ್ಷಣ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸುವಾಗ ಅನೇಕ ಸಮಸ್ಯೆಗಳು ಎದುರಾಗಿ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಸಮುದಾಯ ಮತ್ತು ಶಾಲೆಗಳ ನಡುವೆ ಉಂಟಾಗುವ ಕೆಲವು ಸಮಸ್ಯೆಗಳನ್ನು ಬಗೆಹರಿಸುವಾಗ ಅಧಿಕಾರಿ ವರ್ಗದವರ ಪಾಡು ಹೇಳತೀರದು. ಸಮುದಾಯದ ಬೇಡಿಕೆ ಈಡೇರಿಸುವಲ್ಲಿ, ಶಿಕ್ಷಣ ಪದ್ದತಿಗಳನ್ನು ಜಾರಿಗೊಳಿಸುವಲ್ಲಿ, ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆ ಹರಿಸುವಾಗ ಅಧಿಕಾರಿಗಳು ಮಾನಸಿಕ ಸಂಘರ್ಷಕ್ಕೆ ಒಳಗಾಗುತ್ತಾರೆ. ಇನ್ನು ಕೈ ಕೆಳಗಿನ ನೌಕರರ ಮೇಲಿನ ಅಭಿಮಾನಕ್ಕೊ, ಮಮಕಾರಕ್ಕೊ ಅಥವಾ ಅವರ ಮೇಲೆ ತೋರುವ ಕರುಣೆ ಕನಿಕರಗಳಿಂದಲೂ ಸಹ ಅಧಿಕಾರಿ ವರ್ಗ ಕೆಲವೊಮ್ಮೆ ತೊಳಲಾಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಹಾಗೂ ಮೇಲಾಧಿಕಾರಿಗಳಿಂದ ಕಾರ್ಯ ಒತ್ತಡ ಬಂದಾಗಲೂ ಸಹ ಮಾನಸಿಕ ಒತ್ತೆಕ್ಕೊಳಗಾಗುತ್ತಾರೆ.

ಶಿಕ್ಷಣ ಕ್ಷೇತ್ರದ ಸಾಧಕ ಸೈನಿಕರಾದ ಶಿಕ್ಷಕರ ಮೇಲಂತೂ ಮಾನಸಿಕ ಒತ್ತಡ ತನ್ನ ಅಟ್ಟಹಾಸವನ್ನೇ ಬೀರಿದೆ. ಪ್ರತಿಯೊಂದು ಹೊಸ ಯೋಜನೆಗಳನ್ನು, ಪದ್ದತಿಗಳನ್ನು ಜಾರಿಗೊಳಿಸಬೇಕಾಗಿರುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ನಿಭಾಯಿವಲ್ಲಿ ಅನೇಕ ತೊಂದರೆ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದ ಸ್ಥಿತಿ ತಲುಪಿದಾಗ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಒಂದೆಡೆ ಅಧಿಕಾರಿ ವರ್ಗ, ಇನ್ನೊಂದೆಡೆ ಸಮುದಾಯ, ಮತ್ತೊಂದೆಡೆ ವಿದ್ಯಾರ್ಥಿಗಳು, ಮಗದೊಂದೆಡೆ ಸರ್ಕಾರದ ಯೋಜನೆಗಳು, ಇವುಗಳೆಲ್ಲವುಗಳಿಗೂ ಹೊಂದಿಕೊಂಡು ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ. ಈ ಎಲ್ಲದರ ಮಧ್ಯವರ್ತಿಯಾದ ಶಿಕ್ಷಕನ ಪಾಡು ಜೇಡನ ಬಲೆಗೆ ಸಿಕ್ಕಿಕೊಂಡ ನೊಣದಂತಾಗಿರುತ್ತದೆ. ಎಲ್ಲದರಲ್ಲೂ ಸಾಮರಸ್ಯ ಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯುವುದು ತುಂಬಾ ತ್ರಾಸದಾಯಕ ಕೆಲಸ. ಈ ಎಲ್ಲಾ ಕಾರಣಗಳಲ್ಲದೇ ಶಿಕ್ಷಕನ ವೈಯಕ್ತಿಕ ಜೀವನದಿಂದಲೂ ಸಹ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಈ ಮಾನಸಿಕ ಒತ್ತಡ ಸಮುದಾಯ ಮತ್ತು ವಿದ್ಯಾರ್ಥಿಗಳನ್ನೂ ಬಿಟ್ಟಿಲ್ಲ. ದಿನದಿನಕ್ಕೂ ಬದಲಾಗುತ್ತಿರುವ ಶಿಕ್ಷಣದ ವಿದ್ಯಮಾನಗಳು, ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ನಾನಾ ಕಾರಣಗಳಿಂದ ಸರಿಯಾಗಿ ಮಕ್ಕಳಿಗೆ ತಲುಪದೇ ಇರುವುದು, ಸ್ಥಳೀಯ ಬೇಡಿಕೆಗಳನ್ನು ಸರ್ಕಾರವಾಗಲೀ ಅಧಿಕಾರಿಗಳಾಗಲೀ ಈಡೇರಿಸದೇ ಇರುವುದು ಹೀಗೆ ಅನೇಕ ಕಾರಣಗಳಿಂದ ಸಮುದಾಯ ಮಾನಸಿಕ ಒತ್ತಡಕ್ಕೊಳಗಾಗುತ್ತದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆ, ಪಾಲಕರ ನಿರಾಸಕ್ತಿ, ಬಡತನ, ಕಡಿಮೆ ಬೌದ್ದಿಕ ಮಟ್ಟ, ಕಲಿಕೆಯಲ್ಲಿ ನಿರಾಸಕ್ತಿ, ಕೀಳರಿಮೆ, ಹಿಂಜರಿಕೆ, ಭಯ, ಆತಂಕ ಹೀಗೆ ಅನೇಕ ಕಾರಣಗಳಿಂದ ವಿದ್ಯಾರ್ಥಿಗಳು ಮಾನಸಿಕ ತೊಳಲಾಟದಲ್ಲಿ ತೇಲಾಡುತ್ತಾರೆ.
ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಮೇಲಿನಿಂದ ಕೆಳಗಿನ ಹಂತದವರೆಗಿನ ಎಲ್ಲಾ ವರ್ಗದವರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಭಾವನಾ ಜೀವಿಗಳಲ್ಲಿ ಇದರ ತೀವ್ರತೆ ಇನ್ನೂ ಹೆಚ್ಚಾಗಿರುತ್ತದೆ. ಇದರಿಂದ ಶಿಕ್ಷಣ ಕ್ಷೇತ್ರ ವಾಗವಾಗಿ ಮುಂದುವರೆಯದೇ ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ.

ಎಲ್ಲಾ ಹಂತದವರಿಗೂ ಮಾನಸಿಕ ಒತ್ತಡ ಉಂಟಾಗಲು ಕಾರಣವೇನೆಂದರೆ ಪ್ರತಿಯೊಂದು ಯೋಜನೆಯ ತಯಾರಿಕೆಯಲ್ಲಿ ಆಯಾ ಹಂತದ ಪರಿಣಿತರನ್ನು, ಅನುಭವಿಗಳನ್ನು ಸೇರಿಸಿಕೊಂಡು ಯೋಜನೆ ತಯಾರಿಸದೇ ಇರುವುದು, ಗ್ರಾಮೀಣ ಭಾಗದವರಿಗೆ ಹೆಚ್ಚು ಒತ್ತು ಕೊಡದೇ ಇರುವುದು ಹಾಗೂ ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸದೇ ಇರುವುದರಿಂದ ಮಾನಸಿಕ ಒತ್ತಡದಲ್ಲಿ ಸಿಲುಕುತ್ತಿರುವುದು ಕಂಡು ಬರುತ್ತದೆ. ಇದರಿಂದಾಗಿ ಗುಣಾತ್ಮಕವಾದ ಹಾಗೂ ಪ್ರಮಾಣಾತ್ಮಕವಾದ ಶಿಕ್ಷಣ ಇಂದು ಎಲ್ಲರಿಗೂ ದೊರೆಯದಂತಾಗಿದೆ. ಆದ್ದರಿಂದ ಎಲ್ಲರೂ ಅವರವರ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ ಮಾನಸಿಕ ಒತ್ತಡ ರಹಿತ ಸಮಾಜಕ್ಕೆ ನಾಂದಿ ಹಾಡೋಣವೇ?

‘ಟೀಚರ್’ ಸೆಪ್ಟಂಬರ್ 2005
ಆರ್.ಬಿ.ಗುರುಬಸವರಾಜ

No comments:

Post a Comment