April 28, 2014

ಹಾಕಿ ಮಾಂತ್ರಿಕ ಧ್ಯಾನ್‍ಚಂದ್: ಒಂದು ನೆನಪು

ಹಾಕಿ ಮಾಂತ್ರಿಕ ಧ್ಯಾನ್‍ಚಂದ್: ಒಂದು ನೆನಪು

1928ರಲ್ಲಿ ಆಮ್‍ಸ್ಟರ್‍ಡಮ್‍ನಲ್ಲಿ ಭಾರತ ಪ್ರಥಮವಾಗಿ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಪಡೆದಾಗ “ಹಾಕಿ ಒಂದು ಆಟವಲ್ಲ, ಅದೊಂದು ಯಕ್ಷಿಣಿ ವಿದ್ಯೆ” “ಹಾಕಿ ಯಕ್ಷಿಣಿಗಾರ – ಧ್ಯಾನ್‍ಚಂದ್” ಎಂದೆಲ್ಲಾ ಅಂದಿನ ಪತ್ರಿಕೆಗಳು ವರ್ಣಿಸಿದವು. ಈ ಎಲ್ಲಾ ಖ್ಯಾತಿಗೆ ಭಾಜನರಾದವರು ಭಾರತದ ಖ್ಯಾತ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್.
ಧ್ಯಾನ್‍ಚಂದ್ ಕೇವಲ ಭಾರತದ ಭಾರತದ ಹಾಕಿ ಆಟಗಾರನಾಗಿ ಹೆಸರುಗಳಿಸಲಿಲ್ಲ. ಭಾರತದ ಸೇನಾನಾಯಕ (ಮೇಜರ್)ನಾಗಿಯೂ ಹೆಸರುಗಳಿಸಿದವರು. ಬಾಲ್ಯದಲ್ಲಿ ಆಟಗಳಲ್ಲಿ ಅನಾಸಕ್ತಿ ಹೊಂದಿದ್ದರೂ ಪ್ರಾಮಾಣಿಕ ಪ್ರಯತ್ನಗಳಿಂದ ಹುಟ್ಟಿದ ದಿನವನ್ನು “ರಾಷ್ಟ್ರೀಯ ಕ್ರೀಡಾದಿನ”ವನ್ನಾಗಿ ಆಚರಿಕೊಳ್ಳುವ ಹಂತಕ್ಕೆ ಬೆಳೆದ ಏಕೈಕ ವ್ಯಕ್ತಿಯೆಂದರೆ ಮೇಜರ್ ಧ್ಯಾನ್‍ಚಂದ್.


ಧ್ಯಾನ್‍ಚಂದ್ ಹುಟ್ಟಿದ್ದು 29ನೇ ಆಗಸ್ಟ್ 1905ರಂದು ಅಲಹಾಬಾದಿನ ಪ್ರಯಾಗದಲ್ಲಿ. ತಂದೆ ಸಮೇಶ್ವರದತ್ತ ಭಾರತೀಯ ಸೇನೆಯಲ್ಲಿದ್ದ ಇವರೂ ಸಹ ರೆಜಿಮೆಂಟಿನಲ್ಲಿ ಉತ್ತಮ ಹಾಕಿ ಪಟುವಾಗಿದ್ದರು. ತಂದೆಯ ಪದೇಪದೇ ವರ್ಗಾವಣೆಯಿಂದಾಗಿ ಕುಟುಂಬವು ಒಂದಡೆ ನೆಲೆನಿಲ್ಲಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಧ್ಯಾನ್‍ಚಂದ್ ಸರಿಯಾಗಿ ವಿದ್ಯಾಭ್ಯಾಸ ಮಾಡಲಾಗದೇ ಆರನೇ ತರಗತಿ ಶಾಲೆ ಬಿಡಬೇಕಾಯಿತು.

ಬಾಲ್ಯದಲ್ಲಿ ಮಲ್ಲಯುದ್ಧ ಮತ್ತು ಕುಸ್ತಿಗಳಲ್ಲಿ ಮಾತ್ರ ಆಸಕ್ತಿ ಹೊಂದಿದ್ದ ಧ್ಯಾನ್‍ಸಿಂಗ್ ಇತರೆ ಎಲ್ಲಾ ಆಟಗಳಲ್ಲಿ ನಿರಾಸಕ್ತಿ ಹೊಂದಿದ್ದರು. 1922ರಲ್ಲಿ ಅಂದರೆ 16ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದರು. ಆಗ ರೆಜಿಮೆಂಟಿನವರು ಹಾಕಿ ಆಟವನ್ನೇ ವಿಶೇಷವಾಗಿ ಅಭ್ಯಾಸ ಮಾಡಿಸುತ್ತಿದ್ದರು. ಸಣ್ಣಗಾತ್ರದ ಚುರುಕು ನಡೆನುಡಿಯ ಅದಮ್ಯ ಚೇತನಾಶೀಲನಾದ ಧ್ಯಾನ್‍ಚಂದ್‍ನ ಪ್ರತಿಭೆಯನ್ನು ಸೂಕ್ಷ್ಮವಾಗಿ ಪತ್ತೆಹಚ್ಚಿದ ಸುಬೇದಾರ್ ಬಾಳೆ ತಿವಾರಿಯವರು ಅವರನ್ನು ಉತ್ತಮ ಹಾಕಿ ಪಟುವಾಗಿ ಬೆಳೆಯಲು ಭದ್ರ ಬುನಾದಿ ಹಾಕಿದರು. ಅಲ್ಲದೇ ಅವರ ಎಲ್ಲಾ ಜವಾಬ್ದಾರಿಗಳನ್ನು ತಾವೇ ಹೊತ್ತರು.

ಹಗಲಿನಲ್ಲಿ ಸೇನಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಧ್ಯಾನ್‍ಚಂದ್‍ರಿಗೆ ಹಾಕಿಯಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕಾಗಿ ಅವರು ರಾತ್ರಿ ಚಂದ್ರನ ಬೆಳಕಿನಲ್ಲಿ ಅಭ್ಯಾಸ ಮಾಡತೊಡಗಿದರು. ಇದನ್ನು ಗಮನಿಸಿದ ಅವರ ಮೊದಲ ಕೋಚ್ ಪಂಕ್‍ಗುಪ್ತಾ ‘ಧ್ಯಾನಸಿಂಗ್’ ಎಂದಿದ್ದ ಅವರ ಹೆಸರನ್ನು “ಧ್ಯಾನ್‍ಚಂದ್” ಎಂದು ಬದಲಾಯಿಸಿದರು.

1926ರಲ್ಲಿ ಭಾರತ ಹಾಕಿ ತಂಡ ಪ್ರಥಮ ಬಾರಿಗೆ ವಿದೇಶ ಪ್ರವಾಸಕೈಗೊಂಡಿತು. ನ್ಯೂಜಿಲೆಂಡಿನ ಪ್ರಥಮ ಕೈಗೊಂಡ ಆ ತಂಡದಲ್ಲಿ ಧ್ಯಾನ್‍ಚಂದ್ ಇದ್ದರು. ಅಲ್ಲಿ ನಡೆದ 20 ಪಂದ್ಯಗಳಲ್ಲಿ ಭಾರತವು 18 ಪಂದ್ಯಗಳಲ್ಲಿ ವಿಜಯಿಯಾಯಿತು. 18 ಪಂದ್ಯಗಳಲ್ಲಿ ಭಾರತ 192 ಗೋಲುಗಳಿಸಿತು. ಅದರಲ್ಲಿ ಧ್ಯಾನಚಂದ್ ಒಬ್ಬರೇ 100 ಗೋಲುಗಳನ್ನು ಪಡೆದದ್ದು ಪ್ರೇಕ್ಷಕರನ್ನು ಮೂಕವಿಸ್ಮಿರನ್ನಾಗಿಸಿತು. ಈ ಪಂದ್ಯಗಳಲ್ಲಿ ಅವರು ಅತ್ಯಂತ ಮಹತ್ವದ ಸೆಂಟರ್ ಪಾರ್ವರ್ಡ್ ಆಟಗಾರ ಎಂಬ ಖ್ಯಾತಿ ಪಡೆದರು. ನ್ಯೂಜಿಲ್ಯಾಂಡ್ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ನಂತರ ಭಾರತೀಯ ಸೇನೆ ಇವರನ್ನು ಸೇನಾನಾಯಕರಾಗಿ ಬಡ್ತಿ ನೀಡಿತು. 1928ರ ಆಮ್‍ಸ್ಟರ್‍ಡಮ್, 1932ರ ಲಾಸ್‍ಏಂಜಲೀಸ್ ಹಾಗು 1936ರ ಬರ್ಲಿನ್‍ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಧ್ಯಾನ್‍ಚಂದ್ ಈ ಮೂರು ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಪಡೆದರು. 1936ರ ಬರ್ಲಿನ್ ಒಲಿಂಪಿಕ್ಸ್‍ನ ವಿಜಯದ ನಂತರ “ಅಡಾಲ್ಫ ಹಿಟ್ಲರ್” ಇವರನ್ನು ಜರ್ಮನ್ ಸೇನೆಗೆ ಸೇನಾಧಿಪತಿಯಾಗಿ ಆಹ್ವಾನಿಸಿದರು. ಆದರೆ ಧ್ಯಾನ್‍ಚಂದ್ ಅದನ್ನು ನಿರಾಕರಿಸಿದರು.

ಚೆಂಡಿನ ಚಲನೆಯನ್ನು ಹದ್ದಿನ ಕಣ್ಣಿನಿಂದ ಗಮನಿಸುತ್ತಿದ್ದ ಧ್ಯಾನ್‍ಸಿಂಗ್ ವೇಗದಲ್ಲಿ ಬೇಟೆನಾಯಿಯಂತೆ ನುಗ್ಗುತ್ತಿದ್ದರು. ಗೋಲಿನ ಕಡೆ ಚೆಂಡಿನ್ನು ನುಗ್ಗಿಸುವಾಗ ಎದುರಾಳಿಗಳಾರೂ ಸಮೀಪಕ್ಕೆ ಬಾರದಂತೆ ತಡೆಗಟ್ಟುತ್ತಾ ನೋಡು ನೋಡುತ್ತಿದ್ದಂತೆಯೇ ಗೋಲು ಹೊಡೆಯುತ್ತಿದ್ದ ಅವರ ಪರಿ ಎದುರಾಳಿ ತಂಡದವರಿಗೆ ಸೋಜಿಗವನ್ನುಂಟು ಮಾಡುತ್ತಿತ್ತು.

ಒಮ್ಮೆ ಹಾಲೆಂಡ್‍ನೊಂದಿಗೆ ಆಟವಾಡುತ್ತಿದ್ದಾಗ ಇವರ ಬ್ಯಾಟಿನಲ್ಲಿ ಅಯಸ್ಕಾಂತವಿರಬಹುದೆಂಬ ಗುಮಾನಿಯಿಂದ ಬ್ಯಾಟನ್ನೂ ಮುರಿದು ಹಾಕಲಾಯಿತು. ಇನ್ನೊಮ್ಮೆ ಒಬ್ಬ ಮಹಿಳಾ ಪ್ರೇಕ್ಷಕಿ ತನ್ನ ಊರುಗೋಲಿನಿಂದ ಆಟವಾಡಿ ಗೆದ್ದು ಎಲ್ಲಾರನ್ನೂ ಬೆರೆಗುಗೊಳಿಸಿದರು.

ಧ್ಯಾನ್‍ಸಿಂಗ್ ಅವರ ಸಹೋದರ ರೂಪ್‍ಸಿಂಗ್ ಹಾಗೂ ಮಗ ಅಶೋಕ್ ಕುಮಾರ್ ಸಹ ಖ್ಯಾತ ಹಾಕಿ ಆಟಗಾರರು. ಇವರ ಆಟವನ್ನೂ ತಪ್ಪದೇ ನೋಡುತ್ತಿದ್ದ ಶ್ರೇಷ್ಠ ಕ್ರಿಕೆಟಿಗ ಬ್ರಾಡ್‍ಮನ್ ಧ್ಯಾನ್‍ಚಂದ್ ಕುರಿತು “ಕ್ರಿಕೆಟ್‍ನಲ್ಲಿ ರನ್ ಗಳಿಸುವಷ್ಟು ವೇಗವಾಗಿ ಗೋಲು ಗಳಿಸುತ್ತಿದ್ದರು” ಎಂದು ಉದ್ಗರಿಸಿದರು.

ಇವರ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ 1956ರಲ್ಲಿ “ಪದ್ಮಭೂಷಣ” ಪ್ರಶಸ್ತಿ ನೀಡಿ ಗೌರವಿಸಿತು. ಜೊತೆಗೆ ಪ್ರತಿವರ್ಷ “ಧ್ಯಾನ್‍ಚಂದ್ ಟ್ರೋಫಿ ಹಾಕಿ ಟೂರ್ನಮೆಂಟ್” ಕೂಡಾ ನಡೆಸುತ್ತದೆ.

1956ರಲ್ಲಿ ತಮ್ಮ 51ನೇ ವಯಸ್ಸಿನಲ್ಲಿ ಸೇನೆಯಿಂದ ನಿವೃತ್ತಿಯ ನಂತರ ರಾಜಸ್ಥಾನದ ಮೌಂಟ್‍ಅಬುವಿನಲ್ಲಿ ಹಾಕಿ ತರಬೇತಿ ಶಾಲೆ ಪ್ರಾರಂಭಿಸಿದರು. ನಂತರ ಪಾಟಿಯಾಲದಲ್ಲಿ ಭಾರತ ಹಾಕಿ ತಂಡದ ಕೋಚ್ ಆಗಿ ನೂರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿದರು.

ಇವರ ಕೊನೆಯ ದಿನಗಳು ಬಹಳ ಅಹಿತಕರವಾಗಿದ್ದವು. ಅರ್ಥಿಕ ಮುಗ್ಗಟ್ಟು ಹಾಗೂ ಲಿವರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇವರು “ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)”ಯಲ್ಲಿ ಜನರಲ್ ಪಾರ್ಟಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ದಾಖಲಾಗಿದ್ದರು ಎಂಬುದು ತಿಳಿಯುತ್ತದೆ. ಇದನ್ನು ಅವರು ಅತ್ಯಂತ ವಿಷಾದದಿಂದ ತಮ್ಮ ಆತ್ಮಚರಿತ್ರೆ “ಗೋಲ್”ನಲ್ಲಿ ಹಂಚಿಕೊಂಡಿದ್ದಾರೆ.

ಆದರೂ ಇವರ ಸಾಧನೆಯನ್ನು ಗಮನಿಸಿದ ಸರ್ಕಾರ 2002ರಿಂದ ಪ್ರತಿವರ್ಷ ಕ್ರೀಡೆಯಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಿದ ವ್ಯಕ್ತಿಗಳಿಗೆ ಜೀವಮಾನ ಸಾಧನೆಗಾಗಿ “ಧ್ಯಾನಚಂದ್ ಪ್ರಶಸ್ತಿ” ನೀಡಿ ಗೌರವಿಸುತ್ತದೆ. ಅದೇನೇ ಇರಲಿ ಆಗಸ್ಟ್ 29ರ ಇವರ ಹುಟ್ಟುಹಬ್ಬವೇ “ರಾಷ್ಟ್ರೀಯ ಕ್ರೀಡಾದಿನ” ವೆಂಬುದು ಮಾತ್ರ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ.

‘ಶಿಕ್ಷಣ ವಾರ್ತೆ’  ಆಗಸ್ಟ್ 2011
- ಆರ್.ಬಿ.ಗುರುಬಸವರಾಜ

No comments:

Post a Comment