April 28, 2014

ಇದರ ಮೇಲೆ ತೆರಿಗೆ ಹಾಕಬಹುದು!

ಇದರ ಮೇಲೆ ತೆರಿಗೆ ಹಾಕಬಹುದು!

ಎಲ್ಲ ಮಕ್ಕಳಂತೆ ಶಾಲಾ ವಯಸ್ಸಿಗೆ ಶಾಲೆಗೆ ಸೇರಿ ನಲಿದಾಡಬೇಕಾದ ವಯಸ್ಸಿಗೆ ಆ ಹುಡುಗನಿಗೆ ದುಡುಮೆ ಅನಿವಾರ್ಯವಾಗಿತ್ತು. ಹದಿನಾಲ್ಕನೇ ವಯಸ್ಸಿಗಿಂತ ಮುಂಚೆಯೇ ಒಬ್ಬ ಪುಸ್ತಕ ವ್ಯಾಪಾರಿಯ ಬಳಿ ಪುಸ್ತಕಗಳಿಗೆ ರಟ್ಟು ಹಾಕುವ ಕೆಲಸಕ್ಕೆ ಸೇರಿಕೊಂಡು ಪುಸ್ತಕಗಳಿಗೆ ರಟ್ಟು ಹಾಕುವ ಹುಡುಗನೊಬ್ಬ ಮುಂದೆ ವಿಜ್ಞಾನಿಯಾಗುತ್ತಾನೆಂದು ಯಾರೂ ಕನಸಿನಲ್ಲಿಯೂ ಎಣಿಸಿರಲಿಲ್ಲ.

ಶಾಲ ವಿದ್ಯಾಭ್ಯಾಸವಿಲ್ಲದೇ ವಿಜ್ಞಾನಿಯಾದ ಬಾಲಕನ್ಯಾರು ಗೊತ್ತೆ? ಅವನೇ ಮೈಕೆಲ್ ಫ್ಯಾರಡೆ. ಫ್ಯಾರಡೇ ಜನಿಸಿದ್ದು 1791 ಸೆಪ್ಟಂಬರ್ 22 ರಂದು ಒಂದು ಬಡ ಕಮ್ಮಾರನ ಕುಟುಂಬದಲ್ಲಿ. ಬಡತನದಿಂದಾಗಿ ಫ್ಯಾರಡೆ  ಪಾಲಿಗೆ ವಿದ್ಯಾಭ್ಯಾಸ ದೂರವಾಯಿತು. ದುಡಿಮೆ ಅನಿವಾರ್ಯವಾಗಿ ರಟ್ಟು ಹಾಕುವ ಕೆಲಸಕ್ಕೆ ಸೇರಿಕೊಂಡ. ರಟ್ಟು ಹಾಕುತ್ತಲೇ, ರಟ್ಟು ಹಾಕಲು ಕೊಟ್ಟ ವಿಜ್ಞಾನ ಪುಸ್ತಕಗಳಿಂದ ಆಳವಾದ ಅಧ್ಯಯನ ಮಾಡಿ, ಓದಿದ್ದನ್ನು ಮನಸ್ಸಿನಲ್ಲಿ ತಿರುವಿಹಾಕಿ ಚಿತ್ರಗಳನ್ನು, ವಿವರಣೆಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ. ಅಲ್ಲಲ್ಲಿ ನಡೆಯುವ ಉಪನ್ಯಾಸಗಳನ್ನು ಕೇಳಿ ಟಿಪ್ಪಣಿಗಳನ್ನು ಬರೆದುಕೊಂಡು, ಪ್ರಯೋಗಗಳಿಗೆ ನೆರವಾಗುವ ಚಿತ್ರಗಳನ್ನು ರಚಿಸಿಕೊಳ್ಳುತ್ತಿದ್ದ.

ಸಂಗ್ರಹಿಸಿದ ಟಿಪ್ಪಣಿ ಹಾಗೂ ಚಿತ್ರಗಳನ್ನು ಸೇರಿಸಿ “ಸರ್ ಹಂಫಿಡೇವಿ” ಯವರಿಗೆ ಕಳಿಸಿಕೊಟ್ಟು ಅವರ ಬಳಿ ಕೆಲಸಕ್ಕಾಗಿ ಬೇಡಿದ. ವಿಜ್ಞಾನದಲ್ಲಿ ಅವನಿಗಿದ್ದ ಆಸಕ್ತಿ, ಆಳವಾದ ಅರಿವು ಆ ಟಿಪ್ಪಣಿಗಳಲ್ಲಿ, ಚಿತ್ರಗಳಲ್ಲಿ ಪ್ರತಿಬಿಂಬಗೊಂಡಿದ್ದವು. ತಕ್ಷಣ ಕೆಲಸ ಸಿಗಲಿಲ್ಲವಾದರೂ 1813ರಲ್ಲಿ ಡೇವಿಯವರ ಸಹಾಯಕನಾಗಿ ರಾಯಲ್ ಸೊಸೈಟಿ ಸೇರಿದ. ಆಗ ಯುರೋಪಿನ ಅನೇಕ ಮಂದಿ ಪ್ರಸಿದ್ಧಿ ವಿಜ್ಞಾನಿಗಳನ್ನು ಕಾಣುವ ಮತ್ತು ಅವರ ಉಪನ್ಯಾಸ ಕೇಳುವ ಅವಕಾಶ ದೊರೆಯಿತು.1816ರಲ್ಲಿ ಫ್ಯಾರಡೆ ತನ್ನ ಮೊದಲ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದನು. ಅದೇ ವರ್ಷ ಅವನು ಕೆಲವು ಹೊಸ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಿದನು.


1821 ಫ್ಯಾರಡೆ ಜೀವನದ ಮೈಲಿಗಲ್ಲು. ವಿದ್ಯುತ್ ಪ್ರವಹಿಸುವ ಒಂದು ತಂತಿ ಅದರ ಕೆಳಗೆ ನಿಲ್ಲಿಸಿದ್ದ ಅಯಸ್ಕಾಂತದ ಅಕ್ಷವನ್ನು ಬಳಸಿ ಸುತ್ತುತ್ತದೆ ಎನ್ನುವುದನ್ನು ತೀರಾ ಸರಳ ಉಪಕರಣಗಳನ್ನುಪಯೋಗಿಸಿ ತೋರಿಸಿದ. 1824ರಲ್ಲಿ “ರಾಯಲ್ ಸೊಸೈಟಿ” ಯ ಸದಸ್ಯನಾದನು.

“ಪ್ರಕೃತಿಯಲ್ಲಿನ ಎಲ್ಲಾ ಬಲಗಳು ಒಂದೇ ಮೂಲದಿಂದ ಹುಟ್ಟಿದ್ದು, ಒಂದು ಬಲವನ್ನು ಇನ್ನೊಂದು ಬಲವನ್ನಾಗಿ ಪರಿವರ್ತಿಸಲು ಸಾಧ್ಯ” ಎಂದು ಫ್ಯಾರಡೆ ನಂಬಿದ್ದ. ಈ ನಂಬಿಕೆಯೇ ಅವನ ಎಲ್ಲಾ ಪ್ರಯೋಗಗಳಿಗೂ ಆಧಾರವಾಗಿತ್ತು.ಕಾಂತ ಧೃವಗಳ ನಡುವೆ ಒಂದು ಲೋಹದ ಬಿಲ್ಲೆ ತಿರುಗಿಸಿ ಅದರಿಂದ ವಿದ್ಯುತ್ ಉತ್ಪಾದಿಸಬಹುದೆಂದು ಫ್ಯಾರಡೆ ತೋರಿಸಿದ. ಇದು ಮುಂz ಡೈನಾಮೋ ಸೃಷ್ಟಿಗೆ ಕಾರಣವಾಯಿತು.

ಫ್ಯಾರಡೆ ಸಾರ್ವಜನಿಕ ಭಾಷಣ ಮತ್ತು ಪ್ರದರ್ಶಗಳಿಗೆ ಹೆಸರುವಾಸಿಯಾಗಿದ್ದ. ಒಮ್ಮೆ ಅವನು ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಪ್ರಯೋಗವನ್ನು ಪ್ರದರ್ಶಿಸಿ ವಿವರಿಸುತ್ತಿದ್ದಾಗ ಆ ದೇಶದ ವಿದೇಶಾಂಗ ಸಚಿವರು. ಈ ಪ್ರಯೋಗದಿಂದೇನು ಉಪಯೋಗ ಎಂದು ಕೇಳಿದರು. ತಟ್ಟನೇ ಫ್ಯಾರಡೇ “ಮಾನ್ಯರೇ ನೀವು ಮುಂದೆ ಇದರ ಮೇಲೆ ತೆರಿಗೆ ಹಾಕಬಹುದು” ಎಂದರಂತೆ.

ಆಡಂಬರದ ಬದುಕು ಫ್ಯಾರಡೆ ಜೀವನಕ್ಕೆ ಒಗ್ಗಲಿಲ್ಲ. ಅವನು ಕೀರ್ತಿಯನ್ನಾಗಲೀ, ಸ್ಥಾನವಾನ್ನಗಲೀ ಎಂದೂ ಬಯಸಲಿಲ್ಲ. ಮಕ್ಕಳಿಲ್ಲದ ಫ್ಯಾರಡೆಯ ಅವಿಶ್ರಾಂತ ದುಡಿಮೆಯಿಂದಾಗಿ ಆರೋಗ್ಯ ಕೆಟ್ಟಿತು. 1861 ಆಗಸ್ಟ್ 25 ರಂದು ಫ್ಯಾರಡೆ ದೇಹಾಂತ್ಯವಾದರೂ ಅವನ ಸಾಧನೆಗಳು ನಮ್ಮ ಕಣ್ಣೆದುರಿಗಿವೆ.

‘ಟೀಚರ್’ ಮೇ 2003
- ಆರ್.ಬಿ.ಗುರುಬಸವರಾಜ

No comments:

Post a Comment