April 28, 2014

ಇಂದಿನ ಶಿಕ್ಷಣದಲ್ಲಿ ದೂರದರ್ಶನದ ಪ್ರಭಾವ

ಇಂದಿನ ಶಿಕ್ಷಣದಲ್ಲಿ ದೂರದರ್ಶನದ ಪ್ರಭಾವ

ಇಂದಿನ ಕಂಪೂಟರ್ ಯುಗದಲ್ಲಿ, ದೂರದರ್ಶನದ ಶಿಕ್ಷಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಸಮೂಹ ಮಾಧ್ಯಮವಾಗಿದೆ. ಧೃಕ್-ಶ್ರವಣೋಪಕರಣ ಸಾಧನವಾದ ದೂರದರ್ಶನ ಬೋಧನೆ-ಕಲಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಿ ಕಲಿಕೆಯನ್ನು ಸುಗಮ ಹಾಗೂ ಸಂತಸದಾಯಕವನ್ನಾಗಿಸುತ್ತದೆ ಎಂಬುದದಲ್ಲಿ ಎರಡು ಮಾತಿಲ್ಲ. ದೂರದರ್ಶನದ ಬಗ್ಗೆ ಕೇಳದ ಕಂಡರಿಯದ ಕಾಲವೊಂದಿತ್ತು ಆದರೆ ಈಗ ಪ್ರತಿಯೊಂದು ಗ್ರಾಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಪ್ರತಿಯೊಂದು ಸಣ್ಣ-ಪುಟ್ಟ ಹಳ್ಳಿಗಳ ಗುಡಿಸಲುಗಳಲ್ಲಿ ಸಹ ಕಂಡುಬರುವ ಏಕೈಕ ಮಾಧ್ಯಮ ದೂರದರ್ಶನ. ಈ ದೂರದರ್ಶನಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಅಬಾಲವೃದ್ದರಿಗೂ ಸಹ ಮನೋರಂಜನೆ ನೀಡುತ್ತವೆಂದು ಹೇಳಲಾಗುವುದಿಲ್ಲ. ಅದರಲ್ಲಿನ ಕೆಲವೊಂದು ಕಾರ್ಯಕ್ರಮಗಳು ನಮ್ಮ ಬುದ್ದಿಗೆ. ಜ್ಞಾನಕ್ಕೆ, ಅರಿವಿಗೆ ಚುರುಕನ್ನು ಒದಗಿಸುತ್ತವೆ. ಇತಿಹಾಸದ ಗತವೈಭವ ಸಾರುವ ಕಾರ್ಯಕ್ರಮಗಳು ; ಜ್ಞಾನದ ರೀತಿ-ನೀತಿಗಳು, ಆಚಾರ-ವಿಚಾರಗಳು, ನಡವಳಿಕೆಗಳನ್ನು ತಿಳಿಸುವಂತಹ ಕಾರ್ಯಕ್ರಮಗಳು ; ಪ್ರಾಣಿಗಳ, ಪಕ್ಷಿಗಳ ಜೀವನ ಕ್ರಮವನ್ನು ತಿಳಿಸುವಂತಹ ಕಾರ್ಯಕ್ರಮಗಳು ; ಯೋಗ, ಧ್ಯಾನ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ; ಹೀಗೆ ಮೈಮನಗಳಿಗೆ ಮುದ ನೀಡುವಂತಹ ಅನೇಕ ಉಪಯುಕ್ತ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತವೆ.

ದೂರದರ್ಶನದಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮವನ್ನು ವಿವೇಚನೆಯಿಂದ ವಿಕ್ಷಿಸಿದಲ್ಲಿ, ಪ್ರತಿಯೊಂದು ಕಾರ್ಯಕ್ರಮದಲ್ಲೂ ತಿಳಿದುಕೊಳ್ಳಬಹುದಾದಂತಹ ಆದರ್ಶ ಗುಣಗಳು, ನಡವಳಿಕೆಗಳು, ಮಾನವೀಯ ಮೌಲ್ಯಗಳು ಅಡಗಿರುತ್ತದೆ. ಆದರೆ ಇಂದಿನ ಪೀಳಿಗೆಯ ಮಕ್ಕಳು ಇಂತಹ ಕಾರ್ಯಕ್ರಮಗಳನ್ನು ಮುಖ್ಯವಾಗಿ ಅನಪೇಕ್ಷಿತ ಧಾರವಾಹಿಗಳನ್ನು ವೀಕ್ಷಿಸಿ ತಮ್ಮ ಮುಂದಿನ ಭವಿಷ್ಯವನ್ನು ತಾವೇ ತಮ್ಮ ಕೈಯಾರ ಪಾತಾಳಕ್ಕೆ ನೂಕುತ್ತಿದ್ದಾರೆ.

ದೂರದರ್ಶನದ ಮಾಲೀಕರಾದ ತಂದೆ-ತಾಯಿ, ಪಾಲಕ-ಪೋಷಕರಿಗೂ ಸಹ ನಮ್ಮ ಮನೆಯಲ್ಲಿ ಶಾಲೆಯಲ್ಲಿ ಕಲಿಯುವ ಮಕ್ಕಳಿದ್ದಾರೆ ಎಂಬ ಪರಿಜ್ಞಾನವಿಲ್ಲದೇ ಯಾವಾಗಲೂ ದೂರದರ್ಶನ ವೀಕ್ಷಿಸುತ್ತಿರುತ್ತಾರೆ. ಇದರಿಂದಾಗಿ ವ್ಯಾಸಂಗದಲ್ಲಿ ನಿರತರಾದ ಮಕ್ಕಳಿಗೆ ಇದೊಂದು ‘ಯಮಹಿಂಸೆ’ ಯಾಗಿದೆ. ಮಕ್ಕಳ ಮನಸ್ಸು ಮೊದಲೇ ಚಂಚಲ. ಮನೆಯಲ್ಲಿ ಟಿ.ವಿ.ಹಚ್ಚಿದ ಕೂಡಲೇ ಅವರ ಕಿವಿಗಳು ಆಲಿಸುವುದು ದೂರದರ್ಶನದ ಕಾರ್ಯಕ್ರಮಗಳನ್ನು. ಇಲ್ಲಿ ಕೇವಲ ಮಕ್ಕಳ ಮುಂದೆ ಪುಸ್ತಕಗಳಲ್ಲಿ ಅವಿತಿದ್ದರೂ ಮನಸ್ಸು ಮಾತ್ರ ದೂರದರ್ಶನದ ಕಡೆ ವಾಲಿರುತ್ತದೆ. ಈ ರೀತಿಯ ಯಾಂತ್ರಿಕ ಓದಿನಿಂದ ಮಕ್ಕಳ ಭವಿಷ್ಯ ಹಾಳಗುತ್ತದೆ. ಬಹುತೇಕ ಹಳ್ಳಿಗಳಲ್ಲಿ ಪಾಲಕರು ಗಮನಿಸದೇ ತಮ್ಮ ಮಕ್ಕಳ ಬಾಳನ್ನು ಅಂಧಕಾರದಲ್ಲಿ ನೂಕುತ್ತಿದ್ದಾರೆ. “ದೇಶ ಕಟ್ಟುವ ಕಾರ್ಯ ತರಗತಿ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ” ಎಂಬ ದಾರ್ಶನಿಕ ಮಾತು ಸುಳ್ಳಲ್ಲ. ಆದರೆ ಅದು ನಾಲ್ಕು ಗೋಡೆಗಳ ಹೊರಗೂ ಸಹ ನಡೆಯುತ್ತದೆ. ಮಕ್ಕಳು ಕೇವಲ ಕೆಲವಾರು ಗಂಟೆಗಳ ಕಾಲ ಶಾಲೆಯಲ್ಲಿ ಇರುತ್ತಾರೆ ಅವರನ್ನು ತಿದ್ದುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಇದಕ್ಕೆ ಪಾಲಕರ ಸಮುದಾಯದ ಸಹಾಯ-ಸಹಕಾರ ದೊರೆತಾಗ ಮಾತ್ರ.

“ದೂರದರ್ಶನದ ಪ್ರಭಾವದಿಂದಾಗಿ ಇಂದಿನ ಪೀಳಿಗೆ ಹಾಳಾಗುತ್ತಿದೆ” ಎಂಬ ಮಾತು ಈಗ ಸಾರ್ವತ್ರಿಕವಾಗಿದೆ. ಇಂದಿನ ಮಕ್ಕಳಲ್ಲಿ ಎದ್ದು ಕಾಣುವ ಮುಖ್ಯ ಅಂಶಗಳೆಂದರೆ ಅಶಾಂತಿ, ಅಶಿಸ್ತು, ಅಗೌರವ, ಕ್ರೌರ್ಯ, ಮಾದಕತೆ ತುಂಬಿದ ಜೀವನ ಇತ್ಯಾದಿ ಇವೆಲ್ಲವುಗಳಿಗೆ ಕಾರಣ ದೂರದರ್ಶನದ ದುರ್ಬಳಕೆ ನಮ್ಮ ಒಬ್ಬೊಬ್ಬ ಮಕ್ಕಳ ಸಹ ಮಹಾತ್ಮರಾಗಲು, ಶರಣರಂತಾಗಲು, ಯೋಗ್ಯನಾಗರೀಕರಾಗಲು ಮಾಡಬೇಕಾದಂತಹ ಮುಖ್ಯ ಕಾರ್ಯವೆಂದರೆ ದೂರದರ್ಶನದ ಮಿತಿಮೀರಿದ ಹಾಗೂ ದುರ್ಬಳಕೆ ತಪ್ಪಿಸುವುದು. ಇನ್ನು ಮುಂದೆಯಾದರೂ ಒಳ್ಳೆಯ ಸುಸಂಸ್ಕøತ ಸಮಾಜವನ್ನು, ಶಾಂತಿಯುತ ನಾಡನ್ನು ಕಟ್ಟಲು ಯೋಗ್ಯ ಪ್ರಜೆಗಳನ್ನು ನಿರ್ಮಿಸಲು ಪಣತೊಡೋಣವೇ?

‘ಶಿಕ್ಷಣ ಧ್ವನಿ’  1 ನೇ ಮೇ 2003
- ಆರ್.ಬಿ.ಗುರುಬಸವರಾಜ

No comments:

Post a Comment