April 28, 2014

ಆಲೂರರ ಕನ್ನಡತ್ವದ ವಿಚಾರಗಳು

ಆಲೂರರ ಕನ್ನಡತ್ವದ ವಿಚಾರಗಳು

ಇಡೀ ವಿಶ್ವಕ್ಕೆ ಏಳು ಜಗತ್ಪ್ರಸಿದ್ಧ ಸ್ಥಳಗಳಿರುವಂತೆ ಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನಪೀಠಗಳು ರಾರಾಜಿಸುತ್ತಿದ್ದವು. ಈಗ ಅದಕ್ಕೆ ಇನ್ನೊಂದು ಗರಿ ಸೇರಿಕೊಂಡು ಅಷ್ಟಮಣಿ ಮುಕುಟದಂತೆ ಕನ್ನಡ ಸಾಹಿತ್ಯವನ್ನು ಪ್ರಜ್ವಲಗೊಳಿಸಿವೆ. ಡಾ.ಚಂದ್ರಶೇಖರ ಕಂಬಾರರಿಗೆ ದೊರೆಕಿದ ಜ್ಞಾನಪೀಠ ಪ್ರಶಸ್ತಿ ಕನ್ನಡ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದೆ. ಉತ್ತರ ಕರ್ನಾಟಕ ನೆಲದ ಸೊಗಡನ್ನು ಎಲ್ಲೆಡೆ ಹರಡಲು ಪ್ರಯತ್ನಿಸಿದವರಲ್ಲಿ ಕಂಬಾರರೂ ಒಬ್ಬರು. ಒಂದು ಕಾಲದಲ್ಲಿ ಇದೇ ಪ್ರದೇಶಿಕ ನೆಲೆಯಲ್ಲಿ ಕನ್ನಡ ಹಾಗೂ ಕರ್ನಾಟಕತ್ವದ ಕಲ್ಪನೆ ಇಲ್ಲದಿದ್ದ ಸಮಯದಲ್ಲಿ ಕನ್ನಡ ನಾಡಿನ ಕಂಪನು, ಕರ್ನಾಟಕದ ಅಸ್ತಿತ್ವವನ್ನು ಜಗಕೆ ಸಾರಲು ಹರಸಾಹಸ ಮಾಡಿದವರೆಂದರೆ ‘ಕನ್ನಡ ಕುಲಪುರೋಹಿತ’ ಎಂದು ಖ್ಯಾತರಾಗಿದ್ದ ಆಲೂರು ವೆಂಕಟರಾಯರು.


ಕನ್ನಡತ್ವದ ಕಿಚ್ಚು ಹತ್ತುವ ಮುನ್ನ : ಆಲೂರರ ಕನ್ನಡತ್ವ ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಖಂಡ ಕರ್ನಾಟಕದೆಲ್ಲೆಡೆ ಕನ್ನಡತ್ವ, ಕರ್ನಾಟಕತ್ವದ ಪರಿಕಲ್ಪನೆಯನ್ನು ಬಿತ್ತಿ ಉತ್ತಮ ಬೆಳೆ ಬೆಳೆಯಲು ಸಕಲ ವಾತಾವರಣ ನಿರ್ಮಿಸಿದರು. ಕರ್ನಾಟಕದಲ್ಲಿ ಕನ್ನಡವೆಂದರೆ ಕೇವಲ ಮೈಸೂರು ಪ್ರಾಂತಕ್ಕೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಕನ್ನಡತ್ವ ಹಾಗೂ ಕರ್ನಾಟಕತ್ವ ವಿಚಾರಗಳನ್ನು ಹೈದ್ರಾಬಾದ್, ಕೊಡಗು, ಮದ್ರಾಸ್ ಮತ್ತು ಬೆಳಗಾವಿ ಪ್ರಾಂತಗಳಲ್ಲಿನ ಜನರಿಗೆ ತುಂಬಿ ಅವರೂ ಸಹ ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಒಂದು ಕಾಲದಲ್ಲಿ ಧಾರವಾಡ ಮರಾಠಿಗಳ ತವರಿನಂತೆಯೇ ಆಗಿತ್ತು. ಇದನ್ನು ಗಮನಿಸಿದ ಆಲೂರರ ಕೆಚ್ಚದೆಯ ಕಿಚ್ಚು ಹೊತ್ತಿ ಉರಿಯತೊಡಗಿತ್ತು. ಕಳೆದ ಶತಮಾನದ ಕೊನೆಗೆ ಧಾರವಾಡದಲ್ಲಿ 29 ಮರಾಠಿ ಶಾಲೆಗಳಿದ್ದರೆ ಕೇವಲ ಎರಡೇ ಎರಡು ಕನ್ನಡ ಶಾಲೆಗಳಿದ್ದವು. ಮರಾಠಿಗಳು ಧಾರವಾಡದಲ್ಲಿ ತಮ್ಮ ಸ್ವಂತ ತವರಿನಲ್ಲಿ ನೆಲೆಸುವಂತೆ ಗಟ್ಟಿಯಾಗಿ ನೆಲೆಗೊಂಡಿದ್ದರು. ಹಾಡಲು ಕನ್ನಡದಲ್ಲಿ ಒಂದು ಪದ್ಯವಿಲ್ಲ, ಆಡಲು ಒಂದು ನಾಟಕವಿಲ್ಲ. ಇಂತಹ ಸಂಧರ್ಭದಲ್ಲಿ ಜಾಗೃತಗೊಂಡ ಆಲೂರರು ಕನ್ನಡಿಗರಿಗೆ ತಮ್ಮ ಪರಿಸ್ಥಿತಿ ಅರಿವನ್ನು, ಕನ್ನಡ ನಾಡಿನ ಇತಿಹಾಸವನ್ನು ನೆನಪಿಸಿಕೊಟ್ಟರು.

ಮೂಲತಃ ಬಳ್ಳಾರಿಯವರಾದ ಆಲೂರರು ತಮ್ಮ ತಂದೆಯವರ ಸರಕಾರಿ ಕೆಲಸದಿಂದಾಗಿ ರಾಜ್ಯದ ವಿವಿದೆಡೆ ಸಂಚರಿಸಿ ಈ ನೆಲದ ಮಣ್ಣಿನ ಸೊಗಡನ್ನು, ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದರು. ಇದೇ ಮುಂದೆ ಅವರಲ್ಲಿ ಕರ್ನಾಟಕತ್ವದ ಮೊಳಕೆ ಜಾಗೃತಗೊಳ್ಳಲು ಅನುವುಮಾಡಿಕೊಟ್ಟಿತ್ತು.

ತತ್ವಗಳ ಹಿಂದಿನ ಜೀವನಾದರ್ಶ : ಮಧ್ವಾಚಾರ್ಯರು, ವಿದ್ಯಾರಣ್ಯರು, ಅರವಿಂದಘೋಷರು ಹಾಗೂ ತಿಲಖರ ಸಿದ್ದಾಂತಗಳು ಮತ್ತು ವಿಚಾರಗಳಿಂದ ಪ್ರಭಾವಿತರಾದ ಆಲೂರರು ಭಗವದ್ಗೀತೆ ಹಾಗೂ ಮಹಾಭಾರತಗಳ ತತ್ವಾದರ್ಶಗಳನ್ನು ಬಲವಾಗಿ ಅಪ್ಪಿಕೊಂಡಿದ್ದರು. ಯಾವುದೋ ಒಂದು ತತ್ವ ಸಿದ್ದಾಂತಕ್ಕೆ ಒಗ್ಗಿಕೊಳ್ಳಲಿಲ್ಲ. ಅಲ್ಲದೇ ಅವರೆಂದೂ ‘ಕಿಂಗ್’ ಆಗಲಿಲ್ಲ, ಕಿಂಗ್ ಮೇಕರ್ ಆಗಿಯೇ ಉಳಿದರು. ಪ್ರೇರಕ ಶಕ್ತಿಯನ್ನು ಕೊಟ್ಟು ತೆರೆಯ ಒಂದೇ ನಾಣ್ಯದ ಎರಡು ಮುಖಗಳೆನ್ನುವುದನ್ನು ಬಲವಾಗಿ ನಂಬಿದ್ದರು. “ಜೀವನದಿಂದ ಬೇರ್ಪಟ್ಟ ತತ್ವಗಳು ತತ್ವಗಳಲ್ಲ, ತತ್ವಗಳಿಂದ ಬೇರ್ಪಟ್ಟ ಜೀವನ ಜೀವನವಲ್ಲ” ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದರು.

ಮಗ ವಕೀಲನಾಗಬೇಕೆಂಬ ಆಸೆಯಿಂದ ತಂದೆ ಭೀಮರಾಯರು ವೆಂಟರಾಯರನ್ನು ಪುಣೆಗೆ ಓದಲು ಕಳಿಸಿದರು. ಅಲ್ಲಿ ಮಹಾರಾಷ್ಟ್ರ ಜನರ ಮರಾಠೀ ಅಭಿಮಾನ ಹಾಗೂ ಅವರಿಂದ ಕನ್ನಡಿಗರ ಮೇಲೆ ನೆಡೆಯುತ್ತಿದ್ದ ಭೀಭತ್ಸ ಕೃತ್ಯಗಳು ವೆಂಕಟರಾಯರ ಕನ್ನಡಾಭಿಮಾನವನ್ನು ಹಾಗೂ ಕರ್ನಾಟಕದ ಮೇಲಿನ ಮೋಹವನ್ನು ಮತ್ತಷ್ಟು ಇಮ್ಮಡಿಗೊಳಿಸಿದವು. ಗ್ರಂಥಾಲಯಗಳಿಗೆ ಹೋದರೆ ಕೇವಲ ಕರ್ನಾಟಕದ ಮೂಲ ಇತಿಹಾಸ ಇತಿಹಾಸ ಸಾರುವ ಗ್ರಂಥಗಳನ್ನೆ ಓದುತ್ತಿದ್ದರು.

ಧಾರವಾಡಕ್ಕೆ ಬಂದಾಗಲೆಲ್ಲಾ ಕರ್ನಾಟಕ ಇತಿಹಾಸ ಮತ್ತು ಸಂಸ್ಕøತಿಯ ಕುರುಹುಗಳಾಗಿದ್ದ ಪ್ರಾಚೀನ ಕನ್ನಡ ನೆಲೆಗಳನ್ನು ಸುತ್ತಡುವುದು, ಅವುಗಳ ಬಗ್ಗೆ ಅಧ್ಯಯನ ಮಾಡುವುದು ಅವರ ಹವ್ಯಾಸವಾಗಿತ್ತು. ಕಾನೂನು ಪದವಿ ಪಡೆದ ನಂತರ ಧಾರವಾಡದಲ್ಲೇ ವಕೀಲಿ ವೃತ್ತಿ ಪ್ರಾರಂಭಿಸಿದ ಆಲೂರರಿಗೆ ಅಲ್ಲಿ ವಿರಾಮ ವೇಳೆಯಲ್ಲಿ ಕನ್ನಡ ನಾಡಿನ ಬಗ್ಗೆ ಚರ್ಚೆ ವಿಚಾರ ಮಂಥನ ಮಾಡಲು ಹೆಚ್ಚು ಹೆಚ್ಚು ಅವಕಾಶಗಳು ದೊರೆತವು. ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ನವಚೈತನ್ಯ ನೀಡಲು ಶ್ರಮಿಸಿದರು. ಅನೇಕ ಕಡೆಗಳಲ್ಲಿ ಉಪಾಧ್ಯಾಯರುಗಳ ಸ್ನೇಹ ಸಂಪರ್ಕ ಬೆಳೆಸಿಕೊಂಡು ಕನ್ನಡ ಕಾವ್ಯ, ವ್ಯಾಕರಣ, ಛಂದಸ್ಸುಗಳ ಬಗ್ಗೆ ವಿಚಾರ ಸಂಕಿರಣ ಮತ್ತು ಗೋಷ್ಠಿಗಳನ್ನು ನೆಡೆಸಿ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು.

ಕರ್ನಾಟಕ ಗತವೈಭವಕ್ಕೆ ನಾಂದಿ : 1905 ರಲ್ಲಿ ಆದ ಆನೆಗೊಂದಿ ದರ್ಶನ ಅವರ ಮನದಲ್ಲಿ ಅನೇಕ ವಿಚಾರ ತರಂಗಗಳನ್ನು ಎಬ್ಬಿಸಿತ್ತು. ಜಿಜ್ಞಾಸೆಯ ಕಿರಣಗಳನ್ನು ಬೀರುತ್ತಿತ್ತು. ವಿಚಾರಗಳು ಜಲಪಾತಗಳಂತೆ ಭೋರ್ಗರೆದವು. ಇದೇ ಸಮಯದಲ್ಲಿ ಭಾರತದಾದ್ಯಂತ ಪ್ರಾಂರಭವಾಗಿದ್ದ ‘ವಂಗಭಂಗ’ ಚಳುವಳಿ ಆಲೂರರಲ್ಲಿ ಕರ್ನಾಟಕಭಂಗ ಚಳುವಳಿ ವಿಚಾರಗಳು ನಿಶ್ಚಲವಾಗಲು ಪ್ರೇರೇಪಿಸಿತು. ಆ ಸಂಧರ್ಭದಲ್ಲಿಯೇ ಕರ್ನಾಟಕತ್ವದ ಕಲ್ಪನೆ ಒಡಮೂಡಿತ್ತು. ಹೃದಯದಲ್ಲಿ ಒಡಮೂಡಿದ್ದ ಕರ್ನಾಟಕತ್ವದ ಕಲ್ಪನೆಯನ್ನು ಸಾಕಾರಗೊಳಿಸಲು ತಮ್ಮನ್ನು ತಾವು ಮಾನಸಿಕವಾಗಿ, ದೈಹಿಕವಾಗಿ ಅಣಿಗೊಳಿಸಿಕೊಂಡರು. ಕರ್ನಾಟಕದ ಬಗ್ಗೆ ಕನ್ನಡಿಗರಲ್ಲಿ ಆಳವಾದ ಅಭಿಮಾನದ ಅಭಾವವನ್ನು ಹೋಗಲಾಡಿಸಲು ಕರ್ನಾಟಕದ ನಿಜವೈಭವವÀÀನ್ನು ಕನ್ನಡಿಗರ ಮುಂದಿಡುವುದೇ ಮದ್ದು ಎಂಬ ಸಿದ್ದಾಂತಕ್ಕೆ ಬದ್ದರಾದರು.

ಅದಕ್ಕಾಗಿ ಸು 12 ವರ್ಷಗಳ ಕಾಲ ಕರ್ನಾಟಕದ ಐತಿಹಾಸ ಸ್ಥಳಗಳಾದ ಅಣ್ಣಿಗೇರಿ, ಲಕ್ಕುಂಡಿ, ಲಷ್ಕ್ಮೇಶ್ವರ, ಹಳೇಬೀಡು, ಬೇಲೂರು, ಕಾರ್ಲೆ, ಕಾನ್ಹೇರಿ, ಬಂಕಾಪುರ, ಬದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದವುಗಳನ್ನು ಎತ್ತಿನ ಬಂಡಿಯಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ, ಅಧ್ಯಯನ ನಡೆಸಿದುದರ ಫಲವಾಗಿ 1917 ರಲ್ಲಿ “ಕರ್ನಾಟಕ ಗತವೈಭವ” ಎಂಬ ಉದ್ಗ್ರಂಥ ರೂಪುಗೊಂಡಿತು. ಇದು ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಮೂಡಿಸಿತಲ್ಲದೇ ಕರ್ನಾಟಕತ್ವದ ಕಿಚ್ಚನ್ನು ಹೊತ್ತಿಸಿ ತಾಯ್ನೆಲ ಮತ್ತು ತಾಯ್ನಾಡಿನ ರಕ್ಷಣೆಗಾಗಿ ಕನ್ನಡಿಗರನ್ನು ಬಡಿದೆಬ್ಬಿಸಿತು 

ಕನಸಿನ ರಾಷ್ಟ್ರೀಯ ಶಾಲೆ : ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಇವುಗಳ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟು ಅವರ ಕನಸಿನ ಕೂಸಾದ ಕರ್ನಾಟಕ ನೂತನ ವಿದ್ಯಾಲಯವೆಂಬ ರಾಷ್ಟ್ರೀಯ ಶಾಲೆಯನ್ನು ಪ್ರಾರಂಬಿಸಿದರು. ಹುಬ್ಬಳ್ಳಿ, ನರಗುಂದ, ನವಲಗುಂದ, ಹಾನಗಲ್ಲು, ಅಗಡಿ, ಬಾಗಲಕೋಟೆ, ಬದಾಮಿ, ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಶಾಲೆಗಳನ್ನು ತೆರೆದರು. ಅಲ್ಲಿ ಕಲಿಯುವವರು ಸ್ವಾವಲಂಬಿಗಳಾಗಬೇಕೆಂದು ಬೆಂಕಿಕಡ್ಡಿ, ಸೀಸದಕಡ್ಡಿ, ಮಂಗಳೂರುಹೆಂಚು, ಸಕ್ಕರೆ ತಯಾರಿಕೆ, ಬಡಿಗತನ, ಮುದ್ರಣ ಮುಂತಾದ ಗುಡಿಕೈಗಾರಿಕೆಗಳನ್ನು ಕಲಿಸುತ್ತಿದ್ದರು. ನಂತರದ ದಿನಗಳಲ್ಲಿ ಕೈಗಾರಿಕೀಕರಣದ ಪೈಪೋಟಿ ಎದುರಿಸಲಾರದೇ ರಾಷ್ಟ್ರೀಯ ಶಾಲೆಗಳನ್ನು ಮುಚ್ಚುವ ಸ್ಥಿತಿ ತಲುಪಿತು. ಆದರೂ ಎದೆಗುಂದದೇ ಪುನಃ ವಕೀಲಿ ವೃತ್ತಿಗೆ ಇಳಿಯಬೇಕಾಯಿತು.

ಸಂಶೋಧನೆಗಳ ರೂವಾರಿ : ಇತಿಹಾಸದಲ್ಲಿ ಆಸಕ್ತಿಯಿದ್ದ ಆಲೂರರು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿದರು. ನಾಡಿನಾದ್ಯಂತ ಸಂಚರಿಸಿ, ಸಂಶೋಧನೆಗಳನ್ನು ಯಶಸ್ವಿಯಾಗಿ ನಡೆಸಿ ಸಂಶೋಧನಾ ಕ್ಷೇತ್ರಕ್ಕೆ ಹೊಸ ಸ್ಥಾನ ಮತ್ತು ಗೌರವ ದೊರೆಯುವಂತೆ ಮಾಡಿದರು. 1919 ರಲ್ಲಿ ಪುಣೆಯಲ್ಲಿ ಜರುಗಿದ ಅಂತರಾಷ್ಟ್ರೀಯ ಇತಿಹಾಸ ಸಮ್ಮೇಳನದಲ್ಲಿ ಕರ್ನಾಟಕ ಇತಿಹಾಸ ಮಂಡಳಿಯ ಪ್ರತಿನಿಧಿಯಾಗಿ ಭಾಗವಹಿಸಿ ಕರ್ನಾಟಕದ ಕಂಪನ್ನು ಎಲ್ಲೆಡೆ ಪಸರಿಸಿದರು.

1915 ರಿಂದ ಕರ್ನಾಟಕ ಏಕೀಕರಣ ಚಳುವಳಿ ಅತ್ಯಂತ ಬಿರುಸಿನಿಂದ ಸಾಗಿತು. ಆಲೂರರು ನಾರಾಯಣ ರಾಜ ಪುರೋಹಿತ, ನರಗುಂದದ ಭೀಮರಾಯರು, ನಾರಾಯಣ ದೇಶಪಾಂಡೆ ಮುಂತಾದವರು ಕೂಡಿಕೊಂಡು ಧಾರವಾಡ, ಬೆಳಗಾವಿಗಳಲ್ಲಿ ಹೋರಟ ನಡೆಸಿದರು. ಸಾರ್ವಜನಿಕ ಸಭೆಗಳನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿದ ಇವರುಗಳು ಕನ್ನಡಿಗರು ಕನ್ನಡದಲ್ಲಿಯೇ ಮಾತನಾಡಲು ಪ್ರೇರೇಪಿಸಿದರು. ರಾಜ್ಯದ ನಾನಾ ಭಾಗಗಳಲ್ಲಿ ಬೇರೆಬೇರೆ ನಾಯಕರ ನೇತೃತ್ವದಲ್ಲಿ ಚಳುವಳಿ ನಡೆಸುತ್ತಿದ್ದವರನ್ನೆಲ್ಲಾ ಒಂದೆಡೆ ಸೇರಿಸುವ ಉದ್ದೇಶದಿಂದ 1936 ರಲ್ಲಿ ಹಂಪಿಯಲ್ಲಿ ‘ವಿಜಯನಗರ ಶತಮಾನೋತ್ಸವ’ ವನ್ನು ಏರ್ಪಡಿಸಿದರು. ಈ ಉತ್ಸವದಲ್ಲಿ ಆಲೂರರು ಬೆನ್ನಲುವಾಗಿ ದುಡಿದರು.

ಸಾಹಿತ್ಯ ಸೇವೆ : ಕರ್ನಾಟಕ ವಿದ್ಯಾವರ್ದಕ ಸಂಘದ ಮುಖವಾಣಿಯಾಗಿದ್ದ ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ತಿಳಿಸಿ ಅದಕ್ಕಾಗಿ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವಂತಹ ಲೇಖನಗಳನ್ನು ಬರೆದು ಪ್ರಕಟಿಸಿದರು. ಧಾರವಾಡದಲ್ಲಿ ‘ಕರ್ನಾಟಕ ಗ್ರಂಥ ಪ್ರಸಾರಕ ಮಂಡಳಿ’ಯನ್ನು ಸ್ಥಾಪಿಸುವ ಮೂಲಕ ಕನ್ನಡ ಗ್ರಂಥಗಳ ಪ್ರಕಟಣೆ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡರು.

ಕನ್ನಡ ನಾಡು ನುಡಿಯ ಸೇವೆಗಾಗಿ ಒಂದು ಪ್ರತ್ಯೇಕವಾದ ಸಂಸ್ಥೆಯ ಅವಶ್ಯಕತೆಯನ್ನು ಮನಗಂಡ ಆಲೂರರು 1914 ರಲ್ಲಿ ಬೆಂಗಳೂರನಲ್ಲಿ ‘ಕನ್ನಡ ಗ್ರಂಥಕರ್ತರ ಸಮ್ಮೇಳನ’ ನಡೆಸುವ ಮೂಲಕ ತಮ್ಮ ಮನದಾಳದ ಅನಿಸಿಕೆಯನ್ನು ಹರಿಯಬಿಟ್ಟರು. ನಂಜುಡಯ್ಯನವರ ಸಹಾನುಭೂತಿ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ಬಲದಿಂದ 1915 ರಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್’ನ್ನು ಸ್ಥಾಪಿಸಲು ಕಾರಣೀಭೂತರಾದರು.

ಇನ್ನು ಆಲೂರರ ಸಾಹಿತ್ಯ ಕೃಷಿಯ ಬಗ್ಗೆ ಹೇಡಿಯನ್ನು ಮೀರನನ್ನಾಗಿ, ನಿಸ್ತೇಜ ಅಂತರ್ಮುಖಿಯನ್ನು ಬಹಿರ್ಮುಖಿಯನ್ನಾಗಿ, ನಾಸ್ತಿಕನ್ನು ಆಸ್ತಿಕನನ್ನಾಗಿ ಮಾಡುವ ಶಕ್ತಿ ಅಡಗಿತ್ತು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿ. ಒಮ್ಮೆ ಬರೆದ ಲೇಖನವನ್ನು ಅವರೆಂದಿಗೂ ತಿದ್ದಿ  ಬರೆದವರಲ್ಲ. ಅಂದರೆ ಲೇಖನಿಗೆ ಕೆಲಸ ಕೊಡುವ ಮೊದಲೇ ತಲೆಯಲ್ಲಿನ ವಿಚಾರಗಳನ್ನು ಮಂಥನ ಮಾಡಿ ಅಕ್ಷರಗಳ ರೂಪ ಕೊಡುತ್ತಿದ್ದರು. ಯಥೇಚ್ಛವಾಗಿ ಸಾಹಿತ್ಯ ರಚನೆ ಮಾಡುವ ಉದ್ದೇಶವಿರದ ಆಲೂರರು ಮಾದರಿಗಾಗಿ ಬರೆಯುವ ಉದ್ದೆಶ ಹೊಂದಿರುವುದು ಅವರ ಕೃತಿಗಳಿಂದ ತಿಳಿದು ಬರುತ್ತದೆ. ಒಂದೊಂದು ವಿಶೇಷ ಉದ್ದೇಶದಿಂದ ಒದೊಂದು ಕೃತಿ ಹೊರಬಂದಿವೆ.

ಕೃತಿಗಳು : ಶಿಕ್ಷಣ ಮೀಮಾಂಸೆ(1908); ಕರ್ನಾಟಕ ಗತವೈಭವ(1917); ಗೀತಾ ಅಹಸ್ಯ(1918); ಕರ್ನಾಟಕದ ವೀರ ರತ್ನಗಳು(1930); ರಾಷ್ಟ್ರೀಯತ್ವದ ಮೀಮಾಂಸೆ ; ನನ್ನ ಜೀವನ ಸ್ಮøತಿಗಳು (ಆತ್ಮ ಕಥನ)(1940); ಹೀಗೆ ಅನೇಕ ಕೃತಿಗಳನ್ನು ರಚಿಸಿದ ಆಲೂರರು ಹ¯ವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅಲ್ಲದೇ ಅನೇಕ ಕನ್ನಡ ಪತ್ರಿಕೆಗಳಿಗೆ ಸಂಪಾದಕರಾಗಿ, ಲೇಖಕರಾಗಿ ಸೇವೆ ಸಲ್ಲಿಸಿದ್ದಾರೆ.

ಬರೀ ಗ್ರಂಥ ರಚನೆ ಮತ್ತು ಸಂಪಾದನೆಯನ್ನಷ್ಟೇ ಮಾಡದ ಆಲೂರರು ಜನರಲ್ಲಿ ವಾಚನಾಬಿರುಚಿಯನ್ನೂ ಸಹ ಹುಟ್ಟಿಸಿದರು. ಧಾರವಾಡದ ಜನರಿಗೆ ಮಹತ್ವದ ಗ್ರಂಥಗಳು ಯಾವತ್ತೂ ದೊರೆಯಬೇಕೆಂಬ ಉದ್ದೇಶದಿಂದ ತಮ್ಮ ಸ್ವಂತ ಹಣ ಹೂಡಿ ‘ಭಾರತ ಪುಸ್ತಕಾಲಯ’ ಎಂಬ ಹೆಸರಿನ ಗ್ರಂಥಾಲಯ ಪ್ರಾರಂಭಿಸಿದರು. ಅನೇಕ ಮಿತ್ರರ ಹಾಗೂ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಸು.2000 ದಿಂದ 3000 ಗ್ರಂಥಗಳನ್ನು ಸೇರಿಸಿದರು. ದೊಡ್ಡ ಓದುಗರ ಬಳಗವನೇ ಸೃಷ್ಟಿಸಿದರು.

ಹೀಗೆ ಕನ್ನಡ ನಾಡು - ನುಡಿಗೆ ಆಲೂರರು ನೀಡಿದ ಕೊಡುಗೆ ಅನನ್ಯ. ಇಂದು ಕರ್ನಾಟಕಕ್ಕೆ ಪ್ರತ್ಯೇಕವಾದ ಅಸ್ತಿತ್ವ ಇದೆ ಎಂದಾದರೆ ಅದು ಆಲೂರರ ಇಚ್ಚಾಶಕ್ತಿ ಮತ್ತು ಹೋರಾಟವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಮಹಾನ್ ಜೀವಿಗಳು ಹೆಚ್ಚಿದ ಕರ್ನಾಟಕತ್ವದ ಕಿಚ್ಚು ಇಂದು ಕಡಿಮೆಯಾಗತೊಡಗಿದೆ. ನಾಡು-ನುಡಿಗಾಗಿ ನಿಸ್ವಾರ್ಥದಿಂದ ದುಡಿಯುವ ಕೈಗಳು ಇಂದು ಇಲ್ಲವಾಗಿವೆ. ಎಲ್ಲವೂ ರಾಜಕೀಯ ಪ್ರೇರಿತವಾಗಿದೆ. ಇಚ್ಚಾಶಕ್ತಿಯ ಕೊರೆತೆ ಎದ್ದು ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಇ.ಎಸ್.ನ ಪುಂಡಾಟಿಕೆಗಳು ಹೆಚ್ಚಾಗಿವೆ. ಅದನ್ನು ತಡೆಯಲು ಮತ್ತೊಬ್ಬ ಆಲೂರರು ಹುಟ್ಟಬೇಕಿದೆ.

‘ಟೀಚರ್’ ನವೆಂಬರ್ 2011
- ಆರ್.ಬಿ.ಗುರುಬಸವರಾಜ

No comments:

Post a Comment