April 28, 2014

ಸಮಾಜದಲ್ಲಿ ಶಿಕ್ಷಕನ ಸ್ಥಾನಮಾನ ಅಂದು-ಇಂದು

ಸಮಾಜದಲ್ಲಿ ಶಿಕ್ಷಕನ ಸ್ಥಾನಮಾನ ಅಂದು-ಇಂದು

ನಮ್ಮ ಸಮಾಜ ಪ್ರಾಚೀನ ಕಾಲದಿಂದಲೂ ಶಿಕ್ಷಕನಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂದು ತಂದೆ-ತಾಯಿಯರ ಜೊತೆ ಸ್ಥಾನಮಾನ ಕಲ್ಪಿಸಿದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಮಕ್ಕಳನ್ನು ಗುರುಕುಲಗಳಲ್ಲಿ ಬಿಟ್ಟು, ಗುರು ಮುಖೇನ ವಿದ್ಯಾಭ್ಯಾಸಕ್ಕೆ ಅನುವುಮಾಡಿಕೊಟ್ಟು, ಪ್ರಜೆಗಳಿಗೆ ವಿದ್ಯೆಯ ಮಹತ್ವಕ್ಕಾಗಿ ಮಾರ್ಗದರ್ಶಕರಾಗಿ ಇದ್ದರು. ವಿದ್ಯಾ ಪ್ರಚಾರಕ್ಕಾಗಿ ತಮ್ಮ ಪ್ರದೇಶಗಳಲ್ಲಿ ಅನೇಕ ದತ್ತಿ ದಾನಗಳನ್ನು ನೀಡಿ, ಅಗ್ರಹಾರಗಳನ್ನು ರಚಿಸಿಕೊಟ್ಟು ಪ್ರೋತ್ಸಾಹ ಅಷ್ಟಕಷ್ಟೇ. ಅವರು ಆ ಮೂಖಂತರ ತಮ್ಮ ಧರ್ಮ ಪ್ರಚಾರ ಮತ್ತು ಆಡಳಿತಕ್ಕೆ ಅನುಗುಣವಾದ ವಿದ್ಯೆಯನ್ನು ಮಾತ್ರ ನೀಡುತ್ತಾ ಬಂದಿದ್ದರು. ಆದ್ದರಿಂದ ನಮ್ಮ ಅಂದಿನ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ದೊರೆಯಲಿಲ್ಲ.

ಅಂದಿನ ಶಿಕ್ಷಕ ತನ್ನ ವೈಯಕ್ತಿಕ ಜೀವನದಲ್ಲಿ ಶಿಸ್ತು, ತಾಳ್ಮೆ ವ್ಯವಹಾರ ಜ್ಞಾನದಿಂದ ಸಮಾಜದಲ್ಲಿ ಸಮಾತೋಲನ ಕಾಪಾಡಿಕೊಂಡು ಶಿಕ್ಷಕ ಶಿಕ್ಷಕನೇ ಆಗಿದ್ದ. ಅಂದಿನ ಶಿಕ್ಷಕ ತಾನು ವಾಸಿಸುವ ಪರಿಸರಕ್ಕೆ ಅಗತ್ಯವಾದ ವೈದ್ಯಶಾಸ್ತ್ರ, ಗೃಹಶಾಸ್ತ್ರ, ಪೌರೋಹಿತ್ಯ, ಕರಣಿಕ ಇತ್ಯಾದಿಗಳನ್ನು ತಿಳಿದುಕೊಂಡು ಸರ್ವಜ್ಞನಂತಾಗಿ ಸಮಾಜದಲ್ಲಿ ತಲೆದೋರುವ ಜಗಳ, ಅನ್ಯಾಯ, ಅಧರ್ಮ, ಅನೈತಿಕತೆಗಳನ್ನು ತೊಡೆಯಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದ. ಇದರಿಂದ ಅವನು ಸಮಾಜದ ಎಲ್ಲಾ ವರ್ಗದ ಜನರ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದು, ಆತನಿಗೆ ಸಲ್ಲುತ್ತಿದ್ದ ಅಲ್ಪಾದಾಯದಿಂದ ಸಂತೃಪ್ತ ಜೀವನ ನಡೆಸುತ್ತಿದ್ದ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ತನ್ನ ಹಿತಮಿತವನ್ನು ಪಡೆದಿದ್ದ ಅಂದು ಸಮಾಜದ ಹಿರಿ-ಕಿರಿಯರೆಲ್ಲರಿಗೂ ಶಿಕ್ಷಕನ ಒಡನಾಟ ಮಾಡುವುದು ಒಂದು ಹಿರಿತನವೇ ಆಗಿತ್ತು. ಆದರೆ ಇಂದು ಮೇಲಿನ ಎಲ್ಲಾ ಸಂಗತಿಗಳು ತಿರುವು-ಮರುವು ಆಗಿವೆ.

ಇಂದು ಸರ್ಕಾರವು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ, ಅಪಾರ ಹಣ ಖರ್ಚು ಮಾಡುತ್ತಿದೆ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಲವು ಪಂಡಿತರು ಹಾಗೂ ರಾಜಿಕೀಯ ಮುತ್ಸದ್ದಿಗಳು ಗೊಂದಲಮಯ ವಾತಾವರಣ ಸೃಷ್ಟಿಸಿ ವಿದ್ಯಾಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಇವರ ಪ್ರತಿಷ್ಠೆ-ಪಾಂಡಿತ್ಯಗಳ ಹಾದಿಯಲ್ಲಿ ಸಿಕ್ಕು ಬಲಿಯಾಗುತ್ತಿರುವವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು. ಪಠ್ಯ ಜ್ಞಾನದ ಅಪೂರ್ಣತೆಯಿಂದಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಆಂತರಿಕ ಭಿನ್ನ ಭೇದಗಳುಂಟಾಗಿ ಶಿಕ್ಷಕ ಸಮಾಜದ ದೂಷಣೆಗೆ ಪಾತ್ರನಾಗುತ್ತಿದ್ದಾನೆ. ಶಿಕ್ಷಕರ ಸೇವೆ ಸರ್ಕಾರದ ಎಲ್ಲಾ ಯೋಜನೆಗಳ ಅಂಕಿ-ಅಂಶಗಳನ್ನು ಕ್ರೂಢ್ರೀಕರಿಸಲು ಬೇಕೇ ಬೇಕು. ಅಂದರೆ ಚುನಾವಣೆ, ಮತ ಪಟ್ಟಿ ತಯಾರಿಕೆ ಹಾಗೂ ಪರಿಷ್ಕರಣೆ, ಜನಗಣತಿ, ಮನೆಗಣತಿ, ಪಶುಗಣತಿ ಇತ್ಯಾದಿ ರಾಷ್ಟ್ರೀಯ ಕಾರ್ಯಗಳಲ್ಲಿ ಶಿಕ್ಷಕನ ಸೇವೆ ಪ್ರಧಾನ. ಈ ಎಲ್ಲಾ ಮೇಲ್ಕಂಡ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಪಾಠ ಬೋಧನೆಗೆ ಸಿಗುವ ಅಲ್ಪ sಸಮಯ ಯಾತಕ್ಕೂ ಸಾಲುವುದಿಲ್ಲ. ಅಲ್ಲದೇ ಸಮಾಜ ಅಭಿವೃದ್ಧಿಯಾದಂತೆ ಶಿಕ್ಷಕನೆಗೆ ಆಸೆ-ಆಕಾಂಕ್ಷೆಗಳು ಹೆಚ್ಚಾಗಿ ತನಗೆ ದೊರೆಯುವ ಅಲ್ಪ ವೇತನ ಸಂಸಾರದ ನಿರ್ವಹಣೆಗೆ ಸಾಲದಂತಾಗಿ ಬಿಡುವಿನ ವೇಳೆಯಲ್ಲಿ ದುಡಿಮೆ ಅನಿವಾರ್ಯವಾಗುತ್ತಿದೆ.

ಒಂದೆಡೆ ಶಾಲಾ ಆಡಳಿತ ವರ್ಗ, ಅಧಿಕಾರಿಗಳ ಕಾನೂನಿನ ಹಿಡಿತ, ಇನ್ನೊಂದೆಡೆ ರಾಜಕೀಯ ಒತ್ತಡ, ಮತ್ತೊಂದೆಡೆ ಶಿಕ್ಷಕರ ಗೌರವ ರಕ್ಷಣೆ. ಇವೆಲ್ಲವುಗಳ ಹಿಡಿತದಿಂದ ಪಾರಾಗಿ ದಕ್ಷ ಆಡಳಿತ ನೀಡಿ, ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುವುದು ಇನ್ನೂ ಕಷ್ಟಕರವಾಗಿದೆ. ಸರ್ಕಾರದ ಅನೇಕ ಯೋಜನೆಗಳ ಜಾರಿಯಲ್ಲಿ ಅಂದರೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ ವಿತರಣೆ, ಬಾ ಮರಳಿ ಶಾಲೆಗೆ, ಚಿಣ್ಣರ ಅಂಗಳ ಮುಂತಾದವುಗಳಲ್ಲಿ ಅನೇಕ ಅಡೆತಡೆಗಳುಂಟಾಗಿ ಇವೆಲ್ಲಕ್ಕೂ ಶಿಕ್ಷಕನೇ ನೇರ ಹೊಣೆಗಾರನಾಗುತ್ತಿದ್ದಾನೆ. ಹೀಗೆ ಎಲ್ಲಾ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಶಿಕ್ಷಕನ ಮೇಲೆ ತೂಗುವ ಕತ್ತಿಯಾಂತಾಗಿರುವುದರಿಂದ ಶಿಕ್ಷಕ ಗಲಿಬಿಲಿಗೊಂಡು ಸಮರ್ಪಕ ಸೇವೆ ಒದಗಿಸುವಲ್ಲಿ ಒದ್ದಾಡುತ್ತಿದ್ದಾನೆ. ಅಲ್ಲದೇ ಇಂದಿನ ಕೆಲವು ಶಿಕ್ಷಕರು ಆಲಸ್ಯದಿಂದ, ಮೈಗಳ್ಳತನದಿಂದ, ದುರಾಭ್ಯಾಸಗಳ ದಾಸರಾಗುತ್ತಿರುವುದರಿಂದ, ಹಾಗೂ ಶಿಕ್ಷಣಕ್ಕೆ ಸಂಬಂಧವಿಲ್ಲದ ಕಾರ್ಯಗಳಲ್ಲಿ ತೊಡಗುತ್ತಿರುವುದರಿಂದ ಸಮಾಜದ ನಿಂದನೆಗೆ ಪಾತ್ರರಾಗುತ್ತಿದ್ದಾರೆ. ಆದಾಗ್ಯೂ ಇಷ್ಟೆಲ್ಲವನ್ನು ತನ್ನ ಜಾಣ್ಮೆಯಿಂದ ಹೊಂದಣಿಕೆ ಮಾಡಿಕೊಂಡು ಶಿಕ್ಷಣಾಭಿವೃದ್ಧಿಗಾಗಿ ಶ್ರಮಿಸುವ ಶಿಕ್ಷಕ ಸಮಾಜದಿಂದ ದೂರವಾಗಿ ಉಳಿಯುತ್ತಿದ್ದಾನೆ. ಶಿಕ್ಷಕ ಎಲ್ಲದಕ್ಕೂ ಬೇಕು. ಆದರೆ ಯಾವುದಕ್ಕೂ ಬೇಡ?! ಇವರ ಸ್ನೇಹ, ವಿಶ್ವಾಸ, ಭಾಂದವ್ಯ ಸಮಾಜದ ಹಿರಿಯರಿಗೆ ಬೇಡವಾಗುತ್ತಿದೆ. ಹೀಗಾದಾಗ ಇದನ್ನು ಸರಿಪಡಿಸುವವರ್ಯಾರು? ಈ ಸ್ಥಾನಕ್ಕೆ ಹಿಂದಿನ ಘನತೆ, ಗೌರವ, ಮಾನ್ಯತೆ ದೊರೆಕಿಸುವವರ್ಯಾರು? ಇತಿಹಾಸ ಪುನಃ ಮರುಕಳಿಸೀತೇ? ಎಂಬುದು ಎಲ್ಲ ಶಿಕ್ಷಕರಾದ ನಾವು ಸಹ ಘನತೆ-ಗೌರವಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಸದಾ ಪರಿಶ್ರಮ ಪಡುತ್ತಿರಬೇಕು. ಈ ದಿಸೆಯಲ್ಲಿ ಶಿಕ್ಷಕನಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ, ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಉತ್ತೇಜನಗಳು ಅನಿವಾರ್ಯ. "ಮೇಷ್ಟ್ರು ಅಂದರೆ ತಂದೆ-ತಾಯಿಗಳು ರೋಸಿಕೊಂಡು ಕಳಿಸುವ ಮಕ್ಕಳ ಹೊರೆ ಹೋರುವ ಅಗಸನ ಕತ್ತೆ. ಎಲ್ಲರಿಗೂ ಅಗತ್ಯವಾಗಿ, ಯಾರಿಗೂ ಬೇಡವಾದ ತ್ರಿಶಂಕು. ಅತೀ ಕಡಿಮೆ ಕೂಲಿಗೆ ಅತೀ ಹೆಚ್ಚು ದುಡಿಯುವ ಮೂಕ ಪ್ರಾಣಿ" ಎಂಬ ತ.ರಾ.ಸು ಅವರ ಅಭಿಪ್ರಾಯ. ಸದ್ಯದ ಶಿಕ್ಷಕರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

‘ಶಿಕ್ಷಣ ಧ್ವನಿ’ 15-5-2003
- ಆರ್.ಬಿ.ಗುರುಬಸವರಾಜ

No comments:

Post a Comment