April 19, 2014

ಪ್ರಾಥಮಿಕ ಶಿಕ್ಷಣದಿಂದ ಮರೆಯಾದ ಗಾಂಧೀಜಿ

ಪ್ರಾಥಮಿಕ ಶಿಕ್ಷಣದಿಂದ ಮರೆಯಾದ ಗಾಂಧೀಜಿ

  ಆತ್ಮೀಯ ದೇಶ ಬಂಧುಗಳೇ, ಮಹಾತ್ಮ ಗಾಂಧಿಜಿಯವರ ತತ್ವದರ್ಶಗಳು ಇಡೀ ದೇಶಕ್ಕೆ ಅಲ್ಲ, ಇಡೀ ಪ್ರಪಂಚಕ್ಕೇ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ. “ನಡೆದಂತೆ ನುಡಿ, ನುಡಿದಂತೆ ನಡೆ” ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮಹಾನ್ ಮಾನವತಾವಾದಿ ಮಹಾತ್ಮ ಗಾಂಧಿಯವರು.
ಅವರು ಹುಟ್ಟುತ್ತಲೇ ಮಹಾತ್ಮರಾಗಿ ಹುಟ್ಟಲಿಲ್ಲವಾದರೂ ಅವರ ನಡೆ-ನುಡಿ, ಆಚಾರ-ವಿಚಾರ, ತತ್ವ ಸಿದ್ದಾಂತಗಳ ಪಾಲನೆ ಅವರನ್ನು ಮಹಾತ್ಮರೆನಿಸಿದವು. ಇಂತಹ ಸ್ಪುರುಷನನ್ನು ಇತ್ತೀಚಿನ ವರ್ಷಗಳಲ್ಲಿ ನಮ್ಮ ಕರ್ನಾಟಕ ಪಠ್ಯ ಪುಸ್ತಕ ರಚನಾ ಸಮಿತಿ ಮರೆತುಬಿಟ್ಟಿದೆ. 
ಇತ್ತಿಚೆಗೆ ನಾನು 5 ನೇ ತರಗತಿ ಮಕ್ಕಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮಾಹಾತ್ಮ ಗಾಂಧಿಯವರ ಹೆಸರು ಪ್ರಸ್ತಾಪಿಸಿ ಅವರು ಯಾರೆಂದು ಮಕ್ಕಳಿಗೆ ಕೇಳಿದರೆ ‘ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟವರು’ ಎಂದಷ್ಟೇ ಹೇಳಿದರು. ಹೌದು ಅವರು ನಮ್ಮ ದೇಶಕ್ಕೆ ಸ್ವಾತಂತ್ರವನ್ನು ಪುನರ್ ಸ್ಥಾಪಿಸುವಲ್ಲಿ ಶ್ರಮಿಸಿದವರೇನೋ ನಿಜ. ಆದರೆ ಮಕ್ಕಳಿಗೆ ಗಾಂಧೀಜಿಯವರ ವೈಯಕ್ತಿಕ ಜೀವನದ ಬಗ್ಗೆ ಅಂದರೆ ಅವರ ಜನನ, ತಂದೆ-ತಾಯಿ ಹೆಸರು, ಬಾಲ್ಯ, ವಿದ್ಯಾಭ್ಯಾಸ, ಆದರ್ಶಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನೀವು ಹಿಂದಿನ ತರಗತಿಗಳಲ್ಲಿ ಓದಿದ ಗಾಂಧೀಜಿಯವರ ವಿಚಾರಗಳನ್ನೊಮ್ಮೆ ನೆನಪಿಸಿಕೊಳ್ಳಿ ಎಂದು ಹೇಳಿದೆ. ಹಿಂದಿನ ಯಾವುದೇ ತರಗತಿಗಳಲ್ಲಿ ಗಾಂಧೀಜಿಯವರ ಬಗ್ಗೆ ಅಭ್ಯಾಸ ಮಾಡಿಯೇ ಇಲ್ಲ ಎಂಬ ಮಕ್ಕಳ ಉತ್ತರ ನನ್ನನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿತು. ಆಗಿನ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಗೊತ್ತಿದ್ದ ಕೆಲವೊಂದಿಷ್ಟು ಕಿರು ಮಾಹಿತಿಗಳನ್ನು ಹೇಳಿ ತರಗತಿಯಿಂದ ಹೊರಬಂದೆ. ತಕ್ಷಣವೇ 1 ರಿಂದ 4 ನೇ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು ಕಲೆಹಾಕಿ ಅವಲೋಕಿಸಿದೆ. ಅಲ್ಲೆಲ್ಲೂ ಗಾಂಧೀಜಿವರ ಬಗ್ಗೆ ಮಾಹಿತಿಯಾಗಲೀ, ಅವರ ಜೀವನದ  ಕಥೆಯ ತುಣುಕಾಗಲೀ ಎಲ್ಲೂ ಕಾಣಲಿಲ್ಲ. 
4ನೇ ತರಗತಿಯ ಕನ್ನಡ ಕಲಿ-ನಲಿ ಪಠ್ಯಪುಸ್ತಕದಲ್ಲಿ “ಪುಟ್ಟ ಕೌಮುದಿ” ಎಂಬ ಪಾಠದಲ್ಲಿ ಗಾಂಧೀಜಿಯವರ ಒಂದು ಆದರ್ಶ ಗುಣದ ಬಗ್ಗೆ  ಕಿರು ಮಾಹಿತಿ ಇದ್ದರೂ ಅವರ ವೈಯಕ್ತಿಕ ಜೀವನದ ಪರಿಚಯ ಇಲ್ಲ. ಅಲ್ಲದೇ 5 ರಿಂದ 7ನೇ ತರಗತಿಯ ಪಠ್ಯಪುಸ್ತಕದಲ್ಲೂ ಸಹ ಗಾಂಧೀಜಿಯವರ ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಯಾವುದೇ ಪಾಠ ಇಲ್ಲ. ಒಮ್ಮೆಲೆ 8 ನೇ ತರಗತಿ ಕನ್ನಡ ಪಠ್ಯದಲ್ಲಿ ‘ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಎಂಬ ಪಾಠ ಇದ್ದು, ಅದರಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳುವ ಬಗೆಗಿನ ಚಿತ್ರಣವಿದೆ. ಆದರೆ ಅವರ ಬಾಲ್ಯ, ವಿದ್ಯಾಭ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಎನ್ನುವಂತಾಗಿದೆ. ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಹಂತಕ್ಕೆ ಬಂದರೂ ರಾಷ್ಟ್ರಪಿತನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಇಲ್ಲದಿರುವುದು ದುರದೃಷ್ಟವೇ ಸರಿ.
ನಾವು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಿನ ಪಠ್ಯಪುಸ್ತಕಗಳಲ್ಲಿ (3 ಅಥವಾ 4ನೇ ತರಗತಿ ಪಠ್ಯಗಳಲ್ಲೇ) ಗಾಂಧೀಜಿಯವರ ಬಾಲ್ಯ, ವಿದ್ಯಾಭ್ಯಾಸ, ಆದರ್ಶಗಳ ಬಗ್ಗೆ ಪಾಠಗಳಿರುತ್ತಿದ್ದವು. ಅವು ನಮಗೆಲ್ಲಾ ಸ್ಪೂರ್ತಿದಾಯಕ ಆಗಿರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳ ಪಠ್ಯಪುಸ್ತಕಗಳಲ್ಲಿ (1-7ನೇ ತರಗತಿವರೆಗೆ) ಗಾಂಧೀಜಿಯವರ ಬಗ್ಗೆ ಯಾವುದೇ ಪಾಠಗಳನ್ನು ಅಳವಡಿಸದೇ ಇರುವುದು ಖೇದಕರ ಸಂಗತಿಯಾಗಿದೆ. 
ಶಿಕ್ಷಕರಾದ ನಾವು ತರಗತಿ ವೇಳಾಪಟ್ಟಿ ತಯಾರಿಸುವಾಗ ನೀತಿ ಶಿಕ್ಷಣ, ಮೌಲ್ಯ ಶಿಕ್ಷಣಕ್ಕೆಂದು ನಿಗದಿತ ಅವಧಿಗಳನ್ನು ಹಂಚಿಕೆ ಮಾಡಿಕೊಂಡಿರುತ್ತೇವೆ. ಆದರೆ ಅನೇಕ ವೇಳೆ ಬೇರೆ ಬೇರೆ ಕಾರ್ಯಭಾರದ ಒತ್ತಡಗಳಿಂದಾಗಿ ಆ ಅವಧಿಗಳನ್ನು ಪಠ್ಯವಿಷಯ ಬೋಧಿಸಲೋ ಅಥವಾ ಇನ್ಯಾವುದಕ್ಕೋ ಬಳಸಿಕೊಳ್ಳುತ್ತೇವೆ. ಹಾಗಾಗಿ ಮಕ್ಕಳಿಗೆ ನೀತಿ/ಮೌಲ್ಯಗಳ ಪರಿಚಯ ಕಡಿಮೆಯಾಗುತ್ತಿದೆ.
ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳ, ಸಚ್ಛಾರಿತ್ರರ, ಸತ್ಪುರುಷರ ಜೀವನವನ್ನು ಬಿಂಬಿಸುವಂತಹ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡರೆ ವಿಷಯ ಬೋಧಿಸುವಾಗಲಾದರೂ ನೀತಿ/ಮೌಲ್ಯ, ತತ್ವಗಳನ್ನು ಮಕ್ಕಳಿಗೆ ತಿಳಿಸಬಹುದಲ್ಲವೇ? ಆ ಮೂಲಕವಾದರೂ ಮಕ್ಕಳು ಕೆಲವೊಂದಿಷ್ಟು ಮಾಹಾನ್ ಪುರುಷರ ಜೀವನ ಪರಿಚಯ ಮಾಡಿಕೊಳ್ಳುವರಲ್ಲವೇ? ಅಥವಾ ಕೇವಲ ಅವರ ಜನ್ಮದಿನ ಅಥವಾ ಪುಣ್ಯ ತಿಥಿಗಳಂದು ಮಾತ್ರ ಅವರ ನೆನಪು ಮಾಡಿಕೊಂಡರೇ ಸಾಕೇ? ಇನ್ನಾದರೂ ಪಠ್ಯಪುಸ್ತಕ ರಚನಾ ಸಮಿತಿ ಈ ಬಗ್ಗೆ ಗಮನ ಹರಿಸೀತೆ? ಕಾದುನೋಡಬೇಕಿದೆ.
ಟೀಚರ್’ ಆಗಸ್ಟ್ 2010
ಆರ್.ಬಿ.ಗುರುಬಸವರಾಜ

No comments:

Post a Comment