April 20, 2014

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಆತ್ಮೀಯರ ಆಹ್ವಾನದ ಮೇರೆಗೆ ತಾಲೂಕು ಮಟ್ಟದ ಬೋಧನೆ-ಕಲಿಕೋಪರಣಗಳ (ಟಿ.ಎಲ್.ಎಂ) ಮೇಳವೊಂದನ್ನು ವೀಕ್ಷಿಸಲು ಹೋಗಿದ್ದೆ. ಅಲ್ಲಿನ ಟಿ.ಎಲ್.ಎಂ.ಗಳು ನಿಜಕ್ಕೂ ಬಹಳ ಉತ್ತಮವಾಗಿದ್ದವು. ತಯಾರಿಸಿದ ಶಿಕ್ಷಕರು ಅತ್ಯಂತ ಕಾಳಜಿ ವಹಿಸಿ ಅವುಗಳನ್ನು ಜೋಡಿಸಿಟ್ಟಿದ್ದರು. ಅವುಗಳಲ್ಲಿ ಕೆಲವನ್ನು ತಾವೇ ಸ್ವತಃ ತಯಾರಿಸಿದ್ದರು. ಇನ್ನು ಕೆಲವನ್ನು ಬೇರೆಡೆಯಿಂದ ಸಂಗ್ರಹಿಸಿದ್ದರು. ಅವುಗಳನ್ನು ನೋಡಿದಾಗ ನಾವ್ಯಾಕೆ ವಿದ್ಯಾರ್ಥಿಗಳಾಗಬಾರದಿತ್ತು ಎಂದೆನಿಸಿತು.
ಅಮೂರ್ತ ಕಲ್ಪನೆಗಳನ್ನು ಮಕ್ಕಳಿಗೆ ಸುಲಭವಾಗಿ ಮೂರ್ತಗೊಳಿಸಲು ಟಿ.ಎಲ್.ಎಂ.ಗಳು ಬಹಳ ಪರಿಣಾಮಕಾರಿಯಾಗುತ್ತವೆ. ಶಿಕ್ಷಕರ ಶ್ರಮ ಕಡಿಮೆ ಮಾಡಿ ಮಕ್ಕಳ ಕಲಿಕೆ ಸರಳ, ಸುಗಮ, ಸಂತಸದಾಯಕ ಹಾಗೂ ಶಾಶ್ವತವಾಗಲು ಟಿ.ಎಲ್.ಎಂ.ಗಳು ಬಹಳ ಸಹಕಾರಿ.
ಈ ಪ್ರದರ್ಶನ ವೀಕ್ಷಿಸಿದ ನಂತರ ನನ್ನಲ್ಲಿ ಕೆಲವು ಪ್ರಶ್ನೆಗಳು ಉಧ್ಬವಿಸಿದವು. ಅವುಗಳಲ್ಲಿ ಮೊದಲನೆಯದು ಈ ಎಲ್ಲಾ ಟಿ.ಎಲ್.ಎಂ.ಗಳನ್ನು ತರಗತಿಯಲ್ಲಿ ಬಳಸಲು ಸಾಧ್ಯವೇ? ಎರಡನೆಯದು ನಿಜಕ್ಕೂ ಈ ಎಲ್ಲಾ ಟಿ.ಎಲ್.ಎಂ.ಗಳು ತರಗತಿಯಲ್ಲಿ ಬಳಕೆಯಾಗುತ್ತವೆಯಾ? ಈ ಎರಡೂ ಪ್ರಶ್ನೆಗಳು ನನ್ನನ್ನು ಗೊಂದಲಕ್ಕೀಡು ಮಾಡಿದವು.
ಮೊದಲನೆ ಪ್ರಶ್ನೆ ಕುರಿತು ವಿಶ್ಲೇಷಿಸುವುದಾದರೆ ಬಹುತೇಕ ಶಿಕ್ಷಕರು(ನನ್ನನ್ನೂ ಸೇರಿ) ಟಿ.ಎಲ್.ಎಂ.ಗಳನ್ನು ಬಳಸುತ್ತಿಲ್ಲ. ಇದಕ್ಕೆ ನಾವು ಹೇಳುವ ಕುಂಟು ನೆಪಗಳು ಅನೇಕ. ಅವೆಂದರೆ ಟಿ.ಎಲ್.ಎಂ.ಗಳ ಬಳಕೆಯಿಂದ ಪಾಠಗಳನ್ನು ನಿಗದಿತ ಅವಧಿಗೆ ಮುಗಿಸಲಾಗುವುದಿಲ್ಲ, ಬೇರೆ ಬೇರೆ ಕೆಲಸಗಳ ಒತ್ತಡದಿಂದ ಟಿ.ಎಲ್.ಎಂ.ಗಳನ್ನು ತಯಾರಿಸಲು ಆಗುತ್ತಿಲ್ಲ, ಎಷ್ಟೇ ಹೇಳಿದರೂ ಈ ಮಕ್ಕಳು ಕಲಿಯುವುದು ಅಷ್ಟಕಷ್ಟೇ. ಹೀಗೆ ನಾನಾ ಕಾರಣಗಳನ್ನು ಹೇಳುತ್ತೇವೆ.
ಎರಡನೇ ಪ್ರಶ್ನೆ ಕುರಿತು ವಿಶ್ಲೇಷಿಸುವುದಾದರೆ ಆ ಪ್ರದರ್ಶನದಲ್ಲಿದ್ದ ಬಹುತೇಕ ಟಿ.ಎಲ್.ಎಂ.ಗಳು ಕೇವಲ ಪ್ರದರ್ಶನಕ್ಕೆಂದು ತಯಾರಿಸಿದಂತಿದ್ದವು. ಹಾಗಾದರೆ ತರಗತಿಯಲ್ಲಿ ಬಳಸದೇ ಕೇವಲ ಪ್ರದರ್ಶನಕ್ಕೆಂದೋ ಅಥವಾ ಬೇರೆ ಯಾರಿಂದಲೋ ಶಭಾಷಗಿರಿ/ಪ್ರಶಸ್ತಿ ಗಿಟ್ಟಿಸುವುದಕ್ಕಾಗಿ ತಯಾರಿಸಿದ ಟಿ.ಎಲ್.ಎಂ.ಗಳು ನಿಜವಾದ ಟಿ.ಎಲ್.ಎಂ.ಗಳಾ? ಎಂಬುದು. 
ಆ ಪ್ರದರ್ಶನದ ಕೊನೆಗೆ ಇನ್ನೂ ಒಂದು ಮೋಜಿನ ಪ್ರಸಂಗ ನಡೆಯಿತು. ಅತ್ಯುತ್ತಮವಾದ ಟಿ.ಎಲ್.ಎಂ.ಗಳಿಗೆ ಪ್ರಥಮ ಸ್ಥಾನ ನೀಡಲಾಯಿತು. ಹೀಗೆ ಪ್ರಥಮ ಸ್ಥಾನ ಪಡೆದ ಶಿಕ್ಷಕರು ಟಿ.ಎಲ್.ಎಂ.ನಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಳ್ಳುವ ಬದಲು ಎಲ್.ಟಿ.ಎಂ.(ಎಡಗೈ ಹೆಬ್ಬೆರಳು)ನಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಂಡು ತಿರುಗಾಡಿದ್ದು ಆಯ್ಕೆ ಮಾಡಿದವರನ್ನು ಅಣಕಿಸುವಂತಿತ್ತು. ಹಾಗಾದರೆ ಟಿ.ಎಲ್.ಎಂ.ನ ಅರ್ಥ ಏನಾಯಿತು? ಸಿ.ಆರ್.ಸಿ, ಬಿ.ಆರ್.ಸಿ, ಡೈಯಟ್‍ಗಳು ಟಿ.ಎಲ್.ಎಂ. ತಯಾರಿಕೆ ಹಾಗೂ ಬಳಕೆ ಕುರಿತು ನಡೆಸಿದ ಕಾರ್ಯಾಗಾರಗಳ ಫಲವೇನಾಯಿತು? ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು.
ರಾಜ್ಯದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ(ಡಿ.ಪಿ.ಇ.ಪಿ) ಜಾರಿಗೆ ಬಂದ ನಂತರ ತರಗತಿಯಲ್ಲಿ ಚಟುವಟಿಕೆ ಆಧಾರಿತ ಬೋಧನೆ-ಕಲಿಕೆಗೆ ಒತ್ತು ನೀಡಲಾಯಿತು. ಅಂದಿನಿಂದ ಪಾಠೋಪಕರಣ ತಯಾರಿಕೆ ಮತ್ತು ಬಳಕೆಗಾಗಿ ಅನೇಕ ಹಂತದ ಕಾರ್ಯಾಗಾರಗಳು ನಡೆದವು. ಅದಕ್ಕಾಗಿ ಅನೇಕ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡವು. ಇಷ್ಟೆಲ್ಲಾ ಆದಾಗ್ಯೂ ನಾವು ಟಿ.ಎಲ್.ಎಂ.ಗಳನ್ನು ಇನ್ನೂ ಮೀನಮೇಷ ಎಣಿಸುತ್ತಿದೇವೆ. 
ಪ್ರಾಥಮಿಕ ಶಾಲೆಗಳಲ್ಲಿ ಅದರಲ್ಲೂ ಕಿರಿಯ ಪ್ರಾಥಮಿಕ ತರಗತಿಗಳಲ್ಲಿ ಮೂಲ ಸಾಮಥ್ರ್ಯದ ಕಲ್ಪನೆ ಮೂಡಿಸಲು ಟಿ.ಎಲ್.ಎಂ.ಗಳ ಬಳಕೆ ತೀರಾ ಅವಶ್ಯಕತೆ ಇದೆ ಎಂಬುದರ ಅರಿವು ನಮಗಿದ್ದರೂ ನಾವ್ಯಾಕೆ ಟಿ.ಎಲ್.ಎಂ.ಗಳನ್ನು ಸರಿಯಾಗಿ ಬಳಸುತ್ತಿಲ್ಲ? ಟಿ.ಎಲ್.ಎಂ. ತಯಾರಿಸಲೆಂದೇ ಇಲಾಖೆ ನೀಡಿದ ಹಣ ಕೇವಲ ದಾಖಲೆಗಳಲ್ಲಿ ಮಾತ್ರ ಬಳಕೆಯಾಯಿತೇ? ಹಾಗಾದರೆ ನಾವು ಎಡವಿದ್ದೆಲ್ಲಿ? ವ್ಯವಸ್ಥೆಯ ಲೋಪವೇ? ಅಥವಾ ನಾವಿನ್ನೂ ಆ ವ್ಯವಸ್ಥೆಗೆ ಹೊಂದಿಕೊಳ್ಳದಿರುವುದೇ? ಇಂತಹ ಪ್ರಶ್ನೆಗಳಿಗೆ ನಾವಿನ್ನೂ ಸೂಕ್ತ ಉತ್ತರ ಕಂಡುಕೊಳ್ಳಬೇಕಾಗಿದೆ.
ಎಲ್ಲಾ ಶಿಕ್ಷಕರು ಟಿ.ಎಲ್.ಎಂ.ಬಳಸುತ್ತಿಲ್ಲ ಎಂದರೆ ತಪ್ಪಾಗುತ್ತದೆ. ಕೆಲವು ಉತ್ಸಾಹಿ ಶಿಕ್ಷಕರು ತರಗತಿ ಕೋಣೆಗೆ ತೆರಳುವ ಮುನ್ನ ಅಗತ್ಯವಿರುವ ಟಿ.ಎಲ್.ಎಂ.ಗಳನ್ನು ಪೂರ್ವಯೋಜನೆಯಂತೆ ತಯಾರಿಸಿಕೊಂಡು ಆಸಕ್ತಿಯಿಂದ ಬಳಸುತ್ತಾರೆ. ಆದರೆ ಟಿ.ಎಲ್.ಎಂ.ಗಳನ್ನು ಎಲ್ಲರೂ ಸರಿಯಾಗಿ ಬಳಸುವಂತಾದರೆ ನಮ್ಮ ಶಿಕ್ಷಣದ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬಹುದಲ್ಲವೇ?

‘ಟೀಚರ್’ ಜನವರಿ 2009
ಆರ್.ಬಿ.ಗುರುಬಸವರಾಜ

No comments:

Post a Comment