April 28, 2014

ತಲೆಗೆಲ್ಲಾ ಒಂದೇ ಮಂತ್ರ!

ತಲೆಗೆಲ್ಲಾ ಒಂದೇ ಮಂತ್ರ!

ರಾಮರತ್ನಗಿರಿ ಎಂಬ ಪುಟ್ಟ ಊರು. ಅಲ್ಲಿ ಸೋಮಶೇಖರನೆಂಬ ಪಂಡಿತ ಹತ್ತಾರು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದ. ಸುತ್ತಲ ಗ್ರಾಮದ ಜನರು ತಮ್ಮ ಯಾವುದೇ ಕಾರ್ಯ ನೆರೆವೇರಿಸಲು ಮುಹೂರ್ತ ನಿಗದಿಗಾಗಿ ಆತನ ಬಳಿ ಬರುತ್ತಿದ್ದರು. ವಿಧವೆಯರು ತಮ್ಮ ಕೇಶಮುಂಡನ ಮಾಡಿಸಲು ಮುಹೂರ್ತ ನಿಗದಿಗಾಗಿ ಆತನ ಬಳಿ ಬರುತ್ತಿದ್ದರು. ಒಂದು ದಿನ ಒಬ್ಬ ವಿಧವೆ ತನ್ನ ಕೇಶಮುಂಡನ ಮಾಡಿಸಲು ಮುಹೂರ್ತ ನಿಗದಿಗಾಗಿ ಕೇಳಿದಾಗ ಪಂಡಿತರು ‘ಬರುವ ಭಾನುವಾರ’ ಎಂದು ಹೇಳಿದರು. ಆ ಮಹಿಳೆ ಹೊರಟು ಹೋದಳು. ನಂತರ ಇನ್ನೊಬ್ಬ ಮಹಿಳೆ ಮೈನೆರೆದ ತನ್ನ ಮಗಳ ಮೈನೆರೆದ ತನ್ನ ಮಗಳ ತಲೆಗೆ ನೀರು ಹಾಕಲು ಮುಹೂರ್ತ ಕೇಳಿದಳು. ಆಗಲೂ ಪಂಡಿದರು ‘ಬರುವ ಭಾನುವಾರ’ ಎಂದು ಹೇಳಿದರು. ಆಗ ಮಹಿಳೆ ‘ಇದೇನು ಪಂಡಿತರೇ, ಕೇಶಮುಂಡನೆಗೂ ಅದೇ ದಿನ, ತಲೆಗೆ ನೀರು ಹಾಕಲು ಅದೇ ದಿನವೇ?’ ಎಂದು ಕೇಳಲು ಪಂಡಿತರು “ತಲೆಗೆಲ್ಲಾ ಒಂದೇ ಮಂತ್ರ!” ಎಂದರು.

ಇಲ್ಲಿ ಈ ಕಥೆಯ ಔಚಿತ್ಯವೇನೆಂದರೆ ನಮ್ಮ ತರಗತಿ ಕೋಣೆಗಳಲ್ಲಿ ನಡೆಯುತ್ತಿರುವುದು ಇದೇ ಅಲ್ಲವೇ? ತರಗತಿಯಲ್ಲಿನ ಎಲ್ಲಾ ಮಕ್ಕಳಿಗೂ ಅದೇ ಪಾಠ, ಅದೇ ವಿಧಾನ, ಅದೇ ಚಟುವಟಿಕೆಗಳು. ಒಂದು ತರಗತಿಯೆಂದರೆ ಅದೊಂದು ‘ಪುಟ್ಟ ಪ್ರಪಂಚ’ ಇದ್ದಂತೆ ಎಂದು ನಾವು ಹೇಳುತ್ತೇವೆ. ಆ ಪ್ರಪಂಚದೊಳಗೆ ವಿವಿಧ ಕೌಟುಂಬಿಕ, ಸಾಮಾಜಿ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ ಹಿನ್ನಲೆಯುಳ್ಳ ಮಕ್ಕಳು ಇರುತ್ತಾರೆಂದು ನಾವು ಬಲ್ಲೆವು. ಅಲ್ಲದೇ ವಿವಿಧ ವಯೋಮಾನದ, ಬೌದ್ಧಿಕ ಹಾಗೂ ಮಾನಸಿಕ ಸ್ತರದ ಮಕ್ಕಳೂ ಅಲ್ಲಿರುತ್ತಾರೆ. ನಿಧಾನ, ವೇಗ ಮತ್ತು ಸಾಮಾನ್ಯ ಕಲಿಕೆಯ ಮಕ್ಕಳೂ ಅಲ್ಲಿರುತ್ತಾರೆ. ಅವರೆಲ್ಲರಿಗೂ ನಾವೂ ಏಕಪ್ರಕಾರದ ಬೋಧನೆ ಮಾಡುತ್ತೇವಲ್ಲವೇ?

ನಾವು ಮಾಡುವ ಬೋಧನೆ ಕೇವಲ ಯಾವುದಾದರೊಂದು ಗುಂಪಿನ ಮಕ್ಕಳಿಗೆ ಮಾತ್ರ ರುಚಿಸುತ್ತದೆ. ಇನ್ನುಳಿದ ಗುಂಪುಗಳ ಮಕ್ಕಳಿಗೆ ಅದೊಂದು ನೀರಸ ತರಗತಿಯೆನಿಸುತ್ತದೆ. ಬೋಧನೆ ನೀರಸವೆಂಬುದು ಮಕ್ಕಳಿಗೆ ಅರಿವಾದೊಡನೆ ಅವರು ತರಗತಿಯಲ್ಲಿ ಅಶಿಸ್ತಿನಿಂದ ವರ್ತಿಸಲು ತೊಡಗುತ್ತಾರೆ (ಅಶಿಸ್ತಿ ಎಂದರೆ ತರಗತಿಯಲ್ಲಿನ ಬೋಧನೆ, ಕಲಿಕೆಯ ವಾತಾವರಣವನ್ನು ಹಾಳು ಮಾಡುವುದು). ಆಗ ತರಗತಿ ನಿಭಾಯಿಸುವ ಶಿಕ್ಷಕರಿಗೆ ಕೋಪದ ಪಿತ್ತನೆತ್ತಿಗೇರಿ, ಅಶಿಸ್ತಿನಿಂದ  ವರ್ತಿಸಿದ ಮಕ್ಕಳು ಶಿಕ್ಷೆಗೊಳಗಾಗುತ್ತಾರೆ. ನಾವು ಮಕ್ಕಳ ಅಶಿಸ್ತಿಗೆ ಕಾರಣಗಳನ್ನು ಕಂಡು ಹಿಡಿಯದೇ ಅಂತಹ ಮಕ್ಕಳಿಗೆ ಶಿಕ್ಷೆ ವಿಧಿಸುತ್ತೇವೆ. ಇಲ್ಲಿ ನಾವು ಅನುಸರಿಸುತ್ತಿರುವುದು ಮೇಲಿನ ಕಥೆಯ ತಂತ್ರವಲ್ಲವೇ? ಈ ರೀತಿಯ ಸನ್ನಿವೇಶಗಳಲ್ಲಿ ವಾಸ್ತವವಾಗಿ ತಪ್ಪು ಯಾರದು? ಎಂಬುದೇ ಚರ್ಚಾಸ್ಪದ ಸಂಗತಿ.

ಮಕ್ಕಳದೇ ತಪ್ಪು ಎನ್ನುವುದಾದರೆ ‘ಮಗು ಕೇಂದ್ರಿತ ಶಿಕ್ಷಣ’ದ ಪರಿಕಲ್ಪನೆಗೆ ಅರ್ಥವೆಲ್ಲಿಯದು? ಶಿಕ್ಷಕರದೇ ತಪ್ಪು ಎನ್ನುವುದಾದರೆ ಶಿಕ್ಷಕರಿಗಿರುವ ಮಾನಸಿಕ ಒತ್ತಡಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಭಾರತ ಸಂವಿಧಾನದ 21 (ಎ) ವಿಧಿಯ ಪ್ರಕಾರ ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಅಲ್ಲದೇ ಏಪ್ರಿಲ್ 2010ರಿಂದ “ಶಿಕ್ಷಣ ಕಡ್ಡಾಯ ಹಕ್ಕು” ಎಂದು ಜಾರಿಯಲ್ಲಿದೆ. ಇದರನ್ವಯ ಶಿಕ್ಷಣವೆಂಬುದು ಸಂಪೂರ್ಣವಾಗಿ ‘ಮಗು ಕೇಂದ್ರಿತವಾಗಿರಬೇಕು’. ಪಠ್ಯಕ್ರಮ, ಪಠ್ಯವಸ್ತು, ಬೋಧನಾ ವಿಧಾನ, ಮೂಲಭೂತ ಸೌಲಭ್ಯಗಳು, ಇವೆಲ್ಲವೂ ಮಗು ಕೇಂದ್ರಿತವಾಗಿರಬೇಕು. ಅಲ್ಲದೇ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ವಿಧಿಸುವಂತಿಲ್ಲ ಎಂಬುದೂ ಸಹ ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯಲ್ಲಿದೆ.

ಹಾಗಾದರೆ ‘ಶಿಸ್ತು’ ಎಂದರೆ ನಾವೇನು ಭಾವಿಸಿಕೊಂಡಿದ್ದೇವೆ? ಎಂಬ ಪ್ರಶ್ನೆ ಮೂಡುತ್ತದೆ. ಅಂದವಾದ ಸಮವಸ್ತ್ರ, ಬೂಟು, ಟೈಗಳು ಶಿಸ್ತುನ್ನು ಪ್ರತಿನಿಧಿಸುತ್ತವೆಯೋ? ಅಥವಾ ಮಗುವಿನ ಆಂತರಿಕ ಮತ್ತು ಬಾಹ್ಯ ಚಟುವಟಿಕೆಗಳು ಶಿಸ್ತನ್ನು ಪ್ರತಿನಿಧಿಸುತ್ತವೆಯೋ? ಎಂಬುದೇ ಗೊಂದಲದ ಗೂಡಾಗಿದೆ.

ಇಂದು ನಾವು ಶಿಸ್ತಿನ ಹೆಸರಿನಲ್ಲಿ ಮಕ್ಕಳಿಗೆ ಶಿಕ್ಷೆ ವಿಧಿಸುತ್ತಿದ್ದೇವೆ. ಅದು ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು. “ಎಲ್ಲಾ ಮಕ್ಕಳೂ ಕಡ್ಡಾಯವಾಗಿ ಬೂಟು, ಟೈಗಳನ್ನು ಹಾಕಿಕೊಂಡು ಬರಬೇಕು. ಶಾಲೆಯಲ್ಲಿ ಅವುಗಳನ್ನು ಬಿಚ್ಚಬಾರದು” ಎಂಬಂತಹ ಅಘೋಷಿತ ಕಾಯ್ದೆಗಳು ಶಾಲೆಗಳಲ್ಲಿ ಜಾರಿಯಲ್ಲಿರುತ್ತದೆ. ಇದು ಎಷ್ಟೊಂದು ಸಮಂಜಸ. ಬೆಳಗ್ಗೆಯಿಂದ ಕುತ್ತಿಗೆಗೆ ಉರುಳಿನಂತೆ ಕಟ್ಟಿದ ಟೈ, ಗಾಳಿಯಾಡದಂತೆ ಹಾಕಿದ ಬೂಟುಗಳು ಮಗುವಿಗೆ ಹಿಂಸೆಯಲ್ಲವೇ? ಇದು ಶಿಸ್ತಿನ ಹೆಸರಿನ ಶಿಕ್ಷೆಯಲ್ಲವೇ?

ತರಗತಿಯಲ್ಲಿ ಮಕ್ಕಳು ಅಶಿಸ್ತಿನಿಂದ ವರ್ತಿಸುತ್ತಾರೆ ಎಂದ ಕಾರಣಕ್ಕಾಗಿ ಅವರಿಗೆ ದೈಹಿಕ ಅಥವಾ ಮಾನಸಿಕ ಶಿಕ್ಷೆ ವಿಧಿಸುತ್ತೇವೆ ಎಂದಾದರೂ ನಾವೂ ಮಕ್ಕಳ ಈ ರೀತಿಯ ವರ್ತನೆಗಳಿಗೆ ಕಾರಣಗಳೇನೆಂದು ಕಂಡುಕೊಂಡು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವಾ? ಅಥವಾ ಮಕ್ಕಳ ಆ ವರ್ತನೆಗಳಿಗೆ ಶಿಕ್ಷೆ ಹೊರತುಪಡಿಸಿ ಏನಾದರೂ ಪರ್ಯಾಯ ತಂತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆಯೋ? ಇಲ್ಲ! ಏಕೆಂದರೆ ನಾವಿನ್ನೂ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇವೆ. ‘ಶಿಕ್ಷೆ’ ವಿಧಿಸುವಾತನೇ ‘ಶಿಕ್ಷಕ’ ಎಂದು ಬಹುತೇಕರು ಭಾವಿಸಿಕೊಂಡಿದ್ದೇವೆ. ಆದರೆ ಈ ಭಾವನೆ ತಪ್ಪು ಎಂಬುದು ಅನೇಕರಿಗೆ ತಿಳಿದಿಲ್ಲ. ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ದಲ್ಲಿ ಬರುವ ಕೆಳಗಿನ ಶ್ಲೋಕವೊಂದನ್ನು ಬಹುತೇಕರು ಸರಿಯಾಗಿ ಅರ್ಥೈಸಿಕೊಂಡಿಲ್ಲ.

ಶಿ(ಶ್ಲಿ)ಕ್ಷಾಃ ಕ್ರಿಯಾಃ ಕಸ್ಯಚಿದಾತ್ಮ ಸಂಸ್ಥಾಃ
ಸಂಕ್ರಾಂತಿ ರನ್ಯಸ್ಯ ವಿಶೇಷಯುಕ್ತಾ
ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ
ಧುರೀ ಪ್ರತಿಷ್ಠಾಪಯೀತವ್ಯ ವವ
ಅಂದರೆ ವಿಶಿಷ್ಟಶಕ್ತಿ ಇದ್ದವರು ಮಾತ್ರ ವಿಶಿಷ್ಟ ಕ್ರಿಯೆಗಳನ್ನು ಇತರರಿಗೆ ದಾಟಿಸಬಲ್ಲರು. ಯಾರಲ್ಲಿ (ವಿಶಿಷ್ಟ ಶಕ್ತಿ ಹಾಗೂ ವಿಶಿಷ್ಟ ಕ್ರಿಯೆ) ಇರುತ್ತವೆಯೋ ಅವರು ಮಾತ್ರ ಪ್ರತಿಷ್ಟಿತ ಶಿಕ್ಷಕರಾಗಬಲ್ಲರು. ವಿಶಿಷ್ಟ ಕ್ರಿಯೆಗಳನ್ನು ತನ್ನಲ್ಲೇ ಇಟ್ಟುಕೊಳ್ಳುವವನು ಶಿಕ್ಷಕನೆನಿಸುತ್ತಾನೆ ಎಂಬುದೇ ಇದರರ್ಥ. ಇನ್ನೊಬ್ಬರಿಗೆ ದಾಟಿಸುವುದು ಎಂದರೆ ಮಕ್ಕಳಿಗೆ ಕಲಿಸುವುದು ಎಂದರ್ಥ. ಕಲಿಸುವುದು ಎಂದರೆ ಯಾವೂದಾದರೂ ಮಾರ್ಗದಿಂದಲ್ಲ. ಅದು ಮಗು ಒಪ್ಪಿತ ರೀತಿಯಲ್ಲಿ ಎಂದು ಅರ್ಥೈಸಿಕೊಳ್ಳಬೇಕು. ಸಾಮಾನ್ಯವಾಗಿ ಮಕ್ಕಳು ಶಿಕ್ಷೆಯನ್ನು ಹೊರತುಪಡಿಸಿ ಯಾವುದೇ ಮಾರ್ಗದಲ್ಲಾದರೂ ಸರಿಯೇ ಅದನ್ನು ಮಗುವಿಗೆ ದಾಟಿಸುವವನೇ ಪರಿಪೂರ್ಣ ಅಥವಾ ಶ್ರೇಷ್ಠ ಶಿಕ್ಷಕನೆನಿಸುತ್ತಾನೆ.

ಮಗುವಿನ ಮನಸ್ಸು ಹೂವಿನಂತೆ ಎಂದು ಹೇಳುವ ನಾವು ಆ ಹೂವು ಬಾಡದ ರೀತಿಯಲ್ಲಿ, ಅದರ ಪರಿಮಳವನ್ನು ಎಲ್ಲರೂ ಆಘ್ರಾಣಿಸುವಂತೆ ಮಾಡಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಇದು ಬಹು ಪ್ರಯಾಸದ ಕೆಲಸವಾದರೂ ಸಾಧಿಸಿ ತೋರಿಸುವ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ಇಲಾಖೆಯೂ ಸನ್ನದ್ಧವಾಗಬೇಕಾದ ಅನಿವಾರ್ಯತೆ ಇದೆ.

ಪ್ರತಿವರ್ಷ ಶಿಕ್ಷಕರಿಗೆ 10-20 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಬಹುತೇಕ ತರಬೇತಿಗಳು ಬೋಧನಾ ವಿಧಾನಗಳಿಗೆ ಸಂಬಂಧಿಸಿರುತ್ತವೆ. ಅದರ ಬದಲಾಗಿ ಮಕ್ಕಳ ಮನಃಶಾಸ್ತ್ರ ಅರಿಯುವಂತಹ, ಅದಕ್ಕೆ ತಕ್ಕದಾಗಿ ಸಿದ್ಧರಾಗುವಂತಹ ತರಬೇತಿ ನೀಡಿದರೆ ಒಳಿತು. ಏಕೆಂದರೆ ಸೇವಾಪೂರ್ವದಲ್ಲಿ ಅಭ್ಯಸಿಸಿದ ಮನಃಶಾಸ್ತ್ರ ಬಹುತೇಕ ಅಳಿಸಿ ಹೋಗಿರುತ್ತದೆ. ಮಕ್ಕಳ ಮನಃಶಾಸ್ತ್ರ ಅರಿಯುವ, ಅದಕ್ಕೆ ತಕ್ಕದಾಗಿ ವರ್ತಿಸುವಂತಹ, ಮಾನಸಿಕ ಸದೃಡತೆಯನ್ನು ಗಟ್ಟಿಗೊಳಿಸುವಂತಹ ತರಬೇತಿಗಳನ್ನು ನೀಡಿದಾಗ ಮಾತ್ರ ಶಿಕ್ಷೆ ಮುಕ್ತ ಶಿಸ್ತಿನ ಶಿಕ್ಷಣ ನೀಡ ಬಹುದಲ್ಲವೇ?

ಟೀಚರ್ ಸೆಪ್ಟಂಬರ್ 2010
- ಆರ್.ಬಿ.ಗುರುಬಸವರಾಜ

No comments:

Post a Comment